ಮಿತಿ ಮೀರಿ ಮಾದಕ ದ್ರವ್ಯ ಸೇವನೆಯಿಂದ 2,300ಕ್ಕೂ ಅಧಿಕ ಜನರ ಸಾವು: ಎನ್‌ಸಿಆರ್‌ಬಿ ದತ್ತಾಂಶ

Update: 2021-02-14 18:26 GMT

ಹೊಸದಿಲ್ಲಿ, ಫೆ. 14: ಭಾರತದಲ್ಲಿ ಮಿತಿಮೀರಿ ಮಾದಕ ದ್ರವ್ಯ ಸೇವನೆಯಿಂದ 2017ರಿಂದ 2019ರ ವರೆಗೆ 2,300ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಇವರಲ್ಲಿ ಅತ್ಯಧಿಕ ಜನರು 30ರಿಂದ 45 ವರ್ಷ ವಯೋಮಾನದವರು ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ (ಎನ್‌ಸಿಆರ್‌ಬಿ) ದತ್ತಾಂಶ ಹೇಳಿದೆ.

ಮಿತಿ ಮೀರಿ ಮಾದಕ ದ್ರವ್ಯ ಸೇವನೆಯಿಂದ 2017ರಲ್ಲಿ ಒಟ್ಟು 745, 2018ರಲ್ಲಿ 875 ಹಾಗೂ 2019ರಲ್ಲಿ 704 ಜನರು ಸಾವನ್ನಪ್ಪಿದ್ದಾರೆ. ರಾಜಸ್ಥಾನದಲ್ಲಿ ಅತಿ ಹೆಚ್ಚು 338 ಸಾವು ವರದಿಯಾಗಿದೆ. ಅನಂತರ ಕರ್ನಾಟಕದಲ್ಲಿ 239 ಹಾಗೂ ಉತ್ತರಪ್ರದೇಶದಲ್ಲಿ 236 ಸಾವು ದಾಖಲಾಗಿದೆ ಎಂದು ವರದಿ ಹೇಳಿದೆ.

ಮಿತಿ ಮೀರಿ ಮಾದಕ ದ್ರವ್ಯ ಸೇವನೆಯಿಂದ 14 ವಯೋಮಾನಕ್ಕಿಂತ ಕೆಳಗಿನ 55ಕ್ಕೂ ಅಧಿಕ ಮಕ್ಕಳು, 14ರಿಂದ 18 ವಯೋಮಾನದ 70 ಮಕ್ಕಳು ಸಾವನ್ನಪ್ಪಿದ್ದಾರೆ. 18ರಿಂದ 30 ವಯೋಮಾನದ ಒಟ್ಟು 624 ಜನರು ಹಾಗೂ 45ರಿಂದ 60ರ ವಯೋಮಾನದ 550 ಜನರು ಮೃತಪಟ್ಟಿದ್ದಾರೆ. 60 ಹಾಗೂ ಅದಕ್ಕಿಂತ ಹೆಚ್ಚಿನ ವಯೋಮಾನದ 241 ಜನರು ಸಾವನ್ನಪ್ಪಿದ್ದಾರೆ ಎಂದು ದತ್ತಾಂಶ ಹೇಳಿದೆ.

ಮಾದಕ ದ್ರವ್ಯ ಬಳಕೆ ನಿಯಂತ್ರಿಸಲು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯ ಮಾದಕ ದ್ರವ್ಯದಿಂದ ಹೆಚ್ಚು ಪೀಡಿತವಾಗಿರುವ 272 ಜಿಲ್ಲೆಗಳಲ್ಲಿ ‘ನಶೆ ಮುಕ್ತ ಭಾರತ ಅಭಿಯಾನ’ (ಎನ್‌ಎಂಬಿಎ)ವನ್ನು ಇತ್ತೀಚೆಗೆ ಆರಂಭಿಸಿದೆ. ಈ ಯೋಜನೆ ಮಾದಕ ದ್ರವ್ಯ ಬ್ಯೂರೊದ ಪ್ರಯತ್ನ, ಔಟ್‌ರೀಚ್, ಸಾಮಾಜಿಕ ನ್ಯಾಯ ಸಚಿವಾಲಯದಿಂದ ಜಾಗೃತಿ ಹಾಗೂ ಆರೋಗ್ಯ ಇಲಾಖೆಯ ಮೂಲಕ ಚಿಕಿತ್ಸೆಯನ್ನು ಒಳಗೊಂಡ ಮೂರು ಆಯಾಮವನ್ನು ಹೊಂದಿದೆ. ಎನ್‌ಎಂಬಿಎಯನ್ನು ಇನ್ನಷ್ಟು ಸಬಲಗೊಳಿಸಲಾಗುವುದು ಹಾಗೂ ‘ಮಾದಕ ದ್ರವ್ಯ ಬೇಡಿಕೆ ಕಡಿಮೆ ಮಾಡಲು ರಾಷ್ಟ್ರೀಯ ಕ್ರಿಯಾ ಯೋಜನೆ’ (ಎನ್‌ಎಪಿಡಿಡಿಆರ್) ಅಡಿಯಲ್ಲಿ ಮುಂದುವರಿಸಲಾಗುವುದು. ಈ ಯೋಜನೆ ಅಡಿಯಲ್ಲಿ ಮಾದಕ ದ್ರವ್ಯ ಸೇವಿಸುವವರ ವಿರುದ್ಧ ಸಾಮುದಾಯಿಕ ಸಂಘಟಕರನ್ನಾಗಿ 272 ಜಿಲ್ಲೆಗಳಲ್ಲಿ 13,000 ಯುವ ಸ್ವಯಂ ಸೇವಕರನ್ನು ತರಬೇತುಗೊಳಿಸಲಾಗುವುದು ಎಂದು ಎನ್‌ಎಂಬಿಎಯ ಹಿರಿಯ ಅಧಿಕಾರಿ ಹೇಳಿದ್ದಾರೆ.

ಎನ್‌ಎಪಿಡಿಡಿಆರ್‌ನಿಂದ 2021-22ರ ಹಣಕಾಸು ವರ್ಷದಲ್ಲಿ ಸುಮಾರು 11.80 ಲಕ್ಷ ಜನರು ಉಪಯೋಗ ಪಡೆದುಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News