ಟಿವಿ, ಫ್ರಿಡ್ಜ್, ವಾಹನ ಇದ್ದರೆ ಪಡಿತರ ಚೀಟಿ ರದ್ದಾಗಲಿದೆಯೇ ?: ಸಚಿವ ಉಮೇಶ್ ಕತ್ತಿ ಹೇಳಿದ್ದು ಹೀಗೆ...

Update: 2021-02-15 11:56 GMT

ಬೆಂಗಳೂರು, ಫೆ. 15: ‘ಪಡಿತರ ಚೀಟಿದಾರ ಚೀಟಿ ವಿತರಣೆಗೆ ಯಾವುದೇ ಮಾನದಂಡಗಳನ್ನು ಬದಲಾವಣೆ ಮಾಡಿಲ್ಲ. ಈ ಹಿಂದೆಯೇ ಇದ್ದ ಮಾನದಂಡಗಳನ್ನೇ ಮುಂದುವರಿಸಲಾಗುವುದು' ಎಂದು ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಉಮೇಶ್ ಕತ್ತಿ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ಈ ಸಂಬಂಧ ಸ್ಪಷ್ಟನೆ ನೀಡಿರುವ ಸಚಿವ ಉಮೇಶ್ ಕತ್ತಿ, ‘ನಾನು ಆಹಾರ ಸಚಿವನಾದ ಬಳಿಕ ಪಡಿತರ ಚೀಟಿ ವಿತರಣೆ ಸಂಬಂಧ ಯಾವುದೇ ತಿದ್ದುಪಡಿ ಮಾಡಿಲ್ಲ. ಮುಂದೆಯೂ ಯಾವುದೇ ತಿದ್ದುಪಡಿ ಮಾಡುವುದಿಲ್ಲ. ಹಿಂದಿನಿಂದಲೂ ಜಾರಿಯಲ್ಲಿರುವ ಮಾನದಂಡಗಳನ್ನೇ ಮುಂದುವರಿಸುತ್ತೇವೆ' ಎಂದು ಹೇಳಿದ್ದಾರೆ.

‘ಟಿವಿ, ಫ್ರಿಡ್ಜ್, ವಾಹನ ಹೊಂದಿರುವವರಿಗೆ, ಐದು ಎಕರೆಗಿಂತ ಹೆಚ್ಚಿನ ಭೂಮಿ ಹೊಂದಿರುವವರ ಪಡಿತರ ಚೀಟಿ ಸ್ಥಗಿತಗೊಳಿಸಲಾಗುವುದು' ಎಂದು ಉಮೇಶ್ ಕತ್ತಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದಕ್ಕೆ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಸೇರಿದಂತೆ ಹಲವು ಶಾಸಕರು, ಕಾಂಗ್ರೆಸ್ ಪಕ್ಷ ತೀವ್ರ ವಿರೋಧಪಡಿಸಿದ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ.

‘ಪಡಿತರ ಚೀಟಿ ವಿತರಣೆ ಸಂಬಂಧ ಹಿಂದಿನ ಸರಕಾರಗಳು ಆದೇಶಗಳನ್ನು ಹೊರಡಿಸಿರುತ್ತವೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅಥವಾ ನಾನು ಸಚಿವನಾದ ಬಳಿಕ ಆಹಾರ ಇಲಾಖೆ ಆದೇಶಗಳಲ್ಲಿ ಯಾವುದೇ ತಿದ್ದುಪಡಿ ಮಾಡಿರುವುದಿಲ್ಲ' ಎಂದು ಉಮೇಶ್ ಕತ್ತಿ ಸ್ಪಷ್ಟನೆ ನೀಡಿದ್ದಾರೆ.

