ಬಿಎಸ್‌ವೈ ಮುಕ್ತವಾಗಿ ಕೆಲಸ ಮಾಡಲು ಅವರ ಕುಟುಂಬದವರೇ ಬಿಡುತ್ತಿಲ್ಲ: ಶಾಸಕ ಯತ್ನಾಳ್ ಆರೋಪ

Update: 2021-02-15 14:38 GMT

ವಿಜಯಪುರ, ಫೆ. 15: ‘ಮುಖ್ಯಮಂತ್ರಿ ಯಡಿಯೂರಪ್ಪನವರು ಮುಕ್ತವಾಗಿ ಕೆಲಸ ಮಾಡಲು ಅವರ ಪುತ್ರ ಬಿ.ವೈ.ವಿಜಯೇಂದ್ರ ಬಿಡುತ್ತಿಲ್ಲ. ಸಿಎಂ ಯಡಿಯೂರಪ್ಪನವರ ಹೆಸರನ್ನು ಕೆಡಿಸುತ್ತಿರುವವರು ಅವರ ಕುಟುಂಬದವರೇ ಹೊರತು, ಹೊರಗಿನವರ್ಯಾರು ಅಲ್ಲ' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಡಳಿತದಲ್ಲಿ ವಿಜಯೇಂದ್ರ ಹಸ್ತಕ್ಷೇಪದಿಂದಲೇ ಮಂತ್ರಿಗಳು ಬದಲಾಗಿದ್ದಾರೆ. ವಿಜಯೇಂದ್ರ ಕೈ-ಕಾಲು ಒತ್ತುವವರಿಗೆ, ರಾತ್ರಿ ವ್ಯವಸ್ಥೆ ಮಾಡುವವರಿಗೆ ನಿಗಮ-ಮಂಡಳಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಆದರೆ, ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ತಮಗೆ ಆಗದವರ ವಿರುದ್ಧ ಅಪಪ್ರಚಾರ ನಡೆಸಲು ವಿಜಯೇಂದ್ರ ಬಳಿ ನಕಲಿ ಸಿಡಿ ತಯಾರಿಸುವ ದೊಡ್ಡ ಕೇಂದ್ರವೇ ಇದೆ. ಯಡಿಯೂರಪ್ಪ ಕುಟುಂಬ ಇತ್ತೀಚೆಗೆ ಮಾರಿಷಸ್‍ಗೆ ವಿಮಾನದಲ್ಲಿ ಹೋಗಿದ್ದು ಏಕೆ? ಅಲ್ಲಿ ಏನು ಹಣದ ವ್ಯವಹಾರವಿದೆ. ರಾಜ್ಯದ ಜನರಿಗೆ ಇದು ತಿಳಿಯಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದರು.

ಯಡಿಯೂರಪ್ಪನವರ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಸಿಎಂ ಅವರನ್ನು ಹಿಡಿದಿಟ್ಟುಕೊಂಡಿದ್ದಾರೆ. ಯಡಿಯೂರಪ್ಪ ಪ್ರತಿಪಕ್ಷ ನಾಯಕರಾಗಿದ್ದಾಗ ಅವರ ನಿವಾಸದಲ್ಲಿ ಯಾರೂ ಇರುತ್ತಿರಲಿಲ್ಲ. ಅಡುಗೆ ಮಾಡುವವ ಮತ್ತೊಬ್ಬ ಮಾತ್ರ ಆಗ ಇರುತ್ತಿದ್ದರು. ಈಗ ಸಿಎಂ ಆದ ನಂತರ ಅವರ ಇಡೀ ಕುಟುಂಬ ಬಂದು ಅವರ ನಿವಾಸ ಸೇರಿಬಿಟ್ಟಿದೆ. ಯಡಿಯೂರಪ್ಪ ಸಂಪೂರ್ಣವಾಗಿ ಬದಲಾಗಿದ್ದಾರೆ. ವಿಶೇಷವಾಗಿ ವಿಜಯೇಂದ್ರ, ಅವರ ಕುಟುಂಬದವರಿಂದ ಬಿಎಸ್‍ವೈ ಹೆಸರು ಕೆಟ್ಟಿದೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.

