ರೈತರು- ಬಡವರ ರಕ್ತ ಹೀರುವ ‘ಹೊಸ ತಳಿಯ ಜಿಗಣೆ’ಗಳ ಬಗ್ಗೆ ಎಚ್ಚರ: ವಿ.ಎಸ್.ಉಗ್ರಪ್ಪ

Update: 2021-02-15 16:10 GMT

ಬೆಂಗಳೂರು, ಫೆ.15: ಕೇಂದ್ರ ಸರಕಾರ ಜಾರಿಗೆ ತಂದಿರುವ ಜನ ವಿರೋಧಿ, ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ರೈತರನ್ನು, ಪ್ರಧಾನಿ ನರೇಂದ್ರ ಮೋದಿ ‘ಆಂದೋಲನ ಜೀವಿಗಳು’ ಎಂದು ಟೀಕಿಸಿದ್ದಾರೆ. ಆದರೆ, ಪೆಟ್ರೋಲ್, ಡಿಸೇಲ್, ಅಡುಗೆ ಅನಿಲದ ದರಗಳನ್ನು ನಿರಂತರವಾಗಿ ಏರಿಸುತ್ತಾ ಜನಸಾಮಾನ್ಯರ ರಕ್ತ ಹೀರುತ್ತಿರುವ ‘ಈ ಹೊಸ ತಳಿಯ ಜಿಗಣೆ’ಗಳಿಂದ ಎಚ್ಚರ ವಹಿಸಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಿನ್ನೆ ರಾತ್ರಿ ಏಕಾಏಕಿ ಅಡುಗೆ ಅನಿಲ ಸಿಲಿಂಡರ್ ದರವನ್ನು 50 ರೂ.ಹೆಚ್ಚಿಸಲಾಗಿದೆ. ಕೇಂದ್ರ ಸರಕಾರ ನಿರಂತರವಾಗಿ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲದ ದರವನ್ನು ಏರಿಸುತ್ತಿರುವುದರಿಂದ ಜನಸಾಮಾನ್ಯರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಕಿಡಿಗಾರಿದರು.

2014ರಲ್ಲಿ ಕಚ್ಚಾ ತೈಲ ಬೆಲೆ ಒಂದು ಬ್ಯಾರೆಲ್‍ಗೆ 139 ಡಾಲರ್ ಇದ್ದಾಗ ಪೆಟ್ರೋಲ್ ದರ 70 ರೂ.ದಾಟಿರಲಿಲ್ಲ. ಆದರೆ, ಇವತ್ತು ಕಚ್ಚಾ ತೈಲ ಬೆಲೆ ಬ್ಯಾರೆಲ್‍ಗೆ 60 ಡಾಲರ್ ಇದೆ. ಆದರೆ, ಪೆಟ್ರೋಲ್ ದರ 92 ರೂ.ಗಳನ್ನು ದಾಟಿದೆ. ಯುಪಿಎ ಸರಕಾರದ ಅಂತ್ಯದ ವೇಳೆಗೆ ಪೆಟ್ರೋಲ್ ಮೇಲೆ ಇದ್ದ ಶೇ.9.21ರಷ್ಟು ತೆರಿಗೆಯನ್ನು ಈಗ ಶೇ.32.98ಕ್ಕೆ ಹೆಚ್ಚಿಸಲಾಗಿದೆ. ಡಿಸೇಲ್ ಮೇಲೆ ಇದ್ದ ಶೇ.3.45ರಷ್ಟು ತೆರಿಗೆಯನ್ನು ಈಗ ಶೇ.31.83ಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ಆರೋಪಿಸಿದರು.

ಕೇಂದ್ರ ಸರಕಾರವು ಪ್ರಸ್ತುತ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 32.98 ರೂ., ಡಿಸೇಲ್ ಮೇಲೆ 31.84 ರೂ.ಗಳನ್ನು ಸಂಗ್ರಹಿಸುತ್ತಿದೆ. ಇದರಿಂದ 35,980.70 ಕೋಟಿ ರೂ.ಗಳನ್ನು ರಾಜ್ಯದ ಜನರಿಂದ ವಸೂಲಿ ಮಾಡುತ್ತಿದೆ. ನಮ್ಮ ರಾಜ್ಯದಿಂದ ಸುಮಾರು 2.50 ಲಕ್ಷ ಕೋಟಿ ರೂ.ಕೇಂದ್ರಕ್ಕೆ ಹೋಗುತ್ತಿದೆ. ಅದರಲ್ಲಿ 1 ಲಕ್ಷ ಕೋಟಿ ರೂ.ಆದಾಯ ತೆರಿಗೆ, 83 ಸಾವಿರ ಕೋಟಿ ರೂ. ಜಿಎಸ್‍ಟಿ, 36 ಸಾವಿರ ಕೋಟಿ ರೂ.ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಹೆಚ್ಚುವರಿ ತೆರಿಗೆ, 17.5 ಸಾವಿರ ಕೋಟಿ ರೂ.ಕಸ್ಟಮ್ಸ್ ತೆರಿಗೆ ಸೇರಿದೆ. ಆದರೆ, ನಮಗೆ ತೆರಿಗೆ, ಸಹಾಯಧನಗಳ ರೂಪದಲ್ಲಿ ಸಿಗುತ್ತಿರುವುದು ಕೇವಲ 45 ರಿಂದ 50 ಸಾವಿರ ಕೋಟಿ ರೂ.ಗಳು ಮಾತ್ರ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಸುಮಾರು 1.64 ಕೋಟಿ ಕುಟುಂಬಗಳಿದ್ದು, ಈ ಪೈಕಿ 1.27 ಕೋಟಿ ಬಿಪಿಎಲ್ ಕುಟುಂಬಗಳು, 10 ಲಕ್ಷ ಅಂತ್ಯೋದಯ ಕುಟುಂಬಗಳು ಹಾಗೂ 20 ಲಕ್ಷ ಎಪಿಎಲ್ ಕುಟುಂಬಗಳಿವೆ. ಟಿವಿ, ಫ್ರಿಡ್ಜ್ ಇದ್ದವರಿಗೆ ಬಿಪಿಎಲ್ ಕಾರ್ಡು ನೀಡುವುದಿಲ್ಲ ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ. ಇದು ಅವರ ವೈಯಕ್ತಿಕ ಹೇಳಿಕೆ ಇದ್ದಂತಿಲ್ಲ, ಇಡೀ ಸರಕಾರದ ಹೇಳಿಕೆ ಇದ್ದಂತಿದೆ. ಜನಸಾಮಾನ್ಯರ ಬದುಕಿನ ಮೇಲೆ ಚಪ್ಪಡಿ ಎಳೆಯುವ ಪ್ರಯತ್ನ ಸರಕಾರ ಮಾಡುತ್ತಿದೆ ಎಂದು ಅವರು ಕಿಡಿಗಾರಿದರು.

