ಸಮುದಾಯದ ಆರ್ಥಿಕ, ಶೈಕ್ಷಣಿಕ ಏಳಿಗೆಯೇ ಮಲೆನಾಡು ಗಲ್ಫ್ ಟ್ರಸ್ಟ್ ಧ್ಯೇಯ: ಬಶೀರ್ ಬಾಳ್ಳುಪೇಟೆ

Update: 2021-02-16 17:55 GMT

ಚಿಕ್ಕಮಗಳೂರು, ಫೆ.16: ಸಮುದಾಯದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗಳ ಸುಧಾರಣೆಯನ್ನೇ ಧ್ಯೇಯವನ್ನಾಗಿಟ್ಟುಕೊಂಡು ಮಲೆನಾಡು ಗಲ್ಫ್ ಶಿಕ್ಷಣ ಮತ್ತು ಸೇವಾ ಟ್ರಸ್ಟ್ ಅನ್ನು ಸ್ಥಾಪಿಸಲಾಗಿದೆ. ಕಳೆದ ಆರು ವರ್ಷಗಳಲ್ಲಿ ಟ್ರಸ್ಟ್ ವತಿಯಿಂದ ಮಲೆನಾಡು ಭಾಗದ 4 ಜಿಲ್ಲೆಗಳ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯದ ಹಲವಾರು ಕುಟುಂಬಗಳಿಗೆ ಹಾಗೂ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡಲಾಗಿದೆ ಎಂದು ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಬಶೀರ್ ಬಾಳ್ಳುಪೇಟೆ ಹೇಳಿದರು.

ಮಂಗಳವಾರ ನಗರದ ಉಪ್ಪಳ್ಳಿ ಬಡಾವಣೆಯಲ್ಲಿರುವ ಹೆರಿಟೇಜ್ ಸಭಾಂಗಣದಲ್ಲಿ ಮಲೆನಾಡು ಗಲ್ಫ್ ಟ್ರಸ್ಟ್ ಹಮ್ಮಿಕೊಂಡಿದ್ದ ಮಲೆನಾಡ ಸಂಗಮ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯದ ಸರ್ವತೋಮುಖ ಏಳಿಗೆ ನಿಟ್ಟಿನಲ್ಲಿ ಮಲೆನಾಡು ಭಾಗದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಮುದಾಯದವರಿಗೆ ಆರ್ಥಿಕ ನೆರವು ನೀಡುವುದು, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು, ವೈದ್ಯಕೀಯ ನೆರವು ನೀಡುವುದು, ಉದ್ಯೋಗಾವಕಾಶ ಮತ್ತು ತರಬೇತಿಯಂತಹ ಹಲವಾರು ಕಾರ್ಯಕ್ರಮಗಳನ್ನು ಟ್ರಸ್ಟ್ ಕಳೆದ 7 ವರ್ಷಗಳಿಂದ ಮಾಡುತ್ತಿದೆ. ಭವಿಷ್ಯದಲ್ಲಿ ಉನ್ನತ ಶಿಕ್ಷಣ ಪಡೆಯುವ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ತರಬೇತಿ ಕೇಂದ್ರ, ಐಎಎಸ್, ಐಪಿಎಸ್‍ನಂತಹ ಉನ್ನತ ಹುದ್ದೆಗಳ ಆಕಾಂಕ್ಷಿಗಳಿಗೆ ಕಾರ್ಯಾಗಾರ ಹಮ್ಮಿಕೊಳ್ಳುವುದು ಹಾಗೂ ಶಿಕ್ಷಣ ಸಂಸ್ಥೆಗಳನ್ನೂ ಆರಂಭಿಸಿ ಸಮುದಾಯದ ಬಡವರ ಏಳಿಗೆಯ ಗುರಿ ಹೊಂದಲಾಗಿದೆ. ಇದಕ್ಕೆ ಸಮುದಾಯದ ಎಲ್ಲರ ಸಹಕಾರ ಅತ್ಯಗತ್ಯ ಎಂದರು.

