ಕೆಲವು ಸಮುದಾಯಗಳ ಮೀಸಲಾತಿ ಹೋರಾಟದಲ್ಲಿ ಷಡ್ಯಂತ್ರ: ಸತೀಶ್ ಜಾರಕಿಹೊಳಿ

Update: 2021-02-12 17:15 GMT

ಬೆಳಗಾವಿ, ಫೆ.12: ರಾಜ್ಯದಲ್ಲಿ ಕೆಲವು ಸಮುದಾಯಗಳು ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟದಲ್ಲಿ ರಾಜಕೀಯ ವ್ಯಕ್ತಿಗಳ ಷಡ್ಯಂತ್ರ ಅಡಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಷಡ್ಯಂತ್ರದ ಭಾಗವಾಗಿರುವ ಮೀಸಲಾತಿ ಹೋರಾಟವು ಅರ್ಹವಾಗಿ ಮೀಸಲಾತಿ ಸಿಗಬೇಕಾದ ಸಮುದಾಯಗಳಿಗೆ ತೊಂದರೆ ಕೊಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಅಹಿಂದ ಸಮಾವೇಶ ಅಗತ್ಯವಿಲ್ಲ: ಕಾಂಗ್ರೆಸ್‍ನ ಮೂಲ ಸಿದ್ಧಾಂತವೇ ಅಹಿಂದ ವರ್ಗಗಳ ಅಭಿವೃದ್ಧಿಯಾಗಿದೆ. ಹೀಗಾಗಿ ಕಾಂಗ್ರೆಸ್ ನಾಯಕರಿಂದಲೇ ಪ್ರತ್ಯೇಕ ಅಹಿಂದ ಹೋರಾಟ ಅಗತ್ಯವಿಲ್ಲ. ಕಾಂಗ್ರೆಸ್ ಎಲ್ಲ ಸಮುದಾಯದವರನ್ನೂ ಒಳಗೊಂಡಿರುವ ಪಕ್ಷವಾಗಿದೆ ಎಂದು ಅವರು ಹೇಳಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿಯ ಆಯ್ಕೆಯ ಕುರಿತು ಸ್ಥಳೀಯ ಹಾಗೂ ರಾಜ್ಯಮಟ್ಟದ ನಾಯಕರು ಚರ್ಚಿಸಿದ್ದೇವೆ. ಕೆಲವು ಹೆಸರುಗಳನ್ನು ಹೈಕಮಾಂಡ್‍ಗೆ ಶಿಫಾರಸು ಮಾಡಿದ್ದೇವೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಬೆಳಗಾವಿ ಲೋಕಸಭಾಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್‍ನಿಂದ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡಿಸಬಹುದು. ಆದರೆ, ಅಂದೊಂದೆ ಮಾನದಂಡವಲ್ಲ. ಅಭ್ಯರ್ಥಿಯ ಆಸಕ್ತಿ, ನಿಲುವು ಸೇರಿದಂತೆ ಇನ್ನಿತರೆ ಮಾನದಂಡಗಳನ್ನು ಪರಿಗಣಿಸಲಾಗುತ್ತದೆ.

ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News