ಫೆ.20ರಂದು ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮಕ್ಕೆ ಚಾಲನೆ: ಸಚಿವ ಆರ್.ಅಶೋಕ್

Update: 2021-02-16 16:54 GMT

ಬೆಂಗಳೂರು, ಫೆ.16: ಆಡಳಿತವನ್ನು ಮತ್ತಷ್ಟು ಜನಸ್ನೇಹಿಯನ್ನಾಗಿ ರೂಪಿಸುವ ಉದ್ದೇಶದಿಂದ ಫೆ.20ರಂದು ಬೆಳಗ್ಗೆ 10 ಗಂಟೆಗೆ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದ್ದು, 227 ಕಡೆ ಏಕಕಾಲಕ್ಕೆ ಅಧಿಕಾರಿಗಳು ನಿಗದಿತ ಗ್ರಾಮಗಳಿಗೆ ತೆರಳಿ, ಜನರ ಸಮಸ್ಯೆಯನ್ನು ಆಲಿಸಿ ಸ್ಥಳದಲ್ಲೆ ಬಗೆಹರಿಸುವ ಪ್ರಯತ್ನ ಮಾಡಲಿದ್ದಾರೆ ಎಂದು ಕಂದಾಯ ಸಚಿವ ಆ.ಅಶೋಕ್ ತಿಳಿಸಿದರು.

ಮಂಗಳವಾರ ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರು ಸಣ್ಣ ಪುಟ್ಟ ಕೆಲಸಗಳಿಗೂ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಕಂದಾಯ ಇಲಾಖೆ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಎಂಬ ನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.

ಫೆ.20ರಂದು ಕಂದಾಯ ಇಲಾಖೆಯ ಅಧಿಕಾರಿಗಳು ಹಳ್ಳಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಜಿಲ್ಲಾಧಿಕಾರಿಗಳು, ಕಂದಾಯ ಇಲಾಖೆಯ ಗುಮಾಸ್ತರನ್ನು ಹೊರತುಪಡಿಸಿ ಉಳಿದ ಅಧಿಕಾರಿ, ಸಿಬ್ಬಂದಿಗಳು ಪ್ರತಿ ತಿಂಗಳ ಮೂರನೆ ಶನಿವಾರದಂದು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲೆ ವಾಸ್ತವ್ಯ ಮಾಡಲಿದ್ದಾರೆ ಎಂದು ಅವರು ಹೇಳಿದರು.

ಹಳ್ಳಿಗಳಿಗೆ ಭೇಟಿ ನೀಡುವ ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು ಹಳ್ಳಿಯ ಯಾವುದೇ ಮುಖ್ಯಸ್ಥರು, ಮುಖಂಡರ ಮನೆಯಲ್ಲಿ ಭೋಜನ, ಉಪಹಾರ ಸೇವಿಸುವಂತಿಲ್ಲ. ಸರಕಾರಿ ಶಾಲೆಗಳಲ್ಲಿ, ಎಸ್ಸಿ, ಎಸ್ಟಿ ವಸತಿ ನಿಲಯದಲ್ಲಿ ಭೊಜನ ಸ್ವೀಕರಿಸಲಿದ್ದಾರೆ. ಗ್ರಾಮಗಳಿಗೆ ಭೇಟಿ ನೀಡುವ ಒಂದು ವಾರದ ಮೊದಲೆ ಕಂದಾಯ ಅಧಿಕಾರಿಗಳು, ಗ್ರಾಮ ಭೇಟಿ ಸಂದರ್ಭದಲ್ಲಿ ನೀಡಲಾಗಿರುವ ಕಾರ್ಯಸೂಚಿಗಳನ್ವಯ ಫಲಾನುಭವಿಗಳ ಅರ್ಜಿಗಳನ್ನು ಸಂಗ್ರಹಿಸಬೇಕು ಎಂದು ಅವರು ತಿಳಿಸಿದರು.

ಅರ್ಜಿಗಳ ಮೇಲೆ ಯಾರ ಹಂತದಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಮೊದಲೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಲೇವಾರಿಯಾಗಿರುವ ಬಗ್ಗೆ ಸಂಬಂಧಪಟ್ಟ ಫಲಾನುಭವಿಗಳಿಗೆ ತಿಳಿಸಬೇಕು. ಅರ್ಜಿಗಳ ಮೇಲೆ ಬೇರೆ ಬೇರೆ ಹಂತದಲ್ಲಿ ವಿಚಾರಣೆಯ ಅವಶ್ಯಕತೆ ಇದ್ದಲ್ಲಿ ಅದನ್ನು ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಅಶೋಕ್ ಹೇಳಿದರು.