ಸಮಾಜ ಸೇವೆಯೇ ಮಲೆನಾಡು ಗಲ್ಫ್ ಟ್ರಸ್ಟ್ ಗುರಿಯಾಗಿದೆ. ಇಲ್ಲಿ ಹುಟ್ಟಿ ಬೆಳೆದು ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವವರು ಹಾಗೂ ಮಲೆನಾಡು ಭಾಗದಲ್ಲಿನ ಸಮುದಾಯದ ಕೆಲ ಹೃದಯವಂತರು ಸೇರಿ ಈ ಟ್ರಸ್ಟ್ ಹುಟ್ಟು ಹಾಕಿದ್ದಾರೆ. ಸಮುದಾಯದಲ್ಲಿರುವ ಬಡತನ, ಶೈಕ್ಷಣಿಕವಾಗಿ ಹಿಂದುಳಿದಿರುವುದನ್ನು ಗಮನಿಸಿ ಕೇವಲ ಐದು ಮಂದಿಯಿಂದ ಆರಂಭಗೊಂಡ ಸಂಸ್ಥೆ ಇಂದು ರಾಜ್ಯದ ನಾಲ್ಕು ಜಿಲ್ಲೆಗಳು ಸೇರಿದಂತೆ ಗಲ್ಫ್ ರಾಷ್ಟ್ರಗಳ ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದಾರೆ. ಆರ್ಥಿಕವಾಗಿ ಸಬಲರಾಗಿರುವವರು ಟ್ರಸ್ಟ್ ಗೆ ನೀಡುವ ಸಹಾಯಧನವನ್ನು ಸಮುದಾಯದ ಬಡವರ ಕಲ್ಯಾಣಕ್ಕೆ ಬಳಸಲಾಗುತ್ತಿದೆ. ಟ್ರಸ್ಟ್ ವತಿಯಿಂದ ಕಳೆದ 7 ವರ್ಷಗಳಲ್ಲಿ ವಿವಿಧ ಸೌಲಭ್ಯಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ 8 ತಾಲೂಕು ವ್ಯಾಪ್ತಿಯಲ್ಲೂ ಟ್ರಸ್ಟ್ ನ ಕಮಿಟಿಗಳನ್ನು ರಚಿಸಿ ಎಲ್ಲ ತಾಲೂಕುಗಳಿಗೂ ಸೇವೆಯನ್ನು ವಿಸ್ತರಿಸಲಾಗುವುದು ಎಂದರು.

ಮುಹಮ್ಮದ್ ಅನ್ಸಾರಿ ಮಾತನಾಡಿ, ಇರುವವರು ಇಲ್ಲದವರಿಗೆ ನೆರವು, ಸಹಾಯ ಮಾಡಬೇಕು. ತಮ್ಮಲ್ಲಿರುವ ಆರೋಗ್ಯ ಹಾಗೂ ವಿರಾಮದ ಸಮಯವನ್ನು ಬಡವರ ಅನಾಥರ ಸೇವೆಗೆ ಬಳಸಬೇಕೆಂದು ದೇವರ ಆಗ್ರಹವೂ ಆಗಿದೆ. ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಸಾವಿರಾರು ಮುಸ್ಲಿಂ ಕುಟುಂಬಗಳು ಬಡತನ ರೇಖೆಗಿಂತ ಕೆಳಮಟ್ಟದ ಜೀವನ ನಡೆಸುತ್ತಿದ್ದಾರೆ. ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದ್ದಾರೆ. ವೈದ್ಯಕೀಯ ಸೇವೆ ಇಲ್ಲದೇ ನರಳಾಡುತ್ತಿದ್ದಾರೆ. ಉದ್ಯೋಗವಿಲ್ಲದೇ ಪರದಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಪತ್ತು ಹೊಂದಿರುವವರು ಇಲ್ಲದವರಿಗೆ ಆರೋಗ್ಯ, ಶಿಕ್ಷಣದಂತಹ ಸೌಲಭ್ಯಗಳನ್ನು ಕಲ್ಪಿಸಲು ವಿನಿಯೋಗಿಸಬೇಕು. ಮಲೆನಾಡು ಗಲ್ಫ್ ಟ್ರಸ್ಟ್ ಈ ನಿಟ್ಟಿನಲ್ಲಿ ಸಮುದಾಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು, ಟ್ರಸ್ಟ್ ನ ಸಮಾಜ ಸೇವಾ ಚಟುವಟಿಕೆಗಳಿಗೆ ಮುಖ್ಯವಾಹಿನಿಯಲ್ಲಿರುವ ಸಮುದಾಯದವರು ಸಹಕಾರ ನೀಡಬೇಕೆಂದು ಕರೆ ನೀಡಿದ ಅವರು, ಟ್ರಸ್ಟ್ ವತಿಯಿಂದ ಮಲೆನಾಡಿನ 4 ಜಿಲ್ಲೆಗಳ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಜನರಿಗೆ ವೈದ್ಯಕೀಯ ವೆಚ್ಚಕ್ಕೆ ನೆರವು ನೀಡಲಾಗಿದೆ. ಅತಿವೃಷ್ಟಿ ಸಂದರ್ಭ ಸಂತ್ರಸ್ತ ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗಿದೆ. ಕಳೆದ 7 ವರ್ಷಗಳಲ್ಲಿ ಸಂಸ್ಥೆಯು 4 ಸಾವಿರಕ್ಕೂ ಹೆಚ್ಚು ರಂಝಾನ್ ಕಿಟ್‍ಗಳನ್ನು ನೀಡಲಾಗಿದೆ ಹಾಗೂ ಕೋವಿಡ್ ಸಂದರ್ಭ ಪಿಪಿಇ ಕಿಟ್ ಮತ್ತು ಮಾಸ್ಕ್ ಗಳನ್ನು ಜಿಲ್ಲಾದ್ಯಂತ ಆಸ್ಪತ್ರೆಗಳಿಗೆ ನೀಡಲಾಗಿದೆ ಎಂದು ಟ್ರಸ್ಟ್ ನ ಧ್ಯೇಯ, ಉದ್ದೇಶಗಳ ಬಗ್ಗೆ ವಿವರಿಸಿದರು.

