ಅಯೋಧ್ಯೆ ರಾಮಮಂದಿರಕ್ಕೆ ಸರ್ವಧರ್ಮೀಯರು ದೇಣಿಗೆ ನೀಡುತ್ತಿದ್ದಾರೆ: ಯಡಿಯೂರಪ್ಪ

Update: 2021-02-17 14:42 GMT

ಶಿವಮೊಗ್ಗ,ಫೆ.17: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಲವಂತವಾಗಿ ಯಾರನ್ನೂ ಹಣ ಕೇಳುತ್ತಿಲ್ಲ. ವಿರೋಧ ಪಕ್ಷಗಳು ಈ ಬಗ್ಗೆ ಟೀಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ಮಂದಿರ ನಿರ್ಮಾಣದ ದೇಣಿಗೆ ಸಂಗ್ರಹ ವಿಚಾರದಲ್ಲಿ ಯಾವ ವ್ಯಕ್ತಿಯನ್ನು ಬಲವಂತವಾಗಿ ಹಣ ಕೇಳುತ್ತಿಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಭೇದ ಇಲ್ಲದೆ ಎಲ್ಲರೂ ತಮ್ಮ ಕೈಲಾದಷ್ಟು ದೇಣಿಗೆ ನೀಡುತ್ತಿದ್ದಾರೆ ಎಂದರು.

ಮಂದಿರ ನಿರ್ಮಾಣಕ್ಕೆ ಹಣ ಕೊಡದಿದ್ದರೆ ಬೇಡ. ಆದರೆ, ಈ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಬಾರದು. ಬೇರೆ ಕಡೆ ಮಂದಿರ ನಿರ್ಮಿಸಿದರೆ ದೇಣಿಗೆ ನೀಡುತ್ತೇನೆ ಎಂದು ವಿರೋಧ ಪಕ್ಷದ ನಾಯಕರು ಹೇಳಿರುವುದು ಸರಿಯಲ್ಲ. ಇಂತಹ ಹೇಳಿಕೆಗಳು ಸುಪ್ರೀಂಕೋರ್ಟ್ ತೀರ್ಪನ್ನೇ ಪ್ರಶ್ನಿಸಿದಂತಾಗುತ್ತದೆ. ವಿರೋಧ ಪಕ್ಷದ ನಾಯಕರು ಈ ರೀತಿ ಹಗುರವಾಗಿ ಮಾತನಾಡಬಾರದು. ಹಣವನ್ನು ಜನ ಸ್ವಯಂಪ್ರೇರಿತವಾಗಿ ನೀಡುತ್ತಿದ್ದಾರೆ. ಯಾರಿಗೂ ಬಲವಂತ ಮಾಡಿಲ್ಲ ಎಂದು ಹೇಳಿದರು.

ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಮಿಕರು ರಾಮ ಮಂದಿರ ನಿರ್ಮಾಣಕ್ಕಾಗಿ 70 ಲಕ್ಷ ರೂ. ಸಂಗ್ರಹಿಸಿ ಕೊಟ್ಟಿದ್ದಕ್ಕಾಗಿ ಮುಖ್ಯಮಂತ್ರಿಗಳು ಕೃತಜ್ಞತೆ ಸಲ್ಲಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News