24 ಗಂಟೆಗಳಲ್ಲಿ ಕಾಂಗ್ರೆಸ್‍ನ ಐವರು ಶಾಸಕರಿಂದ ರಾಜೀನಾಮೆ ಕೊಡಿಸಬಲ್ಲೆ: ರಮೇಶ್ ಜಾರಕಿಹೊಳಿ

Update: 2021-02-14 14:40 GMT

ಬೆಳಗಾವಿ, ಫೆ.14: ತಾನು ಮನಸ್ಸು ಮಾಡಿದರೆ 24 ಗಂಟೆಯೊಳಗೆ ಕಾಂಗ್ರೆಸ್ ಪಕ್ಷದ ಮಹಾನ್ ಐದು ಶಾಸಕರಿಂದ ರಾಜೀನಾಮೆ ಕೊಡಿಸಿ ಬಿಜೆಪಿಗೆ ಕರೆ ತರುತ್ತೇನೆ. ಅವರ ಹೆಸರುಗಳನ್ನು ಹೇಳಿದರೆ ನೀವು ಶಾಕ್ ಆಗುತ್ತೀರಾ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ರವಿವಾರ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯ್ಕೆಯಾಗಿರುವ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗಾಗಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಈ ಬಾರಿ ಗೆದ್ದಿರುವ ಬಿಜೆಪಿ ಬೆಂಬಲಿತ ಸದಸ್ಯರ ಸಂಖ್ಯೆ, ಮುಂದಿನ ಚುನಾವಣೆಯಲ್ಲಿ ದ್ವಿಗುಣವಾಗಬೇಕು. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲ ಅರಳಬೇಕು. ಅದಕ್ಕಾಗಿ, ಎಲ್ಲರೂ ಸಂಘಟಿತ ಹೋರಾಟ ಮಾಡಬೇಕಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದಿಗೂ ನಮ್ಮ ನಾಯಕರು. ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ನಾನು ಅವರ ಜೊತೆ ಮಾತನಾಡುತ್ತೇನೆ. ಆದರೆ, ಪಕ್ಷ ಅಂತ ಬಂದಾಗ ನಾವು ಅಪ್ಪಟ ಬಿಜೆಪಿಯವರು. ಕಾಂಗ್ರೆಸ್ ನಲ್ಲಿ 20 ವರ್ಷ ನನ್ನನ್ನು ಮೂಲೆಯಲ್ಲಿ ಕೂರಿಸಿದ್ದರು. ಆದರೆ, ಬಿಜೆಪಿಯಲ್ಲಿ ಅಮಿತ್ ಶಾನಿಂದ ಯಡಿಯೂರಪ್ಪವರೆಗೆ ಎಲ್ಲರೂ ಕರೆದು ಪ್ರೀತಿಯಿಂದ ಮಾತನಾಡಿಸುತ್ತಾರೆ. ನಾವು ಎಲ್ಲ 17 ಶಾಸಕರೂ ಇಲ್ಲೇ ಇರುತ್ತೇವೆ ಎಂದು ಅವರು ಹೇಳಿದರು.

ಇದೇ ವೇಳೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದ ರಮೇಶ್ ಜಾರಕಿಹೊಳಿ, ರಾಜಕಾರಣದಲ್ಲಿ ಅನುಭವ ಇರಬೇಕು. ಏನಾದರೂ ಮಾತನಾಡುವಾಗ ಏನು ಮಾತನಾಡುತ್ತಿದ್ದೇವೆ ಎಂಬುದರ ಬಗ್ಗೆ ಅರಿವು ಇರಬೇಕು. ಇಲ್ಲದಿದ್ದರೆ ಕಷ್ಟ ಆಗುತ್ತೆ ಎಂದರು.

ಹೆಣ್ಣು ಮಗಳಿದ್ದೀರಿ, ದೇವರು ನಿಮಗೆ ಒಳ್ಳೆಯದು ಮಾಡಲಿ. ಆದರೆ, ರಾಜಕಾರಣದ ವಿಚಾರದಲ್ಲಿ ಅವರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸುವುದೇ ನಮ್ಮ ಗುರಿಯಾಗಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News