ಭ್ರಷ್ಟಾಚಾರ, ಸಾರ್ವಜನಿಕರಿಗೆ ಕಿರುಕುಳ ಆರೋಪ: ಇಬ್ಬರು ಅಧಿಕಾರಿಗಳ ಅಮಾನತು

Update: 2021-03-12 12:20 GMT

ಬಾಗಲಕೋಟೆ, ಫೆ.16: ಭ್ರಷ್ಟಾಚಾರದ ಆರೋಪ, ಕಾನೂನುಬಾಹಿರ ಚಟುವಟಿಕೆಗಳಿಗೆ ಕುಮ್ಮಕ್ಕು ಮತ್ತು ಸಾರ್ವಜನಿಕರಿಗೆ ಅನಗತ್ಯವಾಗಿ ಕಿರುಕುಳ ಕೊಡುತ್ತಿದ್ದ ಆರೋಪದ ಮೇಲೆ ಚಿತ್ರದುರ್ಗ ಜಿಲ್ಲೆಯ ಭೂಗರ್ಭ ಶಾಸ್ತ್ರಜ್ಞ ಫಯಾಝ್ ಮತ್ತು ಲಿಂಗರಾಜು ಎಂಬವರನ್ನು ಸೇವೆಯಿಂದ ಅಮಾನತುಪಡಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಇಬ್ಬರ ಮೇಲೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತು ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು.

ಬಾಗಲಕೋಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಫಯಾಝ್ ಪ್ರಸ್ತುತ ಚಿತ್ರದುರ್ಗ ಜಿಲ್ಲೆಯಲ್ಲಿ ಭೂಗರ್ಭಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರಿಂದ ಲಂಚಕ್ಕೆ ಬೇಡಿಕೆ, ಕಿರುಕುಳ ಕೊಡುವುದು ಹಾಗೂ ಸರಕಾರದ ಆದೇಶವನ್ನು ಪಾಲನೆ ಮಾಡದ ಕಾರಣ, ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಇವರ ಜೊತೆಗೆ ಲಿಂಗರಾಜ ಎಂಬುವರ ಮೇಲೆಯೂ ಇದೇ ಆರೋಪದ ಕೇಳಿ ಬಂದ ಕಾರಣ, ಅವರನ್ನೂ ಅಮಾನತುಪಡಿಸಲಾಗಿದೆ ಎಂದು ಮುರುಗೇಶ್ ನಿರಾಣಿ ವಿವರಿಸಿದರು.

ಇಲಾಖೆಯಲ್ಲಿ ಇನ್ನು ಮುಂದೆ ಯಾವುದೇ ಕಾರಣಕ್ಕೂ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಸಾರ್ವಜನಿಕರಿಗೆ ಯಾರಾದರೂ ಅನಗತ್ಯವಾಗಿ ತೊಂದರೆ ಕೊಡುವುದು ಕೇಳಿ ಬಂದರೆ, ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News