ರಾಮಮಂದಿರ ನಿರ್ಮಾಣಕ್ಕೆ ಬಲವಂತದಿಂದ ಹಣ ವಸೂಲಿ ಮಾಡಿದರೆ ದೂರು ಕೊಡಿ: ಎಂ.ಪಿ.ರೇಣುಕಾಚಾರ್ಯ

Update: 2021-02-17 12:46 GMT

ಬೆಂಗಳೂರು, ಫೆ. 17: ‘ಶ್ರೀರಾಮಮಂದಿರ ನಿರ್ಮಾಣಕ್ಕೆ ಬಲವಂತವಾಗಿ ದೇಣಿಗೆ ಸಂಗ್ರಹ ಮಾಡುತ್ತಿಲ್ಲ. ಒಂದು ವೇಳೆ ಯಾರಾದರೂ ಬಲವಂತವಾಗಿ ದೇಣಿಗೆ ಸಂಗ್ರಹ ಮಾಡಿದರೆ ಅಥವಾ ಸಂಶಯವಿದ್ದರೆ ಅಂತಹವರ ವಿರುದ್ಧ ದೂರು ಕೊಡಿ' ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಸಲಹೆ ಮಾಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮಾಜಿ ಸಿಎಂ ಕುಮಾರಸ್ವಾಮಿಯವರೇ ನೀವು ಏಕೆ ಪರಿವಾರದ ಕಾರ್ಯಕರ್ತರನ್ನು ಹಿಟ್ಲರ್ ಗೆ ಹೋಲಿಸುತ್ತೀರಿ? ಯಾರೂ ಬಲವಂತವಾಗಿ ದೇಣಿಗೆ ಸಂಗ್ರಹಿಸ್ತಿಲ್ಲ. ಬಲವಂತವಾಗಿ ದೇಣಿಗೆ ಸಂಗ್ರಹ ಮಾಡಿದರೆ ಪೊಲೀಸರಿಗೆ ದೂರು ನೀಡಿ' ಎಂದು ಹೇಳಿದರು.

'ಗುರುತು ಹಾಕಿದರೆ ತೋರಿಸಿ': ದೇಣಿಗೆ ನೀಡದ ಮನೆಗಳಿಗೆ ಗುರುತು ಮಾಡಿದರೆ ಎಲ್ಲಿ ಎಂದು ತೋರಿಸಿ, ದಾಖಲೆ ಕೊಡಿ ಎಂದು ಆಗ್ರಹಿಸಿದ ರೇಣುಕಾಚಾರ್ಯ, ವಿಷಯಾಂತರ ಮಾಡಬೇಡಿ. ರಾಮಮಂದಿರ ಬಹಳ ವರ್ಷಗಳ ಕನಸು. ಬಿಜೆಪಿ ಎಂದೂ ಮತಬ್ಯಾಂಕ್ ರಾಜಕಾರಣ ಮಾಡಿಲ್ಲ. ವಿನಾಕಾರಣ ಆರೋಪ ಮಾಡುವುದು ತಮಗೆ ಶೋಭೆ ತರುವುದಿಲ್ಲ ಎಂದರು.

ಮಂದಿರ ನಿರ್ಮಾಣಕ್ಕೆ ಸಂಗ್ರಹಿಸುವ ದೇಣಿಗೆಯಲ್ಲಿ 1 ರೂಪಾಯಿಯೂ ವ್ಯತ್ಯಾಸ ಆಗಲ್ಲ. ನೀವೂ ದೇವಭಕ್ತರು. ನೀವೂ ರಾಮಮಂದಿರಕ್ಕೆ ದೇಣಿಗೆ ಉದಾರವಾಗಿ ಕೊಡಿ. ದೇಣಿಗೆ ಕೊಟ್ಟು ರಾಮನ ಕೃಪೆಗೆ ಒಳಗಾಗಿ. ಆದರೆ ಇಂತಹ ಹೇಳಿಕೆ ನಿಮ್ಮ ವ್ಯಕ್ತಿತ್ವಕ್ಕೆ ತಕ್ಕುದಲ್ಲ ಎಂದು ಹೇಳಿದರು.

ದೇಣಿಗೆ ಕೊಡಿ ಎಂದು ಬೆದರಿಕೆವೊಡ್ಡಿದರೆ ಅಥವಾ ಬಲವಂತ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಆದರೆ, ಜನ ಉದಾರವಾಗಿ ದೇಣಿಗೆ ನೀಡುತ್ತಿದ್ದಾರೆ. ವಿನಾಕಾರಣ ವಿವಾದ ಸೃಷ್ಟಿಸಬೇಡಿ ಎಂದು ಎಚ್ಚರಿಸಿದ ಅವರು, ರಾಮನ ಹೆಸರಿನಲ್ಲಿ ಪ್ರಚಾರಕ್ಕೆ ಯತ್ನ ಸರಿಯಲ್ಲ ಎಂದು ಆಕ್ಷೇಪಿಸಿದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಚಾರದಲ್ಲಿ ಪಕ್ಷ ತೀರ್ಮಾನ ಕೈಗೊಂಡಿದೆ. ಪಕ್ಷದ ತೀರ್ಮಾನಕ್ಕೆ ನಾವು ಬದ್ಧ. ಯತ್ನಾಳ್ ನೊಟೀಸ್ ಸಿಕ್ಕಿಲ್ಲ ಎಂದು ಹೇಳಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಎಲ್ಲವನ್ನೂ ಪಕ್ಷ ನಿರ್ಧರಿಸುತ್ತದೆ. ಯತ್ನಾಳ್ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು.

‘ಬಿಜೆಪಿ ಎಲ್ಲ ಸಮುದಾಯಗಳಿಗೆ ಆದ್ಯತೆ ನೀಡಿರುವುದರಿಂದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯರ ‘ಹಿಂದ-ಅಹಿಂದ' ನಡೆಯುವುದಿಲ್ಲ. ರಾಜ್ಯದ ಜನತೆ ಇದಕ್ಕೆ ಸೊಪ್ಪು ಹಾಕುವುದಿಲ್ಲ. ಸಾಮಾಜಿಕ ನ್ಯಾಯ ತತ್ವದಡಿ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಅವರು ಕೆಲಸ ಮಾಡುತ್ತಿದ್ದಾರೆ'
-ರೇಣುಕಾಚಾರ್ಯ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News