ಶ್ರೀರಾಮನ ಹೆಸರಿನಲ್ಲಿ ಹಣ ವಸೂಲಿಗೆ ಅನುಮತಿ ಕೊಟ್ಟವರು ಯಾರು: ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ

Update: 2021-02-17 10:52 GMT

ಬೆಂಗಳೂರು: ಶ್ರೀರಾಮ ಮಂದಿರ ನಿರ್ಮಾಣ ಮತ್ತು ಆ ಹೆಸರಿನಲ್ಲಿ ಹಣ ಸಂಗ್ರಹಿಸಲು ವಿರೋಧವಿಲ್ಲ. ಆದರೆ, ಶ್ರೀರಾಮನ ಹೆಸರಿನಲ್ಲಿ ಹಾದಿ-ಬೀದಿಯಲ್ಲಿ ಅನಧಿಕೃತವಾಗಿ ದೇಣಿಗೆ ಸಂಗ್ರಹಿಸಲು ಅನುಮತಿ ನೀಡಿದವರು ಯಾರು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಬುಧವಾರ ಇಲ್ಲಿನ ಜೆಪಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಣಿಗೆ ಸಂಗ್ರಹಕ್ಕಾಗಿ ರಶೀದಿ ಪುಸ್ತಕ ಮುದ್ರಿಸಲು ಸರಕಾರ ಅನುಮತಿ ಕೊಟ್ಟಿದೆಯೇ? ಪಾರದರ್ಶಕತೆ ಇಲ್ಲದೆ ರಾಮನ ಹೆಸರಿನಲ್ಲಿ ಹಣ ಸಂಗ್ರಹಿಸಿ ದುರ್ಬಳಕೆ ಮಾಡುವುದನ್ನು ನಿಲ್ಲಿಸಬೇಕೆಂದಷ್ಟೇ ಹೇಳಿದ್ದು, ಯಾವುದೇ ಸಂಘಟನೆ, ಸಂಸ್ಥೆಯ ಬಗ್ಗೆ ನಾನು ಲಘುವಾಗಿ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಮಮಂದಿರ ನಿರ್ಮಾಣಕ್ಕೆ 5 ಸಾವಿರ ಕೋಟಿ ರೂ.ದೇಣಿಗೆ ಸಂಗ್ರಹಿಸಿದರೂ ಬೆಂಬಲವಿದೆ. ಆನ್‌ಲೈನ್‌ನಲ್ಲಿ ಹಣ ಸಂಗ್ರಹಕ್ಕೆ ಅವಕಾಶ ಮಾಡಿಕೊಡಿ. ದೇಣಿಗೆ ಸಂಗ್ರಹಕ್ಕೆ ಮಾರ್ಗಸೂಚಿ ಬೇಡವೇ. ಮನೆ-ಮನೆಗೆ ಏಕೆ ಸ್ಟಿಕ್ಕರ್ ಅಂಟಿಸುತ್ತಿದ್ದಿರಿ? ದೊಡ್ಡ ದೊಡ್ಡ ಪೋಸ್ಟರ್ ಹಾಕಿ ಉತ್ತೇಜನ ನೀಡಿ. ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲು ತಮ್ಮ ಮನೆಗೆ ಅಧಿಕೃತವಾಗಿ ಬಂದರೆ ಎರಡು ಬಾರಿ ಬೇಕಾದರೂ ದೇಣಿಗೆ ಕೊಡುತ್ತೇವೆ ಎಂದು ಅವರು ತಿಳಿಸಿದರು.

