ಜಾತಿ ಗಣತಿ ವರದಿ ಇನ್ನೂ ಸರಕಾರಕ್ಕೆ ಸಲ್ಲಿಕೆಯಾಗಿಲ್ಲ: ಹೈಕೋರ್ಟ್ ಗೆ ಸರಕಾರದ ಹೇಳಿಕೆ
ಬೆಂಗಳೂರು, ಫೆ.12: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಕೈಗೊಂಡಿದ್ದ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಯ ವರದಿ ಇನ್ನೂ ಸರಕಾರದ ಕೈ ಸೇರಿಲ್ಲ ಎಂದು ರಾಜ್ಯ ಸರಕಾರ ಹೈಕೋರ್ಟ್ ಗೆ ತಿಳಿಸಿದೆ.
2015ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸರಕಾರ, ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವತಿಯಿಂದ ನಡೆಸಿದ ಸಮೀಕ್ಷೆ ಪ್ರಶ್ನಿಸಿ ಬೀದರ್ ನ ಶಿವರಾಜ ಕಾನಶೆಟ್ಟಿ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಆಯೋಗದ ಪರ ವಾದಿಸಿದ ವಕೀಲರು, ಸಮೀಕ್ಷೆ ಪೂರ್ಣಗೊಂಡಿದೆ. ಅಂಕಿ-ಅಂಶಗಳ ಡಿಜಿಟಲೀಕರಣ ಸಹ ಮುಗಿದಿದೆ. ಕೆಲ ದಿನಗಳಿಂದ ಅಧ್ಯಕ್ಷ ಹುದ್ದೆ ಖಾಲಿ ಇತ್ತು. ಈಗ ಆಯೋಗಕ್ಕೆ ಹೊಸ ಅಧ್ಯಕ್ಷರು ನೇಮಕವಾಗಿದ್ದು, ಮುಂದಿನ ಪ್ರಕ್ರಿಯೆ ನಡೆಯಲಿದೆ ಎಂದು ಪೀಠಕ್ಕೆ ತಿಳಿಸಿದರು.
ಸರಕಾರದ ಪರ ವಾದಿಸಿದ ವಕೀಲರು, ಆಯೋಗ ಸಮೀಕ್ಷೆ ಪೂರ್ಣಗೊಳಿಸಿದೆ. ಈಗ ಆಯೋಗಕ್ಕೆ ಹೊಸ ಅಧ್ಯಕ್ಷರ ನೇಮಕ ಮಾಡಲಾಗಿದ್ದು, ವರದಿ ಸರಕಾರಕ್ಕೆ ಸಲ್ಲಿಕೆಯಾಗುವವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು, ವಿಚಾರಣೆಯನ್ನು ಮಾ.17ಕ್ಕೆ ಮುಂದೂಡಿತು.