ಫಾಸ್ಟ್ಯಾಗ್ ಕಡ್ಡಾಯ: ವಾಹನಗಳಿಂದ ದುಪ್ಪಟ್ಟು ಹಣ ಪಾವತಿ, ಮಾತಿನ ಚಕಮಕಿ
ಬೆಂಗಳೂರು, ಫೆ.16: ಫೆ.15ರ ಮಧ್ಯ ರಾತ್ರಿಯಿಂದ ಎಲ್ಲ ಟೋಲ್‍ಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯ ಎಂಬ ಕೇಂದ್ರ ಸರಕಾರದ ಆದೇಶ ಕರ್ನಾಟಕ ರಾಜ್ಯದಲ್ಲಿಯೂ ಜಾರಿಯಾಗಿದ್ದು, ರಾಷ್ಟ್ರೀಯ ಹೆದ್ದಾರಿಯ ಟೋಲ್‍ಗಳಲ್ಲಿ ಫಾಸ್ಟ್ಯಾಗ್ ಇಲ್ಲದಿದ್ದವರು ದುಪ್ಪಟ್ಟು ಹಣ ಕೊಡುವಂತಾಗಿದೆ. ಇದರಿಂದ, ಟೋಲ್ ಸಿಬ್ಬಂದಿ ಹಾಗೂ ವಾಹನಗಳ ಸವಾರರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಈ ಮೊದಲು ಫಾಸ್ಟ್ಯಾಗ್ ಇಲ್ಲದಿದ್ದರೂ ಹಣ ಪಾವತಿಸಿದರೆ ಟೋಲ್‍ನಲ್ಲಿ ವಾಹನ ಪಾಸ್ ಆಗಲು ಅವಕಾಶವಿತ್ತು. ಆದರೆ, ಇನ್ನು ಮುಂದೆ ಇದಕ್ಕೆ ಅವಕಾಶ ಇರುವುದಿಲ್ಲ. ಫಾಸ್ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಹಣ ಪಾವತಿ ಕಡ್ಡಾಯವಾಗಿದೆ.
ಫಾಸ್ಟ್ಯಾಗ್ ಪಡೆಯದವರಿಗೆ ಟೋಲ್ ಸಿಬ್ಬಂದಿ ಕೇವಲ ಒನ್ ಸೈಡ್ ಟೋಕನ್ ನೀಡುತ್ತಿದ್ದಾರೆ. ಇದಕ್ಕೂ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತಿದೆ. ಫಾಸ್ಟ್ಯಾಗ್ ಇರುವ ವಾಹನಗಳಿಗೆ ಒಮ್ಮೆ ಟೋಲ್ ದಾಟಲು 20 ರೂ.ಶುಲ್ಕವಿದ್ದರೆ, ಫಾಸ್ಟ್ಯಾಗ್ ಇಲ್ಲದ ವಾಹನಗಳು 40 ರೂ. ಕೊಡಬೇಕಾಗಿದೆ.
ಫಾಸ್ಟ್ಯಾಗ್ ಅಳವಡಿಕೆಗೆ ಕೇಂದ್ರ ಸರಕಾರ ಫೆ.15ರವರೆಗೆ ಗಡುವು ನೀಡಿತ್ತು. ಆದರೆ ಗಡುವು ಮುಗಿದಿದ್ದರೂ ಕೆಲವರು ಫಾಸ್ಟ್ಯಾಗ್ ಅಳವಡಿಸಿಕೊಳ್ಳಲು ಚಾಲಕರು ಹಿಂದೇಟು ಹಾಕಿದ್ದಾರೆ. ಈಗ ದುಪ್ಪಟ್ಟು ಹಣ ಪಾವತಿಸುವಂತಾಗಿದೆ.
ಸದ್ಯ ಈ ಬಾರಿ ಗಡುವು ವಿಸ್ತರಣೆ ಮಾಡುವುದಿಲ್ಲ. ಇಂದಿನಿಂದಲೇ ಫಾಸ್ಟ್ಯಾಗ್ ಕಡ್ಡಾಯ ಎಂದು ಕೇಂದ್ರ ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಫೆ.15ರಿಂದ ಫಾಸ್ಟ್ಯಾಗ್ ಇಲ್ಲದ ವಾಹನಗಳು ಒಂದಕ್ಕೆ ಎರಡರಷ್ಟು ಸುಂಕ ಕಟ್ಟಿ ಟೋಲ್ ದಾಟಬೇಕಾಗಿದೆ.