ಭೇಟಿ ನೀಡಿದ ಗ್ರಾಮದಲ್ಲಿನ ಎಲ್ಲ ಪಹಣಿಯಲ್ಲಿನ ಲೋಪದೋಷಗಳು, ಪಹಣಿ ಕಾಲಂ 3 ಮತ್ತು ಅಕಾರ್ ಬಂದ್ ತಾಳೆಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಸರಕಾರದಿಂದ ಸಾರ್ವಜನಿಕರಿಗೆ ದೊರೆಯಬಹುದಾದ ಸವಲತ್ತುಗಳ ಬಗ್ಗೆ ಅರಿವು ಮೂಡಿಸಬೇಕು. ಮತದಾರರ ಪಟ್ಟಿ ಪರಿಷ್ಕರಣೆ, ಬರ, ಪ್ರವಾಹ ಇದ್ದಲ್ಲಿ ಪರಿಹಾರ, ಪ್ರವಾಹದ ಹಾನಿ ತಡೆಗಟ್ಟಲು ಸಲಹೆ ನೀಡಬೇಕು ಎಂದು ಅವರು ಹೇಳಿದರು.

ಅತಿವೃಷ್ಟಿ, ಅನಾವೃಷ್ಟಿ ಎದುರಿಸಲು ಮುಂಜಾಗ್ರತೆ ಕ್ರಮ, ಎಲ್ಲ ಅರ್ಹ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ದೊರೆತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿದ್ದಲ್ಲಿ ಅವರ ಮೇಲೆ ನಿಯಮಾನುಸಾರ ಕ್ರಮ ವಹಿಸಬೇಕು. ಎಸ್ಸಿ, ಎಸ್ಟಿ, ಬಿಸಿಎಂ ವಸತಿ ನಿಲಯಗಳಿದ್ದಲ್ಲಿ ಭೇಟಿ ನೀಡಿ ಸುಸ್ಥಿತಿಯಲ್ಲಿರುವ ಬಗ್ಗೆ ಕ್ರಮ ವಹಿಸಬೇಕು. ಶಾಲೆ ಹಾಗೂ ಅಂಗನವಾಡಿಗಳಿಗೆ ಭೇಟಿ ನೀಡಿ ಆಹಾರ, ಕಲಿಕಾ ಕ್ರಮ ಇತ್ಯಾದಿ ಬಗ್ಗೆ ಪರಿಶೀಲಿಸಬೇಕು ಎಂದು ಅಶೋಕ್ ತಿಳಿಸಿದರು.

ಗ್ರಾಮದ ಎಲ್ಲ ಅರ್ಹ ವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯ ದೊರೆಯುತ್ತಿರುವ ಬಗ್ಗೆ ಪರಿಶೀಲಿಸಬೇಕು. ಬಿಟ್ಟು ಹೋದಂತಹ ಅರ್ಹ ಪ್ರಕರಣಗಳಿಗೆ ಸ್ಥಳದಲ್ಲಿಯೇ ಆದೇಶ ನೀಡಬೇಕು. ಮನೆಬಾಗಿಲಿಗೆ ಮಾಸಾಶನ ಸರಕಾರವು ಸ್ವಯಂಪ್ರೇರಿತವಾಗಿ ನಾಗರಿಕರ ಆದಾಯ ಮತ್ತು ವಯೋಮಿತಿ ಆಧರಿಸಿ ಮನೆಬಾಗಿಲಲ್ಲೇ ನವೋದಯ ಮೊಬೈಲ್ ಆಪ್ ಮೂಲಕ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪಿಂಚಣಿ ಮಂಜೂರು ಮಾಡುವ ಬೃಹತ್ ಅಭಿಯಾನವಾಗಿದೆ. ಇದರೊಂದಿಗೆ ಪ್ರಸ್ತುತ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಸಮಗ್ರ ಪರಿಶೀಲನೆ ಮತ್ತು ಪರಿಷ್ಕರಣೆಯಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಕುಟುಂಬ ದತ್ತಾಂಶದ ಮೂಲಕ ಪಡೆಯಲಾದ ಆದಾಯ ಹಾಗೂ ವಯೋಮಿತಿ ಮಾಹಿತಿ ಆಧಾರದ ಮೇಲೆ ಸ್ವಯಂ ಪ್ರೇರಿತವಾಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅರ್ಜಿ ರಹಿತವಾಗಿ ಮನೆಬಾಗಿಲೆಗೆ ಪಿಂಚಣಿ ಸೌಲಭ್ಯ ತಲುಪಿಸಲಾಗುತ್ತದೆ. ನವೋದಯ ಆ್ಯಪ್ ಕುರಿತಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಉಡುಪಿ, ಬಳ್ಳಾರಿ ಜಿಲ್ಲೆಯಲ್ಲಿ ಮನೆಬಾಗಿಲಿಗೆ ಮಾಸಾಶನ ಯಶಸ್ವಿಯಾಗಿದೆ ಎಂದು ಅಶೋಕ್ ಹೇಳಿದರು.

