ರಾಜ್ಯದಲ್ಲಿ ಸಿದ್ದರಾಮಯ್ಯರ ಅಹಿಂದ ಸಮಾವೇಶಕ್ಕೆ ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ?

Update: 2021-02-16 16:04 GMT

ಹೊಸದಿಲ್ಲಿ, ಫೆ.16: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಹೊಸದಿಲ್ಲಿಯಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ‘ಅಹಿಂದ’ ಸಮಾವೇಶಗಳನ್ನು ನಡೆಸಲು ಅವಕಾಶ ಕೋರಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹಾಗೂ ದಲಿತರ ಸಮುದಾಯದವರಲ್ಲಿ ಕಾಂಗ್ರೆಸ್ ಪರವಾಗಿ ಒಲವು ಮೂಡುವಂತೆ ಮಾಡಲು ಅಹಿಂದ ಸಮಾವೇಶಗಳು ಪರಿಣಾಮಕಾರಿಯಾಗಲಿವೆ ಎಂದು ಸಿದ್ದರಾಮಯ್ಯ ಪ್ರಸ್ತಾಪಿಸಿದ ವಿಷಯಕ್ಕೆ ಸಹಮತ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಪಕ್ಷಕ್ಕೆ ಅನುಕೂಲಕರವಾಗುವ ರೀತಿಯಲ್ಲಿ ಸಮಾವೇಶಗಳನ್ನು ಮಾಡುವಂತೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕುರುಬ ಸಮುದಾಯದ ಎಸ್ಟಿ ಮೀಸಲಾತಿ ಹೋರಾಟ, ಪಂಚಮಸಾಲಿ ಲಿಂಗಾಯತರ ಹೋರಾಟ, ಕೇಂದ್ರದ ಕೃಷಿ ಕಾಯ್ದೆಗಳು, ಭೂ ಸುಧಾರಣೆ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ ನಡೆಸಿರುವ ಹೋರಾಟಗಳ ಬಗ್ಗೆಯೂ ರಾಹುಲ್ ಗಾಂಧಿ ಜೊತೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ಎಐಸಿಸಿ ಅಧಿನಾಯಕಿ ಸೋನಿಯಾಗಾಂಧಿಗೆ ವಿಶ್ರಾಂತಿ ನೀಡಲು, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಸಾರಥ್ಯವನ್ನು ಮತ್ತೊಂದು ಅವಧಿಗೆ ತಾವೇ ತೆಗೆದುಕೊಳ್ಳುವಂತೆ ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ರಾಹುಲ್ ಗಾಂಧಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಹೊಸದಿಲ್ಲಿಗೆ ಬಂದು 13 ತಿಂಗಳಾಗಿತ್ತು. ರಾಜ್ಯದಲ್ಲಿ ಪಕ್ಷದ ಸಂಘಟನೆ ಬಗ್ಗೆ ರಾಹುಲ್ ಗಾಂಧಿ ಅವರ ಜೊತೆ ಚರ್ಚೆ ನಡೆಸಿದ್ದೇನೆ. ಕೇಂದ್ರ ಸರಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಗಳ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ಅಲ್ಲದೆ, ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವಂತೆ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಭೇಟಿ ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎ.ಕೆ.ಆಂಟನಿಯನ್ನು ಸಿದ್ದರಾಮಯ್ಯ ಭೇಟಿ ಮಾಡಿ ಪ್ರಸಕ್ತ ರಾಜಕೀಯ ವಿದ್ಯಾಮಾನಗಳ ಬಗ್ಗೆ ಚರ್ಚೆ ನಡೆಸಿದರು.

ರಾಹುಲ್ ಗಾಂಧಿ ಭೇಟಿ ವೇಳೆ ಶಾಸಕರಾದ ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ರಿಝ್ವಾನ್ ಅರ್ಶದ್, ಎಚ್.ಎಂ.ರೇವಣ್ಣ, ಪ್ರಕಾಶ್ ರಾಥೋಡ್, ಮಾಜಿ ಶಾಸಕರಾದ ಅಶೋಕ್ ಬಿ.ಪಟ್ಟಣ್, ಐವನ್ ಡಿಸೋಜಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News