ಸ್ವಾಮೀಜಿಗಳು ಸ್ವಾಮೀಜಿಗಳ ಕೆಲಸವನ್ನಷ್ಟೇ ಮಾಡಲಿ: ಮೀಸಲಾತಿ ಹೋರಾಟದ ಬಗ್ಗೆ ಶಾಸಕ ಅಪ್ಪಚ್ಚು ರಂಜನ್

Update: 2021-02-12 14:45 GMT

ಮಡಿಕೇರಿ, ಫೆ.12: ಮೀಸಲಾತಿಯ ವಿಚಾರವನ್ನು ಮುಂದಿರಿಸಿಕೊಂಡು ಹೋರಾಟ ನಡೆಸುತ್ತಿರುವ ಸ್ವಾಮೀಜಿಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು, ಸ್ವಾಮೀಜಿಗಳು ಸ್ವಾಮೀಜಿಗಳ ಕೆಲಸವನ್ನಷ್ಟೇ ಮಾಡಲಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ವಾಮೀಜಿಗಳು ಸ್ವಾಮೀಜಿಗಳ ಕೆಲಸವನ್ನು ಮಾಡಬೇಕು. ಹೋರಾಟಗಳಲ್ಲಿ ಪಾಲ್ಗೊಂಡು ಬೀದಿಗಿಳಿಯುವುದು ಸರಿಯಲ್ಲ. ಸ್ವಾಮೀಜಿಗಳು ಎಲ್ಲರಿಗೂ ಸೇರಿದವರೇ ಹೊರತು ಆಯಾ ಜನಾಂಗಗಳಿಗೆ ಸೀಮಿತರಾದವರಲ್ಲ ಎಂದರು. 

ಶಾಲೆಗಳು, ಮಠಗಳನ್ನು ನಿರ್ವಹಣೆ ಮಾಡುತ್ತಾ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಸ್ವಾಮೀಜಿಗಳು ಎಲ್ಲರನ್ನೂ ನಮ್ಮ ಭಕ್ತರೆಂದು ಭಾವಿಸಬೇಕು. ಅದು ಬಿಟ್ಟು ಮೀಸಲಾತಿಗಾಗಿ ಹೋರಾಟ ನಡೆಸುವುದನ್ನು ತಾವು ಖಂಡಿಸುವುದಾಗಿ ತಿಳಿಸಿದರು.

‘ಮೀಸಲಾತಿ’ ವಿಚಾರವನ್ನು ಮುಂದಿರಿಸಿಕೊಂಡು ರಾಜ್ಯದ ಪ್ರಬಲ ಸಮುದಾಯಗಳು ಹೋರಾಟ ನಡೆಸುತ್ತಿದ್ದಾರೆ. ಹೀಗೆ ಮುಂದುವರಿದರೆ ಪರಿಸ್ಥಿತಿ ಏನಾಗಬಹುದು ಎಂದು ಪ್ರಶ್ನಿಸಿದ ಅಪ್ಪಚ್ಚು ರಂಜನ್, ಜನಾಂಗ ಜನಾಂಗಗಳ ನಡುವೆ ಒಡಕು ಮೂಡಬಹುದೆಂದು ಆತಂಕ ವ್ಯಕ್ತಪಡಿಸಿದರು.

ಮೀಸಲಾತಿಯನ್ನು ಹೆಚ್ಚು ಮಾಡುವುದು ಸರಿಯಾದ ಕ್ರಮವಲ್ಲ. ಸಣ್ಣ ಸಣ್ಣ ಜನಾಂಗಗಳಿಗೆ ಮೀಸಲಾತಿ ದೊರಕುವಂತಾಗಬೇಕು, ಕೊಡಗಿನ ಕೊಡವ ಸಮುದಾಯ ಕೂಡ ಎಸ್‍ಟಿ ಮೀಸಲಾತಿಗಾಗಿ ಆಗ್ರಹಿಸುತ್ತಿದೆ. ಒಂದು ಕುಟುಂಬಕ್ಕೆ ಒಮ್ಮೆ ಮಾತ್ರ ಮೀಸಲಾತಿ ದೊರಕಬೇಕು, ಉನ್ನತ ಹುದ್ದೆಯಲ್ಲಿರುವವರ ಮಕ್ಕಳಿಗೆ ಮೀಸಲಾತಿ ನೀಡಬಾರದು. ಯಾವುದೇ ಜನಾಂಗದಲ್ಲಿರುವ ಆರ್ಥಿಕವಾಗಿ ತೀರಾ ಹಿಂದುಳಿದಿರುವ ಬಡವರಿಗೆ ಮೀಸಲಾತಿಯ ಸೌಲಭ್ಯ ದೊರೆಯಬೇಕು. ಮೀಸಲಾತಿ ಪದ್ಧತಿ ಬದಲಾಗಬೇಕಾದ ಅನಿವಾರ್ಯತೆ ಇದ್ದು, ಈ ಬಗ್ಗೆ ಅಧಿವೇಶನದಲ್ಲೂ ಪ್ರಸ್ತಾಪಿಸುವುದಾಗಿ ಶಾಸಕರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News