ಆಹಾರ ಸಚಿವ ಉಮೇಶ್ ಕತ್ತಿ ಹೇಳಿಕೆ ವಿರುದ್ಧ ಎಂ.ಪಿ.ರೇಣುಕಾಚಾರ್ಯ ಕಿಡಿ

Update: 2021-02-16 16:50 GMT

ಬೆಂಗಳೂರು, ಫೆ.16: ಟಿವಿ, ಫ್ರಿಡ್ಜ್, ದ್ವಿಚಕ್ರ ವಾಹನ ಇದ್ದವರಿಂದ ಬಿಪಿಎಲ್ ಕಾರ್ಡು ಹಿಂಪಡೆಯುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ನೀಡಿರುವ ಹೇಳಿಕೆ ವಿರುದ್ಧ ಕಿಡಿಗಾರಿದ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಈ ಹೇಳಿಕೆ ಸಚಿವರದ್ದೋ ಅಥವಾ ಯಾವ ಐಎಎಸ್ ಅಧಿಕಾರಿಯ ಲಾಬಿಯೋ ಗೊತ್ತಿಲ್ಲ ಎಂದರು.

ಮಂಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಎಲ್ಲ ವರ್ಗದ ಸರಕಾರ. ಟಿವಿ, ದ್ವಿಚಕ್ರ ವಾಹನ ಇರುವವರಿಂದ ಬಿಪಿಎಲ್ ಕಾರ್ಡು ಹಿಂಪಡೆಯಬೇಕೆಂದು ಯಾವುದೇ ಸರಕಾರಿ ಆದೇಶ ಜಾರಿಯಾಗಿಲ್ಲ. ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುವಂತಹ ದ್ವಂದ್ವ ಹೇಳಿಕೆಯನ್ನು ಯಾರೊಬ್ಬರೂ ನೀಡಬಾರದು ಎಂದರು.

ನಕಲಿ ಬಿಪಿಎಲ್ ಕಾರ್ಡುಗಳ ಬಗ್ಗೆ ತನಿಖೆ ಮಾಡಿ ರದ್ದು ಮಾಡಲಿ. ಅದಕ್ಕೆ ಯಾರೂ ವಿರೋಧ ಮಾಡುವುದಿಲ್ಲ. ಬಡವರು ತಮ್ಮ ಮನೆಗಳಲ್ಲಿ ಮನರಂಜನೆಗಾಗಿ ಟಿವಿಗಳನ್ನು ಇಟ್ಟುಕೊಂಡಿರುತ್ತಾರೆ. ಮಹಿಳೆಯರು ಮಾನಸಿಕ ಒತ್ತಡದಿಂದ ಹೊರ ಬರಲು ಟಿವಿಯಲ್ಲಿ ಬರುವಂತಹ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ ಎಂದು ಅವರು ಹೇಳಿದರು.

ಕೆಲವು ಖಾಸಗಿ ಬ್ಯಾಂಕ್‍ಗಳು ಮುಂಗಡ ಹಣ ಪಡೆಯದೆ ದ್ವಿಚಕ್ರ ವಾಹನಗಳನ್ನು ನೀಡುತ್ತವೆ. ನಾವು ನಮ್ಮ ಮನೆಗಳಲ್ಲಿ ಫ್ರಿಡ್ಜ್, ಟಿವಿಗಳನ್ನು ಇಡಬಹುದು. ಆದರೆ, ಬಡವರು ಟಿವಿ ಫ್ರಿಡ್ಜ್ ಇಡಬಾರದಾ? 2003ರಲ್ಲಿ ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಜೈಲಿಗೆ ಹೋಗಿ ಬಂದಿದ್ದೀನಿ, ಹೋರಾಟ ಮಾಡಿದ್ದೀನಿ ಎಂದು ರೇಣುಕಾಚಾರ್ಯ ತಿಳಿಸಿದರು.

ಸಚಿವರು ನೀಡಿರುವ ಹೇಳಿಕೆಯು ಸರಕಾರದ ಹೇಳಿಕೆ ಅಲ್ಲ. ಸಚಿವರಿಗೆ ಯಾರೋ ಅಧಿಕಾರಿಗಳು ಹೇಳಿರಬಹುದು. ಇದಕ್ಕೆ ನಮ್ಮ ವಿರೋಧ ಇದೆ ಅಂತ ಈಗಾಗಲೆ ಸ್ಪಷ್ಟವಾಗಿ ಹೇಳಿದ್ದೇನೆ ಎಂದು ರೇಣುಕಾಚಾರ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News