ಸರಕಾರದ ಮೇಲೆ ಅವಲಂಬಿಸದೆ ರಾಮ ಮಂದಿರ ನಿರ್ಮಿಸೋಣ: ಡಿ.ವಿ.ಸದಾನಂದಗೌಡ

Update: 2021-02-15 14:10 GMT

ಬೆಂಗಳೂರು, ಫೆ.15: ಸರಕಾರಗಳ ಮೇಲೆ ಅವಲಂಬಿಸದೆ, ಪ್ರತಿಯೊಬ್ಬರು ಕೊಡುಗೆ ನೀಡುವ ಮೂಲಕ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳೋಣ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ಸೋಮವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರಾಮ ಮಂದಿರ ನಿಮಾರ್ಣಕ್ಕೆ ಸಂಗ್ರಹಿಸಲ್ಪಟ್ಟ 5 ಲಕ್ಷ ರೂ. ಮೊತ್ತ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಂದಿರ ನಿರ್ಮಾಣ ವಿಚಾರದಲ್ಲಿ ಸರಕಾರದ ಮೇಲಿನ ಅವಲಂಬನೆ ಇರಬಾರದು. ಬದಲಾಗಿ, ಪ್ರತಿಯೊಬ್ಬರ ಕೊಡುಗೆ ಇರಬೇಕೆಂದು ಈ ದೇಶದ ಪರಂಪರೆಗಳಿಗೆ ಹೊಸ ಆಯಾಮ ನೀಡುವ ಕಾರ್ಯ ಇದಾಗಿದ್ದು, ಹೋರಾಟದ ಮೂಲದಿಂದಲೇ ರಾಮಮಂದಿರ ನಿರ್ಮಾಣದ ಕಾರ್ಯ ಆಗುತ್ತಿದೆ ಎಂದರು.

ನೌಕರರ ವರ್ಗದವರು ವಿಶೇಷವಾಗಿ ತಮ್ಮ ಶ್ರಮದಿಂದ ಗಳಿಸಿದ ಹಣವನ್ನು ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ನೀಡುತ್ತಿರುವುದು ಸಂತಸ ತಂದಿದೆ. ಅಲ್ಲದೆ, ಶ್ರೀಮಂತರು ನೀಡುವ ಹಣಕ್ಕಿಂತ ದುಡಿಯುವ ಜೀವಿಗಳು ನೀಡುವ ದೇಣಿಗೆ ಮಹತ್ವದ್ದು ಎಂದು ನುಡಿದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ, ಆಯುಕ್ತ ಮಂಜುನಾಥ ಪ್ರಸಾದ್, ಬಿಜೆಪಿ ಮುಖಂಡರಾದ ಎನ್.ಆರ್.ರಮೇಶ್, ಹರೀಶ್, ಸಂಘದ ಅಧ್ಯಕ್ಷ ಅಮೃತ್‍ರಾಜ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News