ಜಿ.ಪಂ. ಮಾಜಿ ಅಧ್ಯಕ್ಷ ಕೆ.ಮುಹಮ್ಮದ್ ಮಾತನಾಡಿ, ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಸಮುದಾಯದವರ ಶಿಕ್ಷಣ, ಆರೋಗ್ಯ, ಆರ್ಥಿಕ ಸ್ಥಿತಿ ಸುಧಾರಣೆಗೆ ಹಲವಾರು ಸಂಘ ಸಂಸ್ಥೆಗಳು ನೆರವು ನೀಡುತ್ತಿವೆ. ಆದರೆ ಮಲೆನಾಡು ಭಾಗದಲ್ಲಿರುವ ಮುಸ್ಲಿಂ ಸಮುದಾಯದ ಬಡಜನರಿಗೆ ಕಲ್ಯಾಣಕ್ಕೆ ಶ್ರಮಿಸುತ್ತಿರುವ ಸಂಸ್ಥೆಗಳು ಬೆರಳೆಣಿಕೆಯಷ್ಟಿವೆ. ಮಲೆನಾಡು ಗಲ್ಫ್ ಟ್ರಸ್ಟ್ ಮಲೆನಾಡು ಭಾಗದ ಜಿಲ್ಲೆಗಳಲ್ಲಿರುವ ಸಮುದಾಯದವರ ಏಳಿಗೆಗೆ ಶ್ರಮಿಸುತ್ತಿರುವುದು ಹಾಗೂ ಕೋವಿಡ್ ಸಂದರ್ಭ ಗಲ್ಪ್ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದವರಿಗೆ ನೆರವು ನೀಡಿರುವುದು ಉತ್ತಮ ಕೆಲಸವಾಗಿದೆ. ಚಿಕ್ಕಮಗಳೂರು ಸೇರಿದಂತೆ ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಎಲ್ಲ ತಾಲೂಕುಗಳಲ್ಲೂ ಈ ಟ್ರಸ್ಟ್ ನ ಸೇವೆ ಬಡ ಜನರಿಗೆ ಸಿಗುವಂತಾಗಬೇಕು. ಸಮುದಾಯದ ಎಲ್ಲ ಪಂಗಡ, ಒಳಪಂಗಡಗಳಿಗೂ ಸೇವೆ ಸಿಗಬೇಕು ಎಂದು ಸಲಹೆ ನೀಡಿದ ಅವರು, ಮುಸ್ಲಿಂ ಸಮುದಾಯದ ಜನಸಂಖ್ಯೆಯಲ್ಲಿ ಶೇ.10ರಷ್ಟು ಜನ ಮಾತ್ರ ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ್ದು, ಶೇ.90ರಷ್ಟು ಜನರು ಹಿಂದುಳಿದಿದ್ದಾರೆ. ಉತ್ತಮ ಸ್ಥಿತಿಯಲ್ಲಿರುವ ಸಮುದಾಯದ ಜನರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವವರ ಅಭಿವೃದ್ಧಿಗೆ ಸಹಕಾರ ನೀಡಬೇಕು. ಸರಕಾರದ ವಿವಿಧ ಇಲಾಖೆಗಳಲ್ಲಿರುವ ಸೌಲಭ್ಯಗಳ ಬಗ್ಗೆ ಸಮುದಾಯದವರಿಗೆ ಮಾಹಿತಿ ನೀಡುವ ಕಾರ್ಯಾಗಾರವನ್ನು ಟ್ರಸ್ಟ್ ಮಾಡಬೇಕೆಂದರು.

