ಪಂಚಾಯತ್‍ ರಾಜ್ ಕ್ಷೇತ್ರದಲ್ಲಿ ಹೊಸ ಯೋಜನೆಗಳು ಜಾರಿ: ಸಚಿವ ಕೆ.ಎಸ್.ಈಶ್ವರಪ್ಪ

Update: 2021-02-16 12:59 GMT

ಬೆಂಗಳೂರು, ಫೆ.16: ದೇಶದ ಸ್ವಾತಂತ್ರ್ಯಕ್ಕೆ 75 ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಪಂಚಾಯತ್ ರಾಜ್ ಕ್ಷೇತ್ರದಲ್ಲಿ ಜನರ ಯೋಜನೆ, ಓದುವ ಬೆಳಕು ಸೇರಿದಂತೆ ಇನ್ನಿತರ ಹೊಸ ಯೋಜನೆಗಳನ್ನು ಜಾರಿಗೆ ತರಲು ಯೋಜಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಮಂಗಳವಾರ ನಗರದ ಕೆ.ಜಿ.ರಸ್ತೆಯಲ್ಲಿರುವ ಹಳೆಯ ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿ 2020-2021ನೆ ಸಾಲಿನಲ್ಲಿ ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯತ್ ಸದಸ್ಯರಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯತ್‍ಗಳ ಹಂತದಲ್ಲಿ ವಿಕೇಂದ್ರೀಕರಣ ಯೋಜನೆ ತಯಾರಿಕೆಗೆ ಒತ್ತು ನೀಡಿದ್ದು, ಪ್ರಸ್ತುತ ಚುನಾವಣೆ ನಂತರ ಅಸ್ತಿತ್ವಕ್ಕೆ ಬಂದಿರುವ ಗ್ರಾಮ ಪಂಚಾಯಿತಿಗಳು ‘ಜನರ ಯೋಜನೆ’ ಎಂಬ ಹೆಸರಿನಲ್ಲಿ ದೂರದೃಷ್ಟಿ ಯೋಜನೆ ತಯಾರಿಸಲು ಯೋಜಿಸಲಾಗಿದೆ. ಗ್ರಾಮ ಪಂಚಾಯತ್‍ಗಳ ಗ್ರಂಥಾಲಯಗಳಲ್ಲಿ ಜ್ಞಾನಾರ್ಜನೆಗೆ ‘ಓದುವ ಬೆಳಕು’ ಕಾರ್ಯಕ್ರಮ ಜಾರಿಯ ಜೊತೆಗೆ ಮಾಹಿತಿ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.

ಗ್ರಾಮ ಪಂಚಾಯತ್ ಗಳ ಮೂಲಕ ಕೈಗೊಳ್ಳುವ ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ಸ್ತ್ರೀ-ಶಕ್ತಿ ಸ್ವ ಸಹಾಯ ಸಂಘಗಳ ಒಕ್ಕೂಟಗಳನ್ನು ತೊಡಗಿಸಿಕೊಳ್ಳಲು ಉದ್ದೇಶಿಸಲಾಗಿದೆ. ಘನ ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ವಹಣೆಯನ್ನು ಮಹಿಳಾ ಒಕ್ಕೂಟಗಳಿಗೆ ವಹಿಸುವುದು. ಮಹಿಳಾ ಒಕ್ಕೂಟಗಳ ಮೂಲಕ ಸಣ್ಣ ಸಣ್ಣ ಉತ್ಪನ್ನಗಳ ಘಟಕಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಎಲ್ಲ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‍ಗಳ ಕಟ್ಟಡಗಳನ್ನು ವಿಶೇಷ ಚೇತನರ ಸ್ನೇಹಿಯನ್ನಾಗಿ ಮಾಡುವುದು ಎಂದು ಈಶ್ವರಪ್ಪ ತಿಳಿಸಿದರು.

