ಸರ್ಕಾರ, ನ್ಯಾಯಾಲಯ ಕಾರ್ಪೊರೇಟ್ ಕಂಪನಿಗಳ ಪರವಾಗಿ ಇರಬಾರದು: ಕುಮಾರಸ್ವಾಮಿ

Update: 2021-02-15 14:20 GMT

ಶಿವಮೊಗ್ಗ, ಫೆ.15: ಬಿಪಿಎಲ್ ಕಾರ್ಡ್ ಮಾನದಂಡ ಕುರಿತಾಗಿ ಆಹಾರ ಸಚಿವರು ನೀಡಿದ ಹೇಳಿಕೆ ಬಾಲಿಶವಾಗಿದೆ. ಇದು ಜನವಿರೋಧಿ ನಿರ್ಧಾರ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5 ಎಕರೆ ಜಮೀನು, ಮನೆಯಲ್ಲಿ ಟಿವಿ, ಫ್ರಿಡ್ಜ್ ಇದ್ದವರು ಬಿಪಿಎಲ್ ಕಾರ್ಡ್ ವಾಪಸ್ ಕೊಡುವಂತೆ ಹೇಳಿರುವುದು ಜನವಿರೋಧಿ ನೀತಿಯಾಗಿದೆ. 5 ಎಕರೆ ಜಮೀನು ಹೊಂದಿದ ರೈತರ ಪರಿಸ್ಥಿತಿ ಹೇಗಿದೆ ಎನ್ನುವುದು ಆಹಾರ ಸಚಿವರಿಗೆ ಗೊತ್ತಿದೆಯೇ? ಅವರಿಗೆ ಏನಾದರರೂ ಪರಿಜ್ಞಾನ ಇದೆಯೇ? ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಬ್ಬು ಬೆಳೆಗಾರರಿಗೆ ಬಾಕಿ ಹಣ ನೀಡದೇ ಟೋಪಿ ಹಾಕಿರುವ ಸಚಿವರಿಂದ ಬೇರೆ ಏನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಬಿಪಿಎಲ್ ಪಡಿತರ ಕಾರ್ಡ್ ವಾಪಸ್ ಪಡೆಯುವ ಇಂತಹ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಬಡವರ ಕಾರ್ಡ್ ರದ್ದು ಮಾಡುವುದಕ್ಕಾಗಿ ಈ ಸರ್ಕಾರ ಬರಬೇಕಿತ್ತಾ ? ಇದು ಬಿಜೆಪಿ ಸರ್ಕಾರವಲ್ಲ. ಬಿಎಸ್ವೈ ಕುಟುಂಬದ ಸರ್ಕಾರ ಎಂದು ಅವರ ಪಕ್ಷದವರೇ ಹೇಳುತ್ತಿದ್ದಾರೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಕೋರ್ಟ್ ವ್ಯವಸ್ಥೆ ಬಗ್ಗೆ ನೀಡಿದ ಹೇಳಿಕೆ ಗಮನಿಸಿದರೆ ಈಗಿನ ವ್ಯವಸ್ಥೆ ಹೇಗಿದೆ ಎಂದು ತಿಳಿದುಕೊಳ್ಳಬಹುದು. ಕಾರ್ಪೊರೇಟ್ ಕಂಪನಿಗಳ ಪರವಾಗಿ ಈ ಸರ್ಕಾರ, ನ್ಯಾಯಾಲಯ ಇರಬಾರದು ಎಂದರು.

ರಾಜ್ಯದ ಸಂಪತ್ತು ದುರ್ಬಳಕೆ ಆಗುತ್ತಿದೆ ಎಂದು ಹೇಳಿದ ನನ್ನ ವಿರುದ್ಧವೇ ಕೇಸ್ ಹಾಕಿದ್ದರು. ಅತಿವೃಷ್ಟಿಯಲ್ಲಿ ಹಣ ಪಡೆಯಲು ಮುಂದೆ ಬರುತ್ತಿಲ್ಲ ಎಂದು ಸಚಿವರೇ ಹೇಳುತ್ತಿದ್ದಾರೆ ಎಂದರೆ ಹೇಗಿದೆ ಆಡಳಿತ ನೀವೇ ಊಹಿಸಿ. ಶಿವಮೊಗ್ಗದ ಅಭಿವೃದ್ಧಿ ಆಗಿಲ್ಲ. ಬಂದ ಹಣ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿದರು.

