‘ಲವ್ ಜಿಹಾದ್' ತಡೆಗೆ ಮುಂದಿನ ಅಧಿವೇಶನದಲ್ಲಿ ಕಾನೂನು ಜಾರಿ: ನಳಿನ್ ಕುಮಾರ್ ಕಟೀಲು

Update: 2021-02-17 15:10 GMT

ವಿಜಯಪುರ, ಫೆ. 17: ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ‘ಲವ್ ಜಿಹಾದ್'ಗೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಕಾನೂನು ಜಾರಿಗೆ ತರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಧ್ಯಕ್ಷ ನಳಿನ್‍ಕುಮಾರ್ ಕಟೀಲು ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ನಗರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಪಕ್ಷದಿಂದ ಏರ್ಪಡಿಸಿದ್ದ ರಾಜ್ಯ ಪ್ರಕೋಷ್ಠ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಲವ್ ಜಿಹಾದ್ ತಡೆಗೆ ರಾಜ್ಯದಲ್ಲಿ ಕಠಿಣ ಕಾನೂನು ಜಾರಿಗೆ ತರುವ ಅಗತ್ಯವಿದ್ದು, ಈ ಬಗ್ಗೆ ಸರಕಾರ ಕ್ರಮ ವಹಿಸಲಿದೆ ಎಂದರು.

ತೀರ್ಪಿಗೆ ಅಪಮಾನ: ಅಯೋಧ್ಯೆಯ ರಾಮಜನ್ಮಭೂಮಿ ಸ್ಥಳ ಎಂದು ಬಿಜೆಪಿ ಅಥವಾ ಆರೆಸ್ಸೆಸ್ ಹೇಳಿರುವುದಲ್ಲ, ಬದಲಿಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆದರೆ, ವಿಪಕ್ಷ ನಾಯಕ ಸಿದ್ದರಾಮಯ್ಯ, ‘ಅಯೋಧ್ಯೆ ವಿವಾದಿತ ಪ್ರದೇಶ' ಎಂದು ಹೇಳುವ ಮೂಲಕ ತೀರ್ಪಿಗೆ ಅಪಮಾನ ಮಾಡಿದ್ದಾರೆ ಎಂದು ಕಟೀಲ್ ಟೀಕಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಮಹಾತ್ಮ ಗಾಂಧಿ ಅವರ ಪುಣ್ಯವಿತ್ತು. ಆದರೆ, ಇದೀಗ ಕಾಂಗ್ರೆಸ್ ಪಕ್ಷದ ಖಾತೆ ಖಾಲಿಯಾಗಿದೆ ಎಂದು ಟೀಕಿಸಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿತು. ತುರ್ತು ಪರಿಸ್ಥಿತಿ ಹೇರುವ ಮೂಲಕ ದೇಶದ ಭಕ್ತರನ್ನು ಜೈಲಿಗೆ ಕಳುಹಿಸಿದೆ. ಹೀಗಾಗಿ ಆ ಪಕ್ಷ ವಿಪಕ್ಷದಲ್ಲಿಯೇ ಉಳಿದಿದೆ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ಈ ಮೊದಲು ಡ್ರಗ್ಸ್ ಹಣದಲ್ಲಿ ಸರಕಾರ ನಡೆಯುತ್ತಿತ್ತು. ಆದರೆ, ಯಡಿಯೂರಪ್ಪ ನೇತೃತ್ವದ ಸರಕಾರ ಡ್ರಗ್ಸ್ ಮುಕ್ತವನ್ನಾಗಿ ಮಾಡಿದೆ ