ಕುಶಾಲನಗರ: ದಲಿತ ವಿದ್ಯಾರ್ಥಿಗೆ ಶಾಲಾ ಪ್ರವೇಶ ನಿರಾಕರಿಸಿದ ಖಾಸಗಿ ವಿದ್ಯಾ ಸಂಸ್ಥೆ; ಆರೋಪ

Update: 2021-02-14 15:20 GMT

ಕುಶಾಲನಗರ, ಫೆ14: ಖಾಸಗಿ ವಿದ್ಯಾ ಸಂಸ್ಥೆಯೊಂದು ದಲಿತ ವಿದ್ಯಾರ್ಥಿಯ ಶಾಲಾ ಪ್ರವೇಶವನ್ನು ನಿರಾಕರಿಸಿದೆ ಎನ್ನಲಾಗಿದ್ದು, ಈ ಹಿನ್ನೆಲೆ ದಲಿತ ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿ ವತಿಯಿಂದ ಇಲ್ಲಿನ ಕೊಪ್ಪ ಗ್ರಾ.ಪಂನ ಗಿರಗೂರು ಗ್ರಾಮದಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಯುತ್ತಿದೆ.

ಪ್ರತಿಭಟನೆಯು ರವಿವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ದಲಿತ ವಿದ್ಯಾರ್ಥಿಯ ಶಾಲಾ ಪ್ರವೇಶಕ್ಕಾಗಿ ಆಗ್ರಹಿಸಿ ದಲಿತ ಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿವೆ. ಸ್ಥಳಕ್ಕೆ ಪಿರಿಯಾಪಟ್ಟಣ ತಾಲೂಕು ತಹಶೀಲ್ದಾರ್ ಭೇಟಿ ನೀಡಿ, ಪ್ರತಿಭಟನಾಕಾರರ ಅಹವಾಲನ್ನು ಆಲಿಸಿದರು.

ಕೊಪ್ಪ ಗ್ರಾ.ಪಂ ಅಧ್ಯಕ್ಷ ರೇಣುಕಾಸ್ವಾಮಿ ಹಾಗೂ ತಾ.ಪಂ ಸದಸ್ಯ ಐಲಾಪುರ ರಾಮು ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಲಿದ್ದು, ವಿದ್ಯಾರ್ಥಿಯ ಶಾಲಾ ಪ್ರವೇಶವನ್ನು ಸ್ವೀಕರಿಸುವವರೆಗೂ ಪ್ರತಿಭಟನೆ ನಡೆಸಲಾಗುವುದು ಎಂದು ಪಟ್ಟು ಹಿಡಿದಿದ್ದಾರೆ.

ಈ ಸಂದರ್ಭ ಮಾತನಾಡಿದ ಕೊಪ್ಪ ಗ್ರಾ.ಪಂ ಅಧ್ಯಕ್ಷ ರೇಣುಕಾಸ್ವಾಮಿ, ಮಿಳಿಂದಾ ವಿದ್ಯಾ ಸಂಸ್ಥೆಯು ದಲಿತ ವಿದ್ಯಾರ್ಥಿಯ ಶಾಲಾ ಪ್ರವೇಶವನ್ನು ನಿರಾಕರಿಸಿದ ಹಿನ್ನಲೆ ಅನಿರ್ಧಿಷ್ಟಾವಧಿ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಯು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಶಾಲಾ ಪ್ರವೇಶವನ್ನು ಪಡೆಯುವವರೆಗೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಚಾಮರಾಯನ ಕೋಟೆಯ ಜಗದೀಶ್, ಗೋಪಾಲ್, ಗೋಪಾಲ್ ಕೃಷ್ಣ, ಶಿವಣ್ಣ, ಶಿವರಾಜು, ತಾಲೂಕು ಭೀಂ ಆರ್ಮಿ ಅಧ್ಯಕ್ಷ ಗಿರೀಶ್, ಕೊಪ್ಪ ಗ್ರಾ.ಪಂ ಸದಸ್ಯರು ಹಾಗೂ ಮೂವತ್ತಕ್ಕೂ ಹೆಚ್ಚು ಪ್ರತಿಭಟನಾಕಾರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News