ವಿಜಯೇಂದ್ರನ ತಂಡವಿದೆ, ವಸೂಲಿ, ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆಂಬ ಮಾಹಿತಿ ಇದೆ. ಹಾವು, ಚೇಳುಗಳು ಪಕ್ಷ ಕಟ್ಟಿವೆ. ಯಡಿಯೂರಪ್ಪ ಹಿಂದೆ ಪಕ್ಷ ಕಟ್ಟಿದಾಗ ಅವರ ಕಾರಿಗೆ ಪೆಟ್ರೋಲ್ ಹಾಕಿದ್ದೇನೆ. ಆದರೆ, ಸಿಎಂ ಈಗ ಪುತ್ರ ವ್ಯಾಮೋಹದ ಪರಾಕಾಷ್ಠೆ ತಲುಪಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಟೀಕಿಸಿದರು.

ಸಿಎಂ ಯಡಿಯೂರಪ್ಪನವರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 385 ಕೋಟಿ ರೂ.ಬಿಡುಗಡೆ ಮಾಡುತ್ತಿದ್ದಾರೆ. ಆದರೆ, ವಿಜಯಪುರ ವಿಮಾನ ನಿಲ್ದಾಣ ಅಭಿವೃದ್ಧಿಗೆ ನೀಡಿದ್ದು ಕೇವಲ 95 ಕೋಟಿ ರೂ., ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಗೆ ಕಾಳಜಿಯಿಲ್ಲ ಎಂದು ಯತ್ನಾಳ್ ಇದೇ ವೇಳೆ ದೂರಿದರು.

ಮೈಸೂರಿನ ಸುತ್ತೂರು ಶ್ರೀಗಳಿಗೆ ವೀರಶೈವ ಲಿಂಗಾಯಿತರ ನೇತೃತ್ವ ತೆಗೆದುಕೊಳ್ಳಲು ಹೇಳಿದ್ದಾರೆ. ಮೊನ್ನೆ ವೀರಶೈವ ಲಿಂಗಾಯಿತರನ್ನು ಒಡೆಯಲು ಪ್ರಯತ್ನಿಸಿದರು. ಅದು ವಿಫಲವಾಯಿತು. ವೀರಶೈವ ಲಿಂಗಾಯಿತರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ. ಇದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ. ನಮ್ಮದು ಕಾಂಗ್ರೆಸ್, ಮುಲಾಯಂ ಸಿಂಗ್, ಲಾಲೂ ಪ್ರಸಾದ್ ಯಾದವ್, ದೇವೇಗೌಡರಂತೆ ಕುಟುಂಬ ಪಕ್ಷವಲ್ಲ. ನಮ್ಮದು ಕಾರ್ಯಕರ್ತರ ಪಕ್ಷ. ಪ್ರಧಾನಿ ಮೋದಿ ಆಶಯದಂತೆ ಕುಟುಂಬ ರಾಜಕೀಯ ಬಿಡಬೇಕು. ಆದುದರಿಂದ ವಿಜಯೇಂದ್ರ ಕುಟುಂಬದಲ್ಲಿ ಎಲ್ಲರೂ ರಾಜಕೀಯ ಮಾಡಬಾರದು. ಒಬ್ಬರು ಮಾತ್ರ ರಾಜಕೀಯ ಮಾಡಿ. ಬೆಂಗಳೂರಿನಲ್ಲಿ ನಿಮಗೆ ಸೇರಿದ ಸಾಕಷ್ಟು ವ್ಯವಹಾರವಿದೆ. ನೂರಾರು ಮನೆಗಳಿವೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.

ಜೀವಕ್ಕೆ ಅಪಾಯವಿದೆ: ತಮ್ಮ ಜೀವಕ್ಕೆ ಅಪಾಯವಿರುವುದರಿಂದ ಸರಕಾರ ಎರಡು ದಿನಗಳಿಂದ ತಮಗೆ ಪೊಲೀಸ್ ಭದ್ರತೆ ನೀಡಿದೆ. ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಗೃಹ ಇಲಾಖೆ ಪೊಲೀಸ್ ಬೆಂಗಾವಲು ಪಡೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಬಸನಗೌಡ ಪಾಟೀಲ ಯತ್ನಾಳ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News