ಟೂಲ್‍ ಕಿಟ್ ಪ್ರಕರಣ : ದಿಶಾ ರವಿ ಬಿಡುಗಡೆಗೆ ಚಿಂತಕರು, ಹೋರಾಟಗಾರರು, ಪರಿಸರವಾದಿಗಳ ಆಗ್ರಹ

Update: 2021-02-15 16:46 GMT

ಬೆಂಗಳೂರು, ಫೆ.15: ಟೂಲ್‍ ಕಿಟ್ ಪ್ರಕರಣದಲ್ಲಿ ಬಂಧನವಾಗಿರುವ ಬೆಂಗಳೂರು ಮೂಲದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಮತ್ತು ಪರಿಸರವಾದಿಗಳು ಆಗ್ರಹಿಸಿದ್ದಾರೆ.

ಸೋಮವಾರ ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಜಮಾಯಿಸಿದ ಹೋರಾಟಗಾರರು, ಚಿಂತಕರು, ರೈತ ಮುಖಂಡರು, ಸಮಾನ ಮಾನಸ್ಕರು, ದಿಶಾ ರವಿಯಂತಹ ಯುವತಿಯರು ದೇಶದ ಭವಿಷ್ಯದ ಪೀಳಿಗೆಗಳ ಬಗ್ಗೆಯೂ ಕಾಳಜಿ ಹೊಂದಿದ್ದಾರೆ. ಅವರನ್ನು ಗುರಿಯಾಗಿಸಿಕೊಂಡು ಬಂಧಿಸಿರುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು.

ನಾವೀಗ ಪ್ರಜಾಪ್ರಭುತ್ವದ ತತ್ವಗಳಂತೆ ನಡೆದುಕೊಳ್ಳುತ್ತಿಲ್ಲ. ಪ್ರತಿಭಟನೆಗಳನ್ನು ಪಿತೂರಿಗಳೆಂದು ಬಿಂಬಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ನಡೆಯಲ್ಲ. ಸಣ್ಣ ಘಟನೆವೊಂದನ್ನೆ ನೆಪವಾಗಿಟ್ಟುಕೊಂಡು ಪರಿಸರ ಕಾರ್ಯಕರ್ತೆ ದಿಶಾ ರವಿ ಅನ್ನು ಬಂಧಿಸುವ ಮೂಲಕ ಕೇಂದ್ರ ಸರಕಾರದ ಸಂವಿಧಾನ ವಿರೋಧಿ ನಡೆ ಮುಂದುವರಿದಿದೆ ಎಂದು ವಾಗ್ದಾಳಿ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಇತಿಹಾಸ ತಜ್ಞ ರಾಮಚಂದ್ರ ಗುಹಾ, ನಾವೀಗ ಅಸಂಬದ್ಧತೆಯ ಮಿತಿಗಳನ್ನು ದಾಟುತ್ತಿದ್ದೇವೆ. ನಾವು ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲಿಗೆ ಈಡಾಗುತ್ತಿದ್ದೇವೆ. ಈ ರೀತಿ ಯಾರನ್ನಾದರೂ ಬಂಧಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ರೈತ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ಕನ್ನಡತಿ ದಿಶಾ ರವಿ ಅವರು, ಎಲ್ಲೂ ಸಹ ಬಾಂಬ್ ಹಾಕಿಲ್ಲ, ಬಂದೂಕು ಹಿಡಿದಿಲ್ಲ. ಕೊನೆ ಪಕ್ಷ ದೇಶದ ಮಾಹಿತಿಯನ್ನು ಬೇರೆಡೆ ಸೋರಿಕೆ ಮಾಡಿಲ್ಲ. ಆದರೂ, ಅವರನ್ನು ಗುರಿಯಾಗಿಸಿಕೊಂಡು ಬಂಧಿಸುತ್ತಾರೆ ಎಂದರೆ ಏನರ್ಥ? ಈ ಘಟನೆ ಮೂಲಕ ಹೋರಾಟಗಾರರನ್ನು ಎದುರಿಸುತ್ತೇನೆ ಎಂದು ಪರೋಕ್ಷವಾಗಿ ಕೇಂದ್ರ ಸರಕಾರವೂ ಬೆದರಿಕೆ ಹಾಕುತ್ತಿದೆ ಎಂದರು.