ಕಳೆದ ಬಜೆಟ್ ನ ಹಣ ಎಲ್ಲಿ ಹೋಯಿತು? ಶಿಕಾರಿಪುರ ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿದ್ದು ನಾನು. ತೆರಿಗೆ ಹಣ ದುರ್ಬಳಕೆಯಾಗುತ್ತಿದೆ. ಈ ಸರ್ಕಾರ ಹಳಿ ತಪ್ಪಿದೆ. ಮೀಸಲಾತಿ ಕೂಗು ಎಲ್ಲಾ ಜಾತಿಗಳಲ್ಲೂ ಕೇಳಿ ಬರುತ್ತಿದೆ. ಎಲ್ಲಿ ಜಾತಿಗಳ ಮದ್ಯೆ ಸಂಘರ್ಷವಾಗುತ್ತೋ ಎಂಬ ಆತಂಕವಿದೆ ಎಂದರು.

ಪಕ್ಷದ ಸಂಘಟನೆ ನಡೆದಿದೆ. ಪಕ್ಷದ ಸಿದ್ದಾಂತಗಳ ನಡುವೆ ಯಾವುದೇ ಪಕ್ಷದ ಆಸರೆ ಇಲ್ಲದೆ ನಡೆಯುತ್ತಿದೆ. ಇದಕ್ಕಾಗಿ ರಾಜ್ಯ ಪ್ರವಾಸ ಕೂಡ ಮಾಡುವೆ. ಯಾವ ಪಕ್ಷದ ಜೊತೆಯೂ ಸೇರುವುದಿಲ್ಲ. ವಿಧಾನ ಪರಿಷತ್ ಸಭಾಧ್ಯಕ್ಷ ಅಯ್ಕೆ ಸಂದರ್ಭದಲ್ಲಿ ಮಾತ್ರ ಬಿಜೆಪಿ ಜೊತೆ ಹೊಂದಾಣಿಕೆ, ವಿನಃ ಬೇರೆ ಬೇರೆ ವಿಷಯಕ್ಕೂ ಇಲ್ಲ ಎಂದು ತಿಳಿಸಿದರು.

ಕೃಷಿ ಕಾಯ್ದೆಯಲ್ಲಿ ಬದಲಾವಣೆ ತರಬೇಕು ಎಂದು ಹೇಳಿದವನು ನಾನೇ. ವಿಷಯಧಾರಿತ ಬೆಂಬಲ ಅಷ್ಟೆ. ಜನಪರ ತೀರ್ಮಾನಗಳಿಗೆ ಮಾತ್ರ ನಮ್ಮ ಬೆಂಬಲವಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳ ವಿರುದ್ಧ ನಾವು ಅಂತರ ಕಾಯ್ದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ಉಪ ಚುನಾವಣೆಗಳಲ್ಲಿ ಮೂರು ಕ್ಷೇತ್ರದಲ್ಲಿ ನಾವು ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇವೆ. ರಾಮಮಂದಿರಕ್ಕೆ ಹಣ ಕೊಡದೇ ಇರುವ ಮನೆಗಳ ಮಾರ್ಕ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮುಕ್ತವಾಗಿ ಮಾತಾಡಲು ಆಗುತ್ತಿಲ್ಲ. ದೆಹಲಿಯಲ್ಲಿ ಹೋರಾಟ ನಿರತ ರೈತರ ಜೊತೆ ಮಾತುಕತೆ ಅಗತ್ಯವಾಗಿದೆ. 30 ಜಿಲ್ಲೆಗಳ ಪಕ್ಷದ ಹೊಸ ಪದಾಧಿಕಾರಿಗಳು ನೇಮಕ ಮಾಡಲಾಗುವುದು. ಮಧು ಬಂಗಾರಪ್ಪ ಜೊತೆ ಚೆನ್ನಾಗಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಭೋಜೇಗೌಡ, ಎಂ. ಶ್ರೀಕಾಂತ್, ನಾಗರಾಜ್ ಕಂಕಾರಿ ಮೊದಲಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News