ಮ್ಯಾನ್ಮಾರ್‌ನಲ್ಲಿ ಸರಕಾರಿ ಉದ್ಯೋಗಿಗಳ ಸಾಮೂಹಿಕ ಗೈರುಹಾಜರಿ: ಸೇನಾ ಸರಕಾರ ಕಂಗಾಲು

Update: 2021-02-13 16:09 GMT

ಯಾಂಗನ್ (ಮ್ಯಾನ್ಮಾರ್), ಫೆ. 13: ಮ್ಯಾನ್ಮಾರ್‌ನ ಸೇನಾ ಸರಕಾರದ ವಿರುದ್ಧ ಜನರ ಪ್ರತಿಭಟನೆ ದಿನಗಳೆದಂತೆ ತೀವ್ರಗೊಳ್ಳುತ್ತಿದೆ. ಸರಕಾರದ ಕಾರ್ಯನಿರ್ವಹಣೆಗೆ ಅವಕಾಶ ನೀಡದೆ ಅದನ್ನು ಅಸಹಾಯಕವನ್ನಾಗಿ ಮಾಡುವ ತಂತ್ರಗಾರಿಕೆಯನ್ನು ಪ್ರತಿಭಟನಕಾರು ಅಳವಡಿಸಿಕೊಂಡಿದ್ದಾರೆ.

ಸರಕಾರಕ್ಕೆ ಮಾನ್ಯತೆ ಮತ್ತು ಸಿಂಧುತ್ವ ಲಭಿಸದಂತೆ ನೋಡಿಕೊಳ್ಳುವುದು, ಮುಷ್ಕರಗಳನ್ನು ನಡೆಸುವ ಮೂಲಕ ಸರಕಾರ ಕಾರ್ಯನಿರ್ವಹಿಸದಂತೆ ತಡೆಯುವುದು ಹಾಗೂ ಅದರ ಹಣಕಾಸು ಮೂಲಗಳನ್ನು ಕಡಿದುಹಾಕುವುದು ಪ್ರತಿಭಟನಕಾರರ ತಂತ್ರಗಾರಿಕೆಯಾಗಿದೆ.

‘‘ಸರಕಾರದ ಎಲ್ಲ ಆಡಳಿತ ವ್ಯವಸ್ಥೆಗಳು ಕಾರ್ಯನಿರ್ವಹಿಸದಂತೆ ತಡೆಯುವ ಮೂಲಕ ಸೇನೆಯ ಅಧಿಕಾರವನ್ನು ಕಸಿದುಕೊಳ್ಳುವುದು ನಮ್ಮ ತಕ್ಷಣದ ಗುರಿಯಾಗಿದೆ’’ ಎಂದು ಪ್ರತಿಭಟನಕಾರರೊಬ್ಬರು ಹೇಳಿದರು.

ಫೆಬ್ರವರಿ 1ರಂದು ಕ್ಷಿಪ್ರಕ್ರಾಂತಿ ನಡೆಸಿ ಅಧಿಕಾರವನ್ನು ವಹಿಸಿಕೊಳ್ಳುವ ಮೂಲಕ, ಮ್ಯಾನ್ಮಾರ್‌ನ 10 ವರ್ಷಗಳ ಪ್ರಜಾಪ್ರಭುತ್ವದ ಪ್ರಯೋಗಕ್ಕೆ ಸೇನೆ ಅಂತ್ಯ ಹಾಡಿತ್ತು. ನಾಗರಿಕ ಸರಕಾರದ ಮುಖ್ಯಸ್ಥೆ ಆಂಗ್ ಸಾನ್ ಸೂ ಕಿ ಮತ್ತು ಅಧ್ಯಕ್ಷ ವಿನ್ ಮಿಂಟ್ ಸೇರಿದಂತೆ ಹಲವು ನಾಗರಿಕ ನಾಯಕರನ್ನು ಸೇನೆ ಬಂಧಿಸಿದೆ.

ಕ್ಷಿಪ್ರಕ್ರಾಂತಿಯ ಬೆನ್ನಿಗೇ ಮ್ಯಾನ್ಮಾರ್‌ನಲ್ಲಿ ನಾಗರಿಕ ಅಸಹಕಾರ ಆಂದೋಲನ ಆರಂಭಗೊಂಡಿದೆ ಹಾಗೂ ಅದಕ್ಕೆ ನಾಗರಿಕ ಸಮಾಜದಿಂದ ಭಾರೀ ಬೆಂಬಲ ವ್ಯಕ್ತವಾಗಿದೆ. ದೇಶಾದ್ಯಂತ ರೈಲುಗಳು ನಿಂತಿವೆ, ಆಸ್ಪತ್ರೆಗಳು ಮುಚ್ಚಿವೆ ಹಾಗೂ ರಾಜಧಾನಿ ನೇಪಿಡಾವ್‌ನಲ್ಲಿರುವ ಸರಕಾರಿ ಸಚಿವಾಲಯಗಳ ಉದ್ಯೋಗಿಗಳು ಸಾಮೂಹಿಕ ಗೈರುಹಾಜರಾಗುತ್ತಿದ್ದು ಸರಕಾರದ ಕಾರ್ಯನಿರ್ವಹಣೆಗೆ ಅಡ್ಡಿಯಾಗಿದೆ.

ನರ್ಸ್‌ಗಳು, ವೈದ್ಯರು, ವಕೀಲರು, ಶಿಕ್ಷಕರು, ಇಂಜಿನಿಯರ್‌ಗಳು, ರೈತರು, ರೈಲ್ವೇ ಸಿಬ್ಬಂದಿ, ಸರಕಾರಿ ಅಧಿಕಾರಿಗಳು ಮತ್ತು ಕಾರ್ಖಾನೆಗಳ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ತಮ್ಮ ಕೆಲಸಗಳಿಗೆ ಗೈರುಹಾಜರಾಗುತ್ತಿದ್ದಾರೆ. ಕೆಲವು ಪೊಲೀಸ್ ಅಧಿಕಾರಿಗಳೂ ತಮ್ಮ ನಿಷ್ಠೆಯನ್ನು ಬದಲಿಸಿ ಮುಷ್ಕರದಲ್ಲಿ ಭಾಗವಹಿಸಿದ್ದಾರೆ.

ಕರ್ತವಕ್ಕೆ ಮರಳಲು ಸೇನಾ ಮುಖ್ಯಸ್ಥ ಮನವಿ

ಕೆಲಸಕ್ಕೆ ಗೈರುಹಾಜರಾಗುವಂತೆ ‘ಕಾನೂನುಬಾಹಿರ’ ವ್ಯಕ್ತಿಗಳು ಸರಕಾರಿ ಉದ್ಯೋಗಿಗಳನ್ನು ಪ್ರಚೋದಿಸುತ್ತಿದ್ದಾರೆ ಎಂದು ಮ್ಯಾನ್ಮಾರ್ ಸೇನೆಯ ಮುಖ್ಯಸ್ಥ ಮಿನ್ ಆಂಗ್ ಹಲೈಂಗ್ ಸೇನೆಯ ಫೇಸ್‌ಬುಕ್ ಪುಟದಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ಹೇಳಿಕೊಂಡಿದ್ದಾರೆ.

‘‘ದೇಶ ಮತ್ತು ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಕರ್ತವ್ಯಗಳಿಗೆ ಗೈರುಹಾಜರಾಗಿರುವವರು ತಕ್ಷಣ ಹಾಜರಾಗಬೇಕು ಎಂದು ವಿನಂತಿಸಲಾಗಿದೆ’’ ಎಂದು ಅವರು ಹೇಳಿದ್ದಾರೆ.

ಸೇನೆಯ ಆದಾಯದ ಬುಡಕ್ಕೇ ಕಲ್ಲು

ಸೇನೆಯ ಬೃಹತ್ ವ್ಯಾಪಾರ ಸಾಮ್ರಾಜ್ಯದ ಮೇಲೂ ಜನರ ಪ್ರತಿಭಟನೆ ಪರಿಣಾಮ ಬೀರಿವೆ. ಉತ್ತರದ ಸಗೈಂಗ್ ವಲಯದಲ್ಲಿ ಸೇನೆ ಮತ್ತು ಚೀನಾ ಕಂಪೆನಿಯೊಂದರ ಜಂಟಿ ಒಡೆತನದಲ್ಲಿರುವ ತಾಮ್ರದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ 2,000ಕ್ಕೂ ಅಧಿಕ ಮಂದಿ ಹೊರನಡೆದಿದ್ದು, ಅಲ್ಲಿನ ಕೆಲಸ ಸ್ಥಗಿತಗೊಂಡಿದೆ.

ಸೇನೆಯ ಆಂಶಿಕ ಒಡೆತನದಲ್ಲಿರುವ ಟೆಲಿಕಾಮ್ ಕಂಪೆನಿ ಮೈಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಇಂಜಿನಿಯರ್‌ಗಳು ಮತ್ತು ಇತರ ಸಿಬ್ಬಂದಿ ಗೈರುಹಾಜರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News