ಪ್ರತಿ ತಾಲೂಕಿನ ಒಂದು ಗ್ರಾಮ ಪಂಚಾಯತ್ ನಲ್ಲಿ ವಿಶೇಷ ಚೇತನರು ಸೇರಿದಂತೆ ಎಲ್ಲ ಮಕ್ಕಳು ಆಟವಾಡಲು ಅನುಕೂಲವಿರುವ ಬಹುವಿಧ ಆಟದ ಮೈದಾನ ಸ್ಥಾಪಿಸಲಾಗುವುದು. ಪ್ರತಿ ತಾಲೂಕಿನ ಒಂದು ಗ್ರಾಮ ಪಂಚಾಯತ್ ಗ್ರಂಥಾಲಯವನ್ನು ಬ್ರೈಲ್ ಲಿಪಿ ಹಾಗೂ ಆಡಿಯೊ ಪುಸ್ತಕಗಳ ಗ್ರಂಥಾಲಯವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಅಭಿವೃದ್ಧಿಗಾಗಿ ತಂತ್ರಜ್ಞಾನ ಬಳಕೆಯ ಪರಿಕಲ್ಪನೆ ಅಡಿ ಪಂಚತಂತ್ರ ತಂತ್ರಾಂಶಗಳನ್ನು ಮೇಲ್ದರ್ಜೆಗೇರಿಸಿ ಆಡಳಿತದಲ್ಲಿ ತಂತ್ರಾಂಶ ಬಳಕೆಗೆ ಒತ್ತು ನೀಡುವುದು. ಯೂ ಟ್ಯೂಬ್ ಚಾನಲ್ ಮೂಲಕ ನಿರಂತರ ತರಬೇತಿ ಆಯೋಜನೆ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.

ಕಳೆದ ಡಿಸೆಂಬರ್ ನಲ್ಲಿ ರಾಜ್ಯದ ಅವಧಿ ಮುಗಿದ 5728 ಗ್ರಾಮ ಪಂಚಾಯತ್‍ಗಳಿಗೆ 2 ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ 90,729 ಸದಸ್ಯರು ಆಯ್ಕೆಯಾಗಿದ್ದಾರೆ. ಮಹಿಳೆಯರಿಗೆ ಶೇ.50ರಷ್ಟು ಸ್ಥಾನಗಳು ಮೀಸಲಿದ್ದರೂ ಸಾಮಾನ್ಯ ವರ್ಗದಲ್ಲಿಯೂ ಸ್ಪರ್ಧಿಸಿ ಶೇ.50ಕ್ಕಿಂತ ಹೆಚ್ಚು ಮಹಿಳೆಯರು ಆಯ್ಕೆಯಾಗಿದ್ದಾರೆ. 31 ಸದಸ್ಯರು ತೃತೀಯ ಲಿಂಗಿಗಳು ಆಯ್ಕೆಯಾಗಿದ್ದಾರೆ. ಇವರಲ್ಲಿ ಒಬ್ಬರು ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ(ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ ಪಂಚಾಯತ್) ಆಯ್ಕೆಯಾಗಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.

ಅಮೆರಿಕಾದಲ್ಲಿ ವ್ಯಾಸಂಗ ಮಾಡಿ ಸಾಫ್ಟ್ ವೇರ್ ಇಂಜಿನಿಯರ್ ಅಗಿದ್ದ ಮಹಿಳೆ ಸದಸ್ಯೆಯಾಗಿ ಆಯ್ಕೆಯಾಗಿ ಅಧ್ಯಕ್ಷೆಯಾಗಿಯೂ ಆಯ್ಕೆಯಾಗಿದ್ದಾರೆ.(ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮ ಪಂಚಾಯತ್). ಬೀದರ್ ಜಿಲ್ಲೆಯಲ್ಲಿ 93 ವರ್ಷ ವಯಸ್ಸಿನ ವೃದ್ಧೆ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಪಿಎಚ್‍ಡಿ, ಸ್ನಾತಕೋತ್ತರ, ವೈದ್ಯಕೀಯ, ಕಾನೂನು, ಇಂಜಿನಿಯರಿಂಗ್ ಪದವಿ ಪಡೆದಿರುವವರು ಆಯ್ಕೆಯಾಗಿರುವುದು ಈ ಬಾರಿಯ ವೈಶಿಷ್ಟ್ಯವಾಗಿದೆ ಎಂದು ಅವರು ಹೇಳಿದರು.

ಈ ಎಲ್ಲ ಸದಸ್ಯರಿಗೂ ಸರಕಾರದ ವತಿಯಿಂದ ಅಬ್ದುಲ್ ನಝೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಮೂಲಕ ಐದು ದಿನಗಳ ತರಬೇತಿ ನೀಡಲಾಗುತ್ತಿದೆ. ರಾಜ್ಯದ 285 ಕೇಂದ್ರಗಳಲ್ಲಿ ತಾಲೂಕು ಮಟ್ಟದಲ್ಲಿ ತರಬೇತಿಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ತಾಲೂಕು ಪಂಚಾಯತ್‍ನಲ್ಲಿ ಸಾಮರ್ಥ್ಯ ಸೌಧಗಳಿದ್ದು ಈ ಕೇಂದ್ರಗಳನ್ನು ತರಬೇತಿಗಾಗಿಯೆ ಸಜ್ಜುಗೊಳಿಸಲಾಗಿದೆ. ಜೊತೆಗೆ ಹೆಚ್ಚುವರಿಯಾಗಿ ಖಾಸಗಿ ಸಂಸ್ಥೆಗಳ ತರಬೇತಿ ಕೇಂದ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಕೇಂದ್ರಗಳಲ್ಲಿ ಉಪಗ್ರಹ ಆಧಾರಿತ ತರಬೇತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಈಶ್ವರಪ್ಪ ಮಾಹಿತಿ ನೀಡಿದರು.