ಈಗಾಗಲೇ ಕೆಲವರು ದೇಣಿಗೆಯನ್ನು ಕೇಳಿದ್ದರು. ಕೊಡುತ್ತೀರೋ ಅಥವಾ ಇಲ್ಲವೋ ಎಂದು ಬೆದರಿಕೆ ಹಾಕಿದ್ದರು. ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ನಮ್ಮ ಪಕ್ಷದ ಶಾಸಕರು ದೇವಾಲಯ ನಿರ್ಮಾಣಕ್ಕೆ ಹಣ ಕೊಟ್ಟಿದ್ದಾರೆ. ಆದರೆ ಈ ಹಿಂದೆ 1989ರಲ್ಲಿ ಹಣ, ಇಟ್ಟಿಗೆ, ಕಬ್ಬಿಣ ಸಂಗ್ರಹಿಸಿದ ಲೆಕ್ಕ ಕೊಟ್ಟಿದ್ದಾರೆಯೇ? ಈಗ ಸಂಗ್ರಹಿಸುತ್ತಿರುವ ಹಣದ ಲೆಕ್ಕ ಕೊಡುವವರು ಯಾರು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಮಂದಿರ ನಿರ್ಮಾಣದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದು, ಹಣ ಕೊಟ್ಟವರ ಮನೆಗಳಿಗೂ ಸ್ಟಿಕ್ಕರ್ ಅಂಟಿಸುತ್ತಿದ್ದಾರೆ. ಈ ಹಣ ದುರ್ಬಳಕೆ ಆಗುವುದಿಲ್ಲವೆ? ಎಂದು ಪ್ರಶ್ನಿಸಿದ್ದೆ. ಆದರೆ, ನನ್ನ ವಿರುದ್ಧ ಕೆಲ ಸಚಿವರು, ಮುಖಂಡರು ಆರೋಪ ಮಾಡಿದ್ದಾರೆ. ಜೆಡಿಎಸ್ ಎಂದೂ ಭಾವನಾತ್ಮಕ ವಿಷಯಗಳನ್ನು ರಾಜಕೀಯಕ್ಕೆ ಬಳಸಿಕೊಂಡಿಲ್ಲ. ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ದೇವೇಗೌಡರ ಕುಟುಂಬ ಎಂದೂ ಧರ್ಮವನ್ನು ದುರ್ಬಳಕೆ ಮಾಡಿಕೊಂಡಿಲ್ಲ. ರಾಜಕೀಯಕ್ಕೆ ಶ್ರೀರಾಮನ ಹೆಸರನ್ನು ಬಳಸಿಕೊಂಡಿಲ್ಲ. ರಾಮನ ಹೆಸರಿನಲ್ಲಿ ಸಂಗ್ರಹಿಸುವ ಹಣಕ್ಕೆ ಪಾರದರ್ಶಕತೆ ಎಲ್ಲಿ ಎಂದು ಪ್ರಶ್ನೆ ಮಾಡಿದ ಕುಮಾರಸ್ವಾಮಿ, ದೇಶದಲ್ಲಿ ಏಳು ವರ್ಷದ ಆಡಳಿತದಲ್ಲಿ ನಿಮ್ಮ ಸಾಧನೆ ಏನು? ಅಡುಗೆ ಅನಿಲ, ಡೀಸೆಲ್, ಪೆಟ್ರೋಲ್ ದರ ಸದ್ಯದಲ್ಲೇ ಮೂರಂಕಿ ತಲುಪಲಿದೆ ಎಂದು ಲೇವಡಿ ಮಾಡಿದರು.

ರಾಮನ ಹೆಸರಿಗೆ ಅಪಮಾನ ಮಾಡಿಲ್ಲ. ರಾಜಕೀಯಕ್ಕಾಗಿ ಬಳಕೆ ಮಾಡಿಕೊಂಡಿಲ್ಲ. ಜನರ ಧ್ವನಿಯಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಅಭಿಮಾನದಿಂದ ಬದುಕಿದ್ದೇವೆ. ಸ್ವಾತಂತ್ರ‍್ಯ ಹೋರಾಟಕ್ಕೆ ಬಿಜೆಪಿಯವರ ಕೊಡುಗೆಯೇನು? ಮುಗ್ಧ ಜನರೊಂದಿಗೆ ಚೆಲ್ಲಾಟವಾಡಬೇಡಿ ಎಂದು ಸಲಹೆ ಮಾಡಿದ ಎಚ್‌ಡಿಕೆ, ಪ್ರಚಾರ ಪಡೆಯಲು, ಪಕ್ಷದ ಕಡೆಗೆ ಜನರನ್ನು ಆಕರ್ಷಿಸಲು ನಾನು ಹೇಳಿಕೆ ಕೊಟ್ಟಿಲ್ಲ ಎಂದರು.

ಪರಿಸರ ಹೋರಾಟಗಾರ್ತಿ ದಿಶಾ ರವಿ ಹಲವು ಸಮಸ್ಯೆಗಳ ವಿರುದ್ಧ ಹೋರಾಟ ಮಾಡಿದ್ದಾರೆ. ಅಂತಹವರು ದೇಶದ ಭದ್ರತೆಗೆ ಧಕ್ಕೆ ತರುತ್ತಾರಾ? ಯಾರಾದರೂ ಮಾತನಾಡಿದರೆ ದೇಶದ್ರೋಹಿ ಪಟ್ಟ ಕಟ್ಟುತ್ತಾರೆ, ಅಘೋಷಿತ ತುರ್ತು ಪರಿಸ್ಥಿತಿ ಸೃಷ್ಟಿಸುತ್ತಿದ್ದು, ಈ ಬಗ್ಗೆ ನಾಗರಿಕರು ಆಲೋಚಿಸಬೇಕಿದೆ'
-ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News