ರಾಜ್ಯದಲ್ಲಿರುವ ತಾಂಡ, ಹಟ್ಟಿ, ದೊಡ್ಡಿ, ಮಜರೆ, ಹಾಡಿ, ಕಾಲನಿ ಹಾಗೂ ಇನ್ನಿತರೆ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 2,741 ದಾಖಲೆರಹಿತ ಜನ ವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಗುರುತಿಸಲಾಗಿದೆ. ಆದರೆ ಇನ್ನೂ ಹಲವು ಅರ್ಹ ಪ್ರದೇಶಗಳನ್ನು ಗುರುತಿಸದೇ ಕೈಬಿಡಲಾಗಿದೆ. ಅವುಗಳನ್ನು ಗುರುತಿಸಿ 60 ದಿನಗಳ ಒಳಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಹೊಸಹಳ್ಳಿಯಲ್ಲಿ ಅಶೋಕ್ ವಾಸ್ತವ್ಯ: ಫೆ.20ರಂದು ದೊಡ್ಡಬಳ್ಳಾಪುರದ ಹೊಸಹಳ್ಳಿಯಲ್ಲಿ ದಲಿತರ ಕೇರಿಗೆ ಭೇಟಿ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವುದು, ಅಂಗವಿಕಲರಿಗೆ ಕೃತಕ ಕೈ, ಕಾಲು ಜೋಡಣೆ ಮಾಡುವ ಆರೋಗ್ಯ ಶಿಬಿರದಲ್ಲಿ ಭಾಗಿಯಾಗುತ್ತೇನೆ. ಆನಂತರ, ಸ್ಥಳೀಯ ಜನಪ್ರತಿನಿಧಿಗಳ ಜೊತೆ ಚರ್ಚೆ ಮಾಡಿ, ಗ್ರಾಮದ ಹಿಂದುಳಿದ ವರ್ಗಗಳ ಹಾಸ್ಟೆಲ್‍ನಲ್ಲಿ ವಾಸ್ತವ್ಯ ಮಾಡುತ್ತೇನೆ. ಮಾರನೆಯ ದಿನ ದಲಿತರ ಮನೆಯಲ್ಲಿ ತಿಂಡಿ ಸೇವನೆ ಮಾಡಲಿದ್ದೇನೆ ಅಶೋಕ್ ಹೇಳಿದರು.

ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಯಾವ ಗ್ರಾಮಕ್ಕೆ ಹೋಗುತ್ತಾರೋ ಅಲ್ಲಿರುವ ಶಾಲೆ, ಹಾಸ್ಟೇಲ್‍ನಲ್ಲೆ ವಾಸ್ತವ್ಯ ಹೂಡಬೇಕು. ಮಹಿಳಾ ಜಿಲ್ಲಾಧಿಕಾರಿಗಳು ಸಹ ಗ್ರಾಮ ವಾಸ್ತವ್ಯ ಮಾಡಲು ಒಪ್ಪಿದ್ದಾರೆ. ಈ ವಾಸ್ತವ್ಯದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಜನರಿಂದ ಅಹವಾಲು ಸ್ವೀಕರಿಸಬೇಕು. ಜನಪ್ರತಿನಿಧಿಗಳು ಸಹ ಒಂದು ಗಂಟೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News