ಸದಸ್ಯರು ಕುಳಿತುಕೊಳ್ಳಲು ಪಿಠೋಪಕರಣ, ಕುಡಿಯುವ ನೀರು, ಶೌಚಾಲಯ, ಊಟೋಪಚಾರ, ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿನ ಸದಸ್ಯರಿಗೆ ಹಾಜರಾತಿ, ಉಪಧನ ನೀಡಲಾಗುವುದು. ರಾಜ್ಯಮಟ್ಟದಲ್ಲಿ ತಜ್ಞ ಸಂಪನ್ಮೂಲ ವ್ಯಕ್ತಿಗಳೊಡನೆ ‘ಚಿಂತಕರ ಚಾವಡಿ’ ಎಂಬ ಎರಡು ದಿನಗಳ ಕಮ್ಮಟ ಏರ್ಪಡಿಸಿ ತರಬೇತಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಎರಡನೆ ಹಂತದಲ್ಲಿ ತಜ್ಞ, ಸಂಪನ್ಮೂಲ ವ್ಯಕ್ತಿಗಳ ಎರಡು ದಿನಗಳ ಕಾರ್ಯಾಗಾರ ನಡೆಸಿ ತರಬೇತಿಯ ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

ಐದು ದಿನಗಳ ತರಬೇತಿಯಲ್ಲಿ ಪ್ರಮುಖ ಪಂಚಾಯತ್‍ರಾಜ್ ವಿಷಯಗಳನ್ನು ಸದಸ್ಯರಿಗೆ ಮನವರಿಕೆ ಮಾಡಲು ಉದ್ದೇಶಿಸಲಾಗಿದೆ. ಪ್ರತಿ ದಿನ ತಜ್ಞ ಸಂಪನ್ಮೂಲ ವ್ಯಕ್ತಿಗಳು ಸದಸ್ಯರೊಡನೆ ಚರ್ಚಿಸುವ ಮೂಲಕ ಮನದಟ್ಟು ಮಾಡುವರು. ಪ್ರತಿ ದಿನ ಒಂದು ಗಂಟೆ ತಜ್ಞ, ಸಂಪನ್ಮೂಲ ವ್ಯಕ್ತಿಗಳ ಜೊತೆ ಪ್ರಶ್ನೋತ್ತರಕ್ಕೂ ವ್ಯವಸ್ಥೆ ಮಾಡಲಾಗಿದೆ. ಸದಸ್ಯರಿಗೆ ತರಬೇತಿಯನ್ನು ನಿರಂತರವಾಗಿ ನೀಡುವ ಯೋಜನೆ ರೂಪಿಸಲಾಗಿದೆ. ಆಯ್ದ 25 ವಿಷಯಗಳನ್ನು ಕುರಿತಂತೆ ಪ್ರತಿ ತಿಂಗಳು ಒಂದು ಮತ್ತು ಮೂರನೆ ಶನಿವಾರದಂದು ಝೂಮ್ ಆ್ಯಪ್ ಮೂಲಕ ಒಂದೊಂದು ವಿಷಯ ಕುರಿತಂತೆ ತರಬೇತಿ ನೀಡಲಾಗುವುದು ಎಂದು ಈಶ್ವರಪ್ಪ ಹೇಳಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಎಲ್.ಕೆ.ಅತೀಕ್, ಉಮಾ ಮಹದೇವನ್, ಇಲಾಖೆಯ ಇ ಆಡಳಿತದ ನಿರ್ದೇಶಕಿ ಶಿಲ್ಪಾ ನಾಗ್, ಪಂಚಾಯತ್‍ರಾಜ್ ಇಲಾಖೆಯ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ನರೇಗಾ ಆಯುಕ್ತ ಅನಿರುದ್ಧ ಶ್ರವಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News