ಪೂರ್ಣಪ್ರಮಾಣದಲ್ಲಿ ಪ್ರಾರಂಭವಾಗದ ಶಾಲೆ: ವಿದ್ಯಾರ್ಥಿಗಳಲ್ಲಿ ಭಾಷೆ, ಗಣಿತ ಕಲಿಕೆ ಸಾಮರ್ಥ್ಯ ಕುಸಿತ- ವರದಿ

Update: 2021-02-14 16:24 GMT

ಬೆಂಗಳೂರು, ಫೆ.14: ಕೋವಿಡ್‍ನಿಂದಾಗಿ ರಾಜ್ಯದಲ್ಲಿ ಪೂರ್ಣಪ್ರಮಾಣದಲ್ಲಿ ಶಾಲೆಗಳು ಪ್ರಾರಂಭವಾಗದ ಹಿನ್ನೆಲೆ ವಿದ್ಯಾರ್ಥೀಗಳಲ್ಲಿ ಭಾಷೆ ಹಾಗೂ ಗಣಿತದಲ್ಲಿ ಕಲಿಕೆಯ ಸಾಮರ್ಥ್ಯ ಕುಸಿದಿದೆ ಎಂದು ಅಝೀಂ ಪ್ರೇಮ್‍ಜಿ ಫೌಂಡೇಶನ್ ಸಂಶೋಧನೆಯ ವರದಿಯಲ್ಲಿ ತಿಳಿದು ಬಂದಿದೆ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಆತಂತ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಲ್ಲಾ ವರ್ಗಗಳಲ್ಲಿ ಸರಾಸರಿ ಶೇ.92ರಷ್ಟು ಮಕ್ಕಳು ಹಿಂದಿನ ವರ್ಷಕ್ಕಿಂತ ಕನಿಷ್ಠ ಒಂದು ನಿರ್ದಿಷ್ಟ ಭಾಷಾ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ. ಹಾಗೂ ಶೇ.82ರಷ್ಟು ಗಣಿತ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆಂದು ವರದಿಯಲ್ಲಿ ಉಲ್ಲೇಖವಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಬಹುತೇಕ ಶಿಕ್ಷಕರು ಶಾಲೆಗಳನ್ನು ವ್ಯವಸ್ಥಿತವಾಗಿ ಪ್ರಾರಂಭವಾಗುವಂತೆ ಮಾಡಿ ಮಕ್ಕಳು ಆದಷ್ಟು ಬೇಗ ಶಾಲೆಗೆ ಬರಬೇಕೆಂದು ಬಯಸಿದ್ದರು. ಇದನ್ನು ಶಿಕ್ಷಕರು ಹಲವು ಬಾರಿ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ಸರಕಾರ ಮಾತ್ರ ಪೂರ್ಣ ಪ್ರಮಾಣದಲ್ಲಿ ಶಾಲಾ ಆರಂಭಕ್ಕೆ ಹಿಂದೇಟು ಹಾಕುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಭೌತಿಕ ತರಗತಿ ಕಲಿಕೆಗೆ ಯಾವುದೇ ಪರ್ಯಾಯಗಳಿಲ್ಲ. ಅಲ್ಲಿ ವಿದ್ಯಾರ್ಥಿಗಳು ಗುಂಪುಗಳಲ್ಲಿ ಕೆಲಸ ಮಾಡುತ್ತಾರೆ. ಮತ್ತು ಅವರ ಕಲಿಕೆಯ ಪ್ರಕ್ರಿಯೆಯು ಅನುಕೂಲಕರ ವಾತಾವರಣದಲ್ಲಿ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಒಂದನೇ ತರಗತಿಯಿಂದಲೇ ಶಾಲೆಗಳನ್ನು ತೆರೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.

ಒಂದರಿಂದ 5 ತರಗತಿಗಳನ್ನು ನಿರ್ಲಕ್ಷಿಸುವುದರಿಂದ ಮುಂದಿನ ದಶಕದಲ್ಲಿ ತಳಸಮುದಾಯ ವಿದ್ಯಾರ್ಥಿಗಳಿಂದ ಶಾಲೆಗಳಿಂದ ಹೊರಗುಳಿಯುವ ಸಾಧ್ಯತೆಗಳು ಹೆಚ್ಚಿವೆ. ಇದು ಅತ್ಯಂತ ವಿನಾಶಕಾರಿ ಬೆಳವಣಿಯಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಒಂದನೇ ತರಗತಿಯಿಂದ ಎಲ್ಲ ಹಂತದ ತರಗತಿಗಳನ್ನು ಪೂರ್ಣಾವಧಿ ಆರಂಭಿಸುವಂತೆ ಅಝೀಂ ಪ್ರೇಮ್ಜಿ ವಿವಿ ಪ್ರಾಧ್ಯಾಪಕರಾದ ರಿಷಿಕೇಶ್, ಅಮ್ಮನ್ ಮದನ್, ರಾಜೇಂದ್ರನ್ ನಾರಾಯಣ್, ವೈದ್ಯಕೀಯ ತಜ್ಞ ಡಾ.ಶ್ರೀನಿವಾಸ ಕಕ್ಕಿಲಾಯ, ಪಿಯುಸಿಎಲ್‍ನ ವೈ.ಜೆ. ರಾಜೇಂದ್ರ, ಬಿ.ಶ್ರೀಪಾದ್ ಭಟ್ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು ಆಗ್ರಹಿಸಿದ್ದಾರೆ.

ಕೋವಿಡ್ ಪ್ರಕರಣಗಳಲ್ಲಿ ಯಾವುದೇ ಹೆಚ್ಚಳವು ಇಡೀ ರಾಜ್ಯದಾದ್ಯಂತ ವರದಿಯಾಗಿಲ್ಲ. ಕೋವಿಡ್ ಚಿಕ್ಕ ಮಕ್ಕಳ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ ಎಂಬುದು ಅಂಗೀಕರಿಸಲ್ಪಟ್ಟ ಸಾರ್ವತ್ರಿಕ ವೈದ್ಯಕೀಯ ಸಂಗತಿಯಾಗಿದೆ . ಸರಕಾರ 1ರಿಂದ 5ನೇ ತರಗತಿಗಳನ್ನು ತೆರೆಯದಿರಲು ಯಾವುದೇ ಮುಚ್ಚಿಡಲು ವೈದ್ಯಕೀಯ ಕಾರಣಗಳು ಇರಲಾರದು. ಬೇರೆ ಕಾರಣವಿದ್ದರೆ ಅದನ್ನು ಸರಕಾರ ಬಹಿರಂಗಪಡಿಸಬೇಕು.

-ಪ್ರೊ.ನಿರಂಜನಾರಾಧ್ಯ, ಶಿಕ್ಷಣ ತಜ್ಞ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News