ಪರಿಶಿಷ್ಟ ಜಾತಿ, ಪಂಗಡ ಉದ್ದಿಮೆದಾರರಿಗೆ ಕೈಕಾರಿಕಾ ನಿವೇಶನ-ಶೆಡ್‍ಗೆ ಸಹಾಯಧನ ಶೇ.75ಕ್ಕೆ ಹೆಚ್ಚಳ

Update: 2021-02-16 13:00 GMT

ಬೆಂಗಳೂರು, ಫೆ.16: ಪರಿಶಿಷ್ಟ ಜಾತಿ ಹಾಗೂ ಪಂಗಡದ ಉದ್ದಿಮೆದಾರರಿಗೆ ಕೈಗಾರಿಕಾ ನಿವೇಶನ, ಶೆಡ್‍ಗಳನ್ನು ನೀಡುವಲ್ಲಿ ಹಾಲಿ ಇರುವ ಸಹಾಯಧನವನ್ನು ಶೇ.50ರಿಂದ ಶೇ.75ಕ್ಕೆ ಹೆಚ್ಚಿಸಿ ಜಾರಿಗೊಳಿಸಿ ಆದೇಶಿಸಲಾಗಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಫಲಾನುಭವಿಯೊಬ್ಬರಿಗೆ ಗರಿಷ್ಠ 2 ಎಕರೆ ಜಮೀನನ್ನು ಶೇ.75ರಷ್ಟು ರಿಯಾಯಿತಿ ದರದಲ್ಲಿ ನೀಡಬಹುದು. 2019-20ನೇ ಸಾಲಿನಿಂದ ಕೆಐಎಡಿಬಿ ಹಾಗೂ ಕೆಎಸ್‍ಎಸ್‍ಐಡಿಸಿ ಸಂಸ್ಥೆಗಳಿಂದ ಭೂ ಹಂಚಿಕೆ ಪಡೆದಿರುವ ಹಂಚಿಕೆದಾರರಿಗೆ ಪೂರ್ವಾನ್ವಯವಾಗಿ ಎ.1, 2019ರಿಂದ ನೀಡಬಹುದಾಗಿದೆ.

ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ನಿವೇಶನ, ಶೆಡ್‍ಗಳ ಮೇಲೆ ನೀಡುವ ರಿಯಾಯಿತಿಯು ಒಟ್ಟು ಶೇ.75ರಷ್ಟು ಆಗಿರುತ್ತದೆ. ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾಭಿವೃದ್ಧಿ ನಿಗಮದಿಂದ ಹಂಚಿಕೆ ಮಾಡಿ ನಿವೇಶನ ಇಲ್ಲವೇ ಶೆಡ್‍ನ ಶೇ.75ರಷ್ಟು ರಿಯಾಯಿತಿ ಪರಿಗಣಿಸಿ ಉಳಿದ ಮೊತ್ತ ಪಾವತಿಸಲು ಫಲಾನುಭವಿಗೆ ಹಂಚಿಕೆ ಪತ್ರ ನೀಡಬೇಕು.

ಹಂಚಿಕೆ ಪತ್ರದಲ್ಲಿ ನಮೂದಿಸಿದ ಬಾಕಿ(ಶೇ.25) ಮೊತ್ತದ ಶೇ.10ರಷ್ಟು ಮೊತ್ತ ಪಾವತಿಸಿದ ನಂತರ ನಿವೇಶನವನ್ನು ಫಲಾನುಭವಿಗೆ ಸ್ವಾಧೀನ ಪತ್ರದ ಮೂಲಕ ನೀಡುವುದು. ಉಳಿದ ಶೇ.15ರಷ್ಟು ಮೊತ್ತವನ್ನು ಸ್ವಾಧೀನ ಪತ್ರ ವಿತರಿಸಿದ ದಿನಾಂಕದಿಂದ 8 ತ್ರೈಮಾಸಿಕ ಸಮ ಕಂತುಗಳಲ್ಲಿ ಬಡ್ಡಿ ಸಹಿತವಾಗಿ ಪಡೆಯಬೇಕು.

ಫಲಾನುಭವಿಯು ಸಲ್ಲಿಸಿದ ಜಾತಿ ಪ್ರಮಾಣ ಪತ್ರದ ಪ್ರತಿ, ಆಧಾರ್ ಸಂಖ್ಯೆ ದಾಖಲಾತಿ ಮತ್ತು ಸ್ವಾಧೀನ ನೀಡಲಾದ ಪತ್ರದ ಪ್ರತಿಯನ್ನು ದೃಢೀಕರಿಸಿ ಸದರಿ ಮಂಡಳಿ, ನಿಗಮದ ಕಚೇರಿಯಲ್ಲಿಯೇ ನಿರ್ವಹಿಸುವುದು ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ ಫಲಾನುಭವಿಯ ವಿವರಗಳೊಂದಿಗೆ ಪ್ರಸ್ತಾವನೆ ಸಲ್ಲಿಸುವುದು.

ಪ್ರಸ್ತಾವನೆಯನ್ನು ಪರಿಶೀಲಿಸಿ ಉದ್ದಿಮೆದಾರರು ಈಗಾಗಲೇ ಸ್ವಾಧೀನ ಪಡೆದಿರುವ ನಿವೇಶನ ಇಲ್ಲವೆ ಶೆಡ್‍ಗಳಿಗೆ ನಿಯಮಾವಳಿಯಂತೆ ಅರ್ಹವಿರುವ ಶೇ.75ರಷ್ಟು ರಿಯಾಯಿತಿ ಮೊತ್ತವನ್ನು ಸರಕಾರದಿಂದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾಭಿವೃದ್ಧಿ ನಿಗಮಕ್ಕೆ ಮರುಪಾವತಿ ಮಾಡಲಾಗುವುದೆಂದು ರಾಜ್ಯಾಪಾಲರ ಆದೇಶಾನುಸಾರ ಕೈಗಾರಿಕಾ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News