ಈ ದೇಶದಲ್ಲಿ ಎಲ್ಲರಿಗೂ ಬದುಕು ಹಕ್ಕಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವೂ ಇದೆ. ಪರಿಸರ, ರೈತರು ನಮ್ಮ ಜೀವಾಳ ಎಂದು ದಿಶಾ ರವಿ ಅವರು ಹೇಳಿದ್ದು ತಪ್ಪಾ ಎಂದು ಪ್ರಶ್ನಿಸಿದ ಅವರು, ಫ್ಯಾಶಿಸ್ಟ್ ಧೋರಣೆ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಹೆಚ್ಚು ದಿನ ಇರುವುದಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಶಾಸಕಿ ಸೌಮ್ಯಾರೆಡ್ಡಿ ಮಾತನಾಡಿ, ದಿಶಾ ರವಿ ಬಂಧನದಿಂದ ಕೇಂದ್ರ ಸರಕಾರವೂ ಪ್ರಶ್ನಿಸುವವರನ್ನು ಹೇಗೆ ವರ್ತಿಸುತ್ತಿದೆ ಎಂದು ತಿಳಿಯುತ್ತಿದೆ. ಓರ್ವ ಯುವತಿಯನ್ನು ರಾತ್ರೋರಾತ್ರಿ ಹೊಸದಿಲ್ಲಿಯಿಂದ ಬೆಂಗಳೂರಿಗೆ ಬಂದು ಕರೆದುಕೊಂಡು ಹೋಗುತ್ತಾರೆ ಎಂದರೆ, ನಾವು ಎಲ್ಲಿಗೆ ತಲುಪಿದ್ದೇವೆ ಎಂದು ಖಾರವಾಗಿ ಪ್ರಶ್ನಿಸಿದರು.

ಮಹಿಳಾ ಹೋರಾಟಗಾರ್ತಿ ಕೆ.ಎಸ್.ವಿಮಲಾ, ಪ್ರಧಾನಿ ನರೇಂದ್ರ ಮೋದಿ ಅವರು ಹೌಡಿ ಮೋದಿ ಅಭಿಯಾನ ನಡೆಸುವುದಾಗಿ ಬಿಜೆಪಿ, ಸಂಘಪರಿವಾರದ ಕಾರ್ಯಕರ್ತರು ಇದೇರೀತಿಯ ಟೂಲ್‍ಕಿಟ್ ಬಳಕೆ ಮಾಡಿದ್ದರು. ಇದೀಗ ಸಂವಿಧಾನ ಬಾಹಿರ ನಡೆಗೆ ಕೇಂದ್ರವೂ ಮುಂದಾಗಿದ್ದು, ಈ ಕೂಡಲೇ ದಿಶಾ ರವಿಯನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹೋರಾಟಗಾರ ವಿನಯ್ ಶ್ರೀನಿವಾಸ್, ನರಸಿಂಹಮೂರ್ತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಹರ್ಯಾಣ ಸಚಿವನ ವಿರುದ್ಧ ದೂರು

ದಿಶಾ ರವಿ ಕುರಿತು ವಿವಾದಿತ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಹರ್ಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ವಿರುದ್ಧ ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರಿಗೆ ದ್ವೇಷದ ಮಾತುಗಳ ವಿರುದ್ಧ ಜನಾಂದೋಲನ ಸದಸ್ಯರು ದೂರು ಸಲ್ಲಿಸಿ, ಕ್ರಮಕ್ಕೆ ಒತ್ತಾಯಿಸಿದರು.

ದಿಶಾ ಬಿಡುಗಡೆ ಆಗ್ರಹಿಸಿ ‘ಆಪ್' ಮೆರವಣಿಗೆ

ಪರಸರ ಹೋರಾಟಗಾರ್ತಿ ದಿಶಾ ರವಿ ಅಕ್ರಮ ಬಂಧನವನ್ನು ಖಂಡಿಸಿ ಆಮ್‍ಆದ್ಮಿ ಪಕ್ಷದ ಕಾರ್ಯಕರ್ತರು ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮೇಣದ ಬತ್ತಿ ಮೆರವಣಿಗೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಸೇರಿ ಇನ್ನಿತರರು ಹಾಜರಿದ್ದರು.

