ದಿಶಾ ರವಿಯನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ಗೆ ನಾಚಿಕೆಯಾಗಬೇಕು: ಸಿ.ಟಿ.ರವಿ

Update: 2021-02-16 18:26 GMT

ಚಿಕ್ಕಮಗಳೂರು, ಫೆ.16: ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ಪ್ರಜಾಪ್ರಭುತ್ವ ಹೋರಾಟಕ್ಕಾಗಿ ಬಂಧನ ಮಾಡಿಲ್ಲ, ಬದಲಾಗಿ ದೇಶದಲ್ಲಿ ಅರಾಜಕತೆ ಸೃಷ್ಟಿಸಿದ್ದಕ್ಕೆ ಬಂಧನ ಮಾಡಲಾಗಿದೆ. ಅವರನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ನವರಿಗೆ ನಾಚಿಕೆಯಾಗಬೇಕೆಂದು ಮಾಜಿ ಸಚಿವ, ಶಾಸಕ ಸಿ.ಟಿ.ರವಿ ಟೀಕಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ನಿಮಗೆಲ್ಲ ಗೊತ್ತು. ದಿಶಾ ರವಿ ಹೆಸರು ಯಾರಿಗೆ ಗೊತ್ತಿತ್ತು ಎಂದು ಪ್ರಶ್ನಿಸಿದ ಅವರು, ಅರಾಜಕತೆ ಹುಟ್ಟು ಹಾಕುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ, ಕೆಲವರು ದಿಶಾ ರವಿ ಅವರ ಬಗ್ಗೆ ವೈಭವೀಕರಿಸಿ ಮಾತನಾಡುತ್ತಿದ್ದಾರೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ. ಪ್ರಾಥಮಿಕ ವರದಿಯಲ್ಲಿ ಅರಾಜಕತೆ ಸೃಷ್ಟಿಗೆ ಕಾರಣವಾಗಿದ್ದರಿಂದ ಬಂಧನವಾಗಿದೆ. ನಮಗೆ ನಮ್ಮ ದೇಶದ ಸಂವಿಧಾನ ದೊಡ್ಡದು, ದೇಶದ ಅಖಂಡತೆ ದೊಡ್ಡದು, ಇಂತಹ ಕೃತ್ಯವನ್ನು ಕಾಂಗ್ರೆಸ್ ಬೆಂಬಲಿಸಿ ತನ್ನ ನಾಯಕರನ್ನು ಕಳೆದುಕೊಂಡಿದೆ. ಅರಾಜಕತೆಯನ್ನು ಸೃಷ್ಟಿಸುವರಿಗೆ ಬೆಂಬಲಿಸುವ ಹೀನ ಕೃತ್ಯ ಕಾಂಗ್ರೆಸ್ ಮಾಡಬಾರದು. ದೇಶದ ಅಖಂಡತೆಗೆ ಭಂಗ ತರುವ ಯಾವ ಶಕ್ತಿಯನ್ನು ನಮ್ಮ ಸರಕಾರ, ಪಕ್ಷ ಬೆಂಬಲಿಸುವುದಿಲ್ಲ, ಕ್ಷಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೈಕ್, ಫ್ರಿಡ್ಜ್, ಟಿವಿ ಇದ್ದವರಿಗೆ ಪಡಿತರ ಚೀಟಿ ರದ್ದು ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ತಗೆದುಕೊಂಡಿದ್ದ ನಿಲುವನ್ನೇ ಸಚಿವ ಉಮೇಶ್ ಕತ್ತಿ ಪುನರುಚ್ಚಾರ ಮಾಡಿದ್ದಾರೆ. ಸಿದ್ದರಾಮಯ್ಯ ಈ ನಿಯಮ ಮಾಡುವಾಗ ಕಾಂಗ್ರೆಸ್ ನವರು ಅರೆ ಪ್ರಜ್ಞಾವಸ್ಥೆಯಲ್ಲಿದ್ದರು, ಈಗ ಅರೆ ಪ್ರಜ್ಞಾವಸ್ಥೆಯಿಂದ ಹೊರ ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟದಿಂದ ಸಿದ್ದರಾಮಯ್ಯ ಅವರು ದಿಲ್ಲಿ ಮುಖಂಡರ ಭೇಟಿಗೆ ಹೋಗಿರಬಹುದು. ನಾವು ಸಿದ್ದರಾಮಯ್ಯರವರ ಪರವೂ ಅಲ್ಲ, ಡಿ.ಕೆ.ಶಿವಕುಮಾರ್ ಅವರ ಪರವೂ ಅಲ್ಲ, ನಾವು ಕಾಂಗ್ರೆಸ್ ವಿರುದ್ಧವಷ್ಟೆ, ಅವರೇನು ಮಾಡಿದರೂ ಅದು ನಮಗೆ ಸಂಬಂಧವಿಲ್ಲ ಎಂದರು.

ರಾಮಮಂದಿರ ನಿರ್ಮಾಣ ದೇಣಿಗೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಣ್ಣಮಟ್ಟದ ಆಲೋಚನೆ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ದೇಣಿಗೆ ಸಂಗ್ರಹ ಮಾಡುತ್ತಿರುವವರು ಎಲ್ಲಿ, ಯಾರು, ಮೊಳೆ ಹೊಡೆಯುವ ಕೆಲಸ ಮಾಡಿದ್ದಾರೆಂಬುದನ್ನು ಅವರು ಹೇಳಲಿ. ಎಲ್ಲಾ ಜಾತಿಯ ಜನರು ಸ್ವಯಂ ಪ್ರೇರಿತವಾಗಿ ದೇಣಿಗೆ ನೀಡುತ್ತಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ಜನರು ಹಣ ನೀಡುತ್ತಿದ್ದಾರೆ. ಭಕ್ತಿಯಿಂದ ಕೊಡುವ ಹಣ ಬೇಕೇ ಹೊರತು ದಬ್ಬಾಳಿಕೆಯಿಂದ ಪಡೆಯುವಂತದಲ್ಲ. ಕುಮಾರಸ್ವಾಮಿಯವರು ಏಕೆ ಹೀಗೆ ಮಾತನಾಡುತ್ತಿದ್ದಾರೆ ತಿಳಿಯುತ್ತಿಲ್ಲ. ಇಂತಹ ಹೇಳಿಕೆ ಅವರಿಗೆ ಗೌರವ ತರುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News