ಟ್ರಸ್ಟ್ ಅಧ್ಯಕ್ಷ ಯೂಸೂಫ್ ಹಾಜಿ ಮಾತನಾಡಿ, ಬಿಸಿಲ ನಾಡಾದ ಗಲ್ಪ್ ರಾಷ್ಟ್ರಗಳಲ್ಲಿ ಬೆವರು ಸುರಿಸಿ ದುಡಿಯುತ್ತಿರುವ ಹಾಗೂ ಮಲೆನಾಡು ಭಾಗದ ಸಮುದಾಯದ ಸಹೃದಯಿಗಳು ಮಲೆನಾಡಿನಲ್ಲಿರುವ ಸಮುದಾಯದ ಬಡವರ ಏಳಿಗೆಗಾಗಿ ಮಲೆನಾಡು ಗಲ್ಫ್ ಟ್ರಸ್ಟ್ ನಿರ್ಮಿಸಿಕೊಂಡು ಸಮಾಜ ಸೇವೆ ಮಾಡುತ್ತಿದ್ದಾರೆ. ಆರೋಗ್ಯ, ಶಿಕ್ಷಣ, ಆರ್ಥಿಕ ಪ್ರಗತಿ, ಉದ್ಯೋಗಾವಕಾಶ, ಕಾನೂನು ನೆರವಿನಂತಹ ಕಾರ್ಯಕ್ರಮಗಳ ಮೂಲಕ ಟ್ರಸ್ಟ್ ಸಮುದಾಯದವರ ವಿಶ್ವಾಸಗಳಿಸುತ್ತಿದೆ. ಟ್ರಸ್ಟ್ ತನ್ನ ಸೇವೆ ಮುಂದುವರಿಸುವಂತಾಗಲು ಎಲ್ಲರ ಸಹಕಾರ, ಸಲಹೆ ಅತ್ಯಗತ್ಯ ಎಂದರು.

ಬಾಳೆಹೊನ್ನೂರು ಘಟಕದ ಅಧ್ಯಕ್ಷ ವಾಹಿದ್ ಬಾಳೆಹೊನ್ನೂರು, ಚಿಕ್ಕಮಗಳೂರು ಸಿಡಿಎ ಮಾಜಿ ಅಧ್ಯಕ್ಷ ಹನೀಫ್, ಮೂಡಿಗೆರೆಯ ಅಕ್ರಂ ಹಾಜಿ, ಹಮೀದ್, ಶಿವಮೊಗ್ಗದ ಡಾ.ಉಮರ್ ಹಾಜಿ, ನಾಸಿರ್ ಇಂಫಾಲ್ ಮತ್ತಿತರರು ಮಾತನಾಡಿದರು. ಮುಖಂಡರಾದ ಹಸನಬ್ಬ, ನಿಯಾಝ್ ಅಹ್ಮದ್, ಸಿರಾಜ್, ಹಮೀದ್ ಮಾಗುಂಡಿ, ಅಶ್ಫಾಕ್ ಹಾಜಿ, ಅಬ್ದುಲ್ ರೆಹಮಾನ್, ಹಾಸನ ಜಿಲ್ಲಾಧ್ಯಕ್ಷ ಹಸೈನಾರ್ ಆನೆಮಹಲ್, ಅಬ್ದುಲ್ ಜಬ್ಬಾರ್ ಸೇರಿದಂತೆ ಮತ್ತಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ಬಳಿಕ ಸಮುದಾಯದ ಸದಸ್ಯರು ಹಾಗೂ ಟ್ರಸ್ಟ್ ಮುಖಂಡರ ನಡುವೆ ಸಂವಾದ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News