ನಮ್ಮ ದೇಶವು ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಸರ್ವಾಧಿಕಾರಿ ವ್ಯವಸ್ಥೆಯತ್ತ ಸಾಗುತ್ತಿರುವುದಕ್ಕೆ ನಿನ್ನೆ ಪರಿಸರ ಹೋರಾಟಗಾರ್ತಿ ದಿಶಾ ರವಿಯನ್ನು ರೈತರ ಹೋರಾಟವನ್ನು ಬೆಂಬಲಿಸಿ ಟೂಲ್ ಕಿಟ್ ಅನ್ನು ಹಂಚಿಕೊಂಡ ಆರೋಪದ ಹಿನ್ನೆಲೆಯಲ್ಲಿ ಹೊಸದಿಲ್ಲಿಯ ಪೊಲೀಸರು, ಇಲ್ಲಿಗೆ ಬಂದು ರಾಜ್ಯ ಸರಕಾರಕ್ಕೆ ಯಾವುದೆ ಮಾಹಿತಿಯನ್ನು ನೀಡದೆ ಬಂಧಿಸಿರುವುದೇ ಸಾಕ್ಷಿ ಎಂದು ಉಗ್ರಪ್ಪ ಟೀಕಿಸಿದರು.

ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಸುಪ್ರೀಂಕೋರ್ಟ್ ಅನೇಕ ತೀರ್ಪುಗಳನ್ನು ನೀಡಿದೆ. ದಿಶಾ ರವಿಯ ಬಂಧನದಿಂದಾಗಿ ಪ್ರಧಾನಿ ಮೋದಿ, ಕೇಂದ್ರ ಸರಕಾರ ಹಾಗೂ ಬಿಜೆಪಿಗೆ ಸುಪ್ರೀಂಕೋರ್ಟ್‍ನ ತೀರ್ಮಾನಗಳು, ಮಾನವ ಹಕ್ಕುಗಳು, ಸಂವಿಧಾನಾತ್ಮಕ ಹಕ್ಕುಗಳ ಮೇಲೆ ನಂಬಿಕೆಯಿಲ್ಲ ಎಂಬುದು ಸ್ಪಷ್ಟವಾಗಿದೆ. ಸರ್ವಾಧಿಕಾರಿ ಧೋರಣೆಯ ಈ ಪ್ರಧಾನಿ ಹಾಗೂ ಬಿಜೆಪಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಉಗ್ರಪ್ಪ ಹೇಳಿದರು.

ರಮೇಶ್ ಜಾರಕಿಹೊಳಿಗೆ ಸವಾಲು: ನಾನು ಮನಸ್ಸು ಮಾಡಿದರೆ 24 ಗಂಟೆಯಲ್ಲಿ ಕಾಂಗ್ರೆಸ್ ಪಕ್ಷದ ಐವರು ಶಾಸಕರಿಂದ ರಾಜೀನಾಮೆ ಕೊಡಿಸುತ್ತೇನೆ ಎಂದು ಹೇಳಿರುವ ಸಚಿವ ರಮೇಶ್ ಜಾರಕಿಹೊಳಿಗೆ ಧಮ್ ಇದ್ದರೆ ಆ ಐವರು ಶಾಸಕರ ಹೆಸರನ್ನು ಬಹಿರಂಗಪಡಿಸಲಿ. ಇಲ್ಲದಿದ್ದರೆ, ರಾಜಕೀಯವಾಗಿ ನಿಮ್ಮ ಘನತೆ ಮಣ್ಣುಪಾಲು ಆಗುತ್ತದೆ ಎಂಬುದನ್ನು ಮರೆಯಬೇಡಿ ಎಂದು ಉಗ್ರಪ್ಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News