ನಾರಿ ಮುನಿದರೆ ಮಾರಿ

‘ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ ಎನ್ನುವ ಪ್ರಧಾನಿ ನರೇಂದ್ರ ಮೋದಿ, ಶಿಕ್ಷಿತ ಹೆಣ್ಣುಮಕ್ಕಳು ತಮ್ಮನ್ನು  ಪ್ರಶ್ನಿಸಿದರೆ ಬಂಧಿಸಿ ಜೈಲಿಗೆ ಹಾಕುತ್ತಾರೆ. ದಿಶಾ ರವಿ ಬಂಧನ ಪ್ರಜೆಗಳ ಮೇಲಿನ ದೌರ್ಜನ್ಯ ಮಾತ್ರವಲ್ಲ, ಮಹಿಳೆಯರ ಮೇಲಿನ ದೌರ್ಜನ್ಯವೂ ಹೌದು. ನೆನಪಿರಲಿ; ನಾರಿ ಮುನಿದರೆ ಮಾರಿ'

-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

ರೈತರ ಪರ ಯಾರೂ ಮಾತನಾಡಬಾರದೆ: ಡಾ.ಪುಷ್ಪಾ ಅಮರನಾಥ್
ರೈತರ ಪರ ಧ್ವನಿ ಎತ್ತಿದ ಪರಿಸರ ಹೋರಾಟಗಾರ್ತಿ ದಿಶಾ ರವಿ ದೇಶದ್ರೋಹಿನಾ ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ಪರ ಧ್ವನಿ ಎತ್ತಿದ ದಿಶಾ ರವಿ ಅವರಿಗೆ ದೇಶದ್ರೋಹದ ಪಟ್ಟ ಕಟ್ಟಿದ್ದೀರಿ. ಹಾಗಿದ್ದರೆ ರೈತರ ಪರ ಯಾರೂ ಮಾತನಾಡಬಾರದೆ? ನಿಮ್ಮ ರೈತ ವಿರೋಧಿ ಕಾನೂನುಗಳನ್ನು ಬಾಯಿ ಮುಚ್ಚಿಕೊಂಡು ಒಪ್ಪಿಕೊಳ್ಳಬೇಕೇ ಎಂದು ಲೇವಡಿ ಮಾಡಿದರು. 

ದಿಶಾ ರವಿ ಓರ್ವ ಪರಿಸರ ಹೋರಾಟಗಾರ್ತಿ. ಅವರು ರೈತರ ನಡುವೆಯೇ ಬದುಕು ನಡೆಸುತ್ತಿರುವವರು. ಅವರು ರೈತರ ಬಗ್ಗೆ ಮಾತನಾಡಿದರೆ ದೇಶದ್ರೋಹ ಪಟ್ಟ ಕಟ್ಟುತ್ತೀರಿ. ದಿಶಾ ರವಿ ದೇಶದ್ರೋಹಿಯಲ್ಲ, ನನ್ನ ಪ್ರಕಾರ ಬಿಜೆಪಿಯವರೇ ದೇಶದ್ರೋಹಿಗಳು, ದೇಶದ ಎಲ್ಲಾ ವರ್ಗದ ಸಂತೋಷ ಕಿತ್ತುಕೊಂಡಿರುವ ನೀವು ದೇಶದ್ರೋಹಿಗಳು ಎಂದು ಕಿಡಿಕಾರಿದರು.

ಹಮ್ದೋ, ಹಮಾಲಿ ದೋ ಸರ್ಕಾರ ಮಾತ್ರ ಸಂತೋಷವಾಗಿದೆ. ನಿಮ್ಮದು ಹಮ್ದೋ ಸರ್ಕಾರ, ನಿಮ್ಮನ್ನ ಮೊದಲು ಅರೆಸ್ಟ್ ಮಾಡಬೇಕು. 200ಕ್ಕೂ ಹೆಚ್ಚು ಜನ ರೈತರನ್ನು ಬಲಿಪಡೆದ ನೀವು ದೇಶದ್ರೋಹಿಗಳು, ರೈತರ ಪರ ನಿಂತುಕೊಳ್ಳೋ ಯೋಗ್ಯತೆ ನಿಮಗಿಲ್ಲ ಎಂದು ವಾಗ್ದಾಳಿ ನಡೆಸಿದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News