‘ಬಿಪಿಎಲ್ ಕಾರ್ಡ್ ಪಡೆಯಲು ಇರುವ ಮಾನದಂಡಗಳನ್ನು ಉಲ್ಲಂಘಿಸಿ ಹೆಚ್ಚಿನ ಸಂಖ್ಯೆಯ ಕುಟುಂಬಗಳು ಅನಧಿಕೃತವಾಗಿ ಬಿಪಿಎಲ್ ಕಾರ್ಡ್ ಪಡೆದಿರುವುದು ಸರಕಾರಕ್ಕೆ ಗಮನಕ್ಕೆ ಬಂದಿರುತ್ತದೆ. ಅಂತಹ ಕುಟುಂಬಗಳು 2021ರ ಮಾರ್ಚ್ 31ರ ಒಳಗಾಗಿ ಸ್ವಯಂ ಪ್ರೇರಿತವಾಗಿ ಸರಕಾರಕ್ಕೆ ಹಿಂದಿರುಗಿಸಬೇಕು ಎಂದು ಮನವಿ ಮಾಡಿದ್ದೇನೆ. ಒಂದು ವೇಳೆ ಕಾಲಾವಧಿಯೊಳಗೆ ಕಾರ್ಡ್ ಹಿಂದಿರುಗಿಸದಿದ್ದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ' ಎಂದು ಕತ್ತಿ ತಿಳಿಸಿದ್ದಾರೆ.

‘ಸಾಮಾನ್ಯವಾಗಿ ಟಿವಿ, ಫ್ರಿಡ್ಜ್ ಹಾಗೂ ದ್ವಿಚಕ್ರ ವಾಹನ ಎಲ್ಲರ ಮನೆಯಲ್ಲೂ ಇರುತ್ತದೆ. ಸಾಲ ಮಾಡಿ ಟಿ.ವಿ. ಫ್ರಿಡ್ಜ್ ಮತ್ತು ವಾಹನಗಳನ್ನು ಖರೀದಿಸಿ ತಮ್ಮ ಅಗತ್ಯಗಳಿಗೆ ಬಳಕೆ ಮಾಡುತ್ತಾರೆ. ಸರಕಾರದ ಯೋಜನೆಗಳು ಜನರಿಗೆ ತಲುಪಿಸಲು ಟಿವಿ ಅಗತ್ಯ. ಟಿವಿ ಇರಬಾರದು ಎಂಬ ನಿಯಮ ಸರಿಯಲ್ಲ. ಆರ್ಥಿಕ ಮಾನದಂಡಗಳನ್ನು ಆಧರಿಸಿ ಪಡಿತರ ಚೀಟಿ ವಿತರಣೆ ಮಾಡಬೇಕು' ಎಂದು ಶಾಸಕ ಸೋಮಶೇಖರ ರೆಡ್ಡಿ ಆಕ್ಷೇಪಿಸಿದ್ದರು.

ಇಲಾಖೆ ಮನೆ ಮನೆ ಸಮೀಕ್ಷೆ ನಡೆಸಿದರೆ ನಕಲಿ ಬಿಪಿಎಲ್ ಪಡಿತರ ಚೀಟಿದಾರರನ್ನು ಪತ್ತೆ ಮಾಡಬಹುದು. ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚೆಯಾಗಿರುವುದು ಗೊತ್ತಿಲ್ಲ. ಇಂತಹ ನಿಯಮಗಳ ವಿರುದ್ಧ ಹೋರಾಟ ಮಾಡುತ್ತೇವೆ. ನಾವು ಬಿಜೆಪಿಯವರಾದರೂ ಜನರ ಪರವಾಗಿ ಹೋರಾಟ ಮಾಡುತ್ತೇವೆ ಎಂದು ಸೋಮಶೇಖರ ರೆಡ್ಡಿ ಎಚ್ಚರಿಕೆ ನೀಡಿದರು.

ಸಚಿವರು ಸೇರಿದಂತೆ ಯಾರೇ ಆಗಲಿ ಸ್ವಂತ ನಿರ್ಧಾರಗಳನ್ನು ಜನರ ಮೇಲೆ ಹೇರಬಾರದು. ಸ್ವಂತ ನಿರ್ಧಾರಗಳು ತೆಗೆದುಕೊಂಡರೆ ಈ ರೀತಿಯಾಗುತ್ತದೆ. ಮುಖ್ಯಮಂತ್ರಿ ಗಮನಕ್ಕೆ ತರದೆ ನಿರ್ಧಾರ ಕೈಗೊಂಡರೆ ತಪ್ಪಾಗುತ್ತದೆ. ಸಚಿವರ ನಿರ್ಧಾರ ಬಡವರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅವರು ತಮ್ಮ ತೀರ್ಮಾನವನ್ನು ಹಿಂಪಡೆಬೇಕು ಎಂದು ಸೋಮಶೇಖರ ರೆಡ್ಡಿ ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News