ನನ್ನದು ಕಾಂಗ್ರೆಸ್ ಸಿದ್ಧಾಂತ, ‘ಅಹಿಂದ’ ಸಿದ್ಧಾಂತದ ಬಗ್ಗೆ ನನಗೆ ಗೊತ್ತಿಲ್ಲ: ಮಲ್ಲಿಕಾರ್ಜುನ ಖರ್ಗೆ

Update: 2021-02-13 14:45 GMT

ಬೆಂಗಳೂರು, ಫೆ. 13: ನಾನು ಕಾಂಗ್ರೆಸ್ ಪಕ್ಷದಲ್ಲಿ ಐವತ್ತೈದು ವರ್ಷಗಳಿಂದ ಇದ್ದು, ನನಗೆ ಗೊತ್ತಿರುವುದು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಮಾತ್ರ. ನನಗೆ ‘ಅಹಿಂದ’ ಸಿದ್ಧಾಂತದ ಬಗ್ಗೆ ಗೊತ್ತಿಲ್ಲ ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ನೀತಿ, ತತ್ವ, ಸಿದ್ಧಾಂತಕ್ಕೆ ಬದ್ಧವಾಗಿದ್ದು ನೆಹರೂ, ಸಮಾಜವಾದ, ಅಂಬೇಡ್ಕರ್ ಸಂವಿಧಾನ ಹಾಗೂ ಇಂದಿರಾ ಗಾಂಧಿ ಬಡವರಿಗೆ ಕೊಟ್ಟ ಯೋಜನೆಗಳ ಮೇಲೆ ನಡೆದು ಬಂದಿದೆ. ಹೀಗಾಗಿ ಕಾಂಗ್ರೆಸ್ ಸಿದ್ಧಾಂತ ಬಿಟ್ಟು ಬೇರಾವ ಸಿದ್ಧಾಂತಗಳೂ ತನಗೆ ತಿಳಿದಿಲ್ಲ ಎಂದು ಹೇಳಿದರು.

ರಾಜ್ಯಸಭೆಯಲ್ಲಿ ವಿಪಕ್ಷಗಳನ್ನ ಒಗ್ಗಟ್ಟಾಗಿ ಕರೆದುಕೊಂಡು ಹೋಗುವುದು ಸವಾಲಿನ ಕೆಲಸ. ಈ ಹಿಂದೆ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ವಿಪಕ್ಷ ನಾಯಕನಾಗಿ ಕೆಲಸ ಮಾಡಿರುವ ಅನುಭವದ ಆಧಾರದ ಮೇಲೆ ವಿಪಕ್ಷಗಳನ್ನು ಮುನ್ನಡೆಸುವೆ ಎಂದ ಅವರು, ಮೂರು ಕೃಷಿ ಕಾನೂನುಗಳನ್ನು ತಡೆಗಟ್ಟಲು ಕೆಲಸ ಮಾಡಬೇಕಿದೆ ಎಂದರು.

ಎಐಸಿಸಿ ಮುಖಂಡ ರಾಹುಲ್ ಗಾಂಧಿ ಸಹಕಾರ ಹಾಗೂ ಬೆಂಬಲದಿಂದ ಈ ಅವಕಾಶ ಸಿಕ್ಕಿದ್ದು, ದೇಶದಲ್ಲಿ ತಾಂಡವವಾಡುತ್ತಿರುವ ಅನೇಕ ಸಮಸ್ಯೆಗಳನ್ನು ರಾಜ್ಯಸಭಾ ಸದಸ್ಯರು ಹಾಗೂ ಕಾಂಗ್ರೆಸ್ ನಾಯಕರ ಸಲಹೆ ಪಡೆದು ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ದೇಶದ ಹಿತದೃಷ್ಟಿಯಿಂದ ಎಲ್ಲರೂ ಒಗ್ಗೂಡುವುದು ಮುಖ್ಯ. ಹೀಗಾಗಿ, ಈಗಾಗಲೇ ಏಳೆಂಟು ನಾಯಕರ ಜೊತೆ ಮಾತನಾಡಿದ್ದು, ಎಲ್ಲ ಪಕ್ಷಗಳು ಸಹಕರಿಸಬೇಕು ಎಂದ ಖರ್ಗೆ, ರಾಜ್ಯಕ್ಕೆ ಬರಬೇಕಿರುವ ಜಿಎಸ್ಟಿ, ಪ್ರವಾಹ ಪರಿಹಾರ ಮೊತ್ತ, ರೈಲ್ವೆ ಯೋಜನೆಗಳ ಅನುಷ್ಟಾನಕ್ಕೆ ಬಿಜೆಪಿಯಿಂದ ರಾಜ್ಯ ಪ್ರತಿನಿಧಿಸುವ ಸಂಸದರು ಧ್ವನಿ ಎತ್ತಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News