ಕೋವಿಡ್ ಬಗೆಗಿನ ನಕಾರಾತ್ಮಕ ಅಂಶಗಳು ನಿವಾರಿಸಬೇಕಿದೆ: ಸಚಿವ ಸುರೇಶ್‍ ಕುಮಾರ್

Update: 2021-02-14 13:34 GMT

ಬೆಂಗಳೂರು, ಫೆ. 14: ಕೋವಿಡ್ ಬಗ್ಗೆ ನಕಾರಾತ್ಮಕ ಅಂಶಗಳೇ ಹೆಚ್ಚು ಹರಿದಾಡುತ್ತರಿವೆ. ಕಳೆದ ವರ್ಷವಿಡಿ ಕೋವಿಡ್‍ಗೆ ಯಾವಾಗ ಲಸಿಕೆ ಬರುತ್ತದೆ ಎಂಬ ಪ್ರಶ್ನೆ ಸಾಮಾನ್ಯವಾಗಿತ್ತು. ಈಗ ಲಸಿಕೆ ಬಂದರೆ ಕೆಲವರು ಅದನ್ನು ಯಾಕೆ ತೆಗೆದುಕೊಳ್ಳಬೇಕೆಂದು ಪ್ರಶ್ನಿಸಲಾರಂಭಿಸಿದ್ದಾರೆ ಎಂದು ಶಿಕ್ಷಣ ಸಚಿವ ಸುರೇಶ್‍ ಕುಮಾರ್ ವಿಷಾದಿಸಿದ್ದಾರೆ.

ರವಿವಾರ ಸಮನ್ವಿತ ಪ್ರಕಾಶನವು ನಗರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಎನ್. ಶಶಿಧರ್ ಅವರ ‘ಮೋದಿ ಮೋಡಿಯ ಜಾಡು’, ಡಿ.ಎಸ್.ಶ್ರೀನಿವಾಸ ಪ್ರಸಾದ್ ಅವರ ‘ಸ್ವರ ರಾಗ ಸುಧಾ’ ಹಾಗೂ ಕ್ಷಮಾ ವಿ.ಭಾನುಪ್ರಕಾಶ್ ಅವರ ‘ವಿಜ್ಞಾನ ಲೋಕದ ಜ್ಞಾನ ಕುಸುಮಗಳು’ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕೋವಿಡ್ ಕಾಯಿಲೆ ಕಾಣಿಸಿಕೊಂಡ ಬಳಿಕ ಸದಾ ನಕಾರಾತ್ಮಕ ಅಂಶಗಳೇ ನಮ್ಮನ್ನು ಕಾಡಲಾರಂಭಿಸಿವೆ. ಎಲ್ಲರನ್ನೂ ಸಂಶಯದಿಂದ ನೋಡುವ ಮನೋಭಾವ ಬೆಳೆಯುತ್ತಿದೆ. ಹೀಗಾಗಿ ಈ ಸಂದರ್ಭದಲ್ಲಿ ನಾವೆಲ್ಲರೂ ಸಕಾರಾತ್ಮಕ ಅಂಶಗಳನ್ನು ಬಿತ್ತುವ ಕೆಲಸಗಳಲ್ಲಿ ತೊಡಗಬೇಕಿದೆ ಎಂದು ಅವರು ತಿಳಿಸಿದ್ದಾರೆ.

ರಂಗಕರ್ಮಿ ಎಸ್.ಎನ್. ಸೇತುರಾಮ್ ಮಾತನಾಡಿ, ಭಾರತವು ತರ್ಕಗಳ ದೇಶವಲ್ಲ. ಬದಲಾಗಿ ಪ್ರಜ್ಞೆಗಳ ದೇಶವಾಗಿದೆ. ಇದರಿಂದಾಗಿಯೇ ನಮಗೆ ಶೂನ್ಯ ಮೊದಲು ಅರ್ಥವಾಗಿದೆ. ಆ ಪ್ರಜ್ಞೆಯೇ ಸತ್ಯ ಮತ್ತು ಸುಳ್ಳನ್ನು ಗುರುತಿಸುತ್ತದೆ’ ಎಂದು ತಿಳಿಸಿದರು.

ಲೇಖಕ ಡಿ.ಎಸ್. ಶ್ರೀನಿವಾಸ ಪ್ರಸಾದ್, ಸಂಗೀತ ಎನ್ನುವುದು ಎಲ್ಲ ಕಡೆಯಲ್ಲಿಯೂ ಇದೆ. ಅದನ್ನು ಆಸ್ವಾದಿಸುವ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಒಂದೊಂದು ರಾಗಕ್ಕೂ ಒಂದೊಂದು ಮಹತ್ವವಿದೆ ಎಂದು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಮನ್ವಿತ ಪ್ರಕಾಶನದ ರಾಧಾಕೃಷ್ಣ, ಲೇಖಕಾರದ ಶಿಶಿಧರ್, ಕ್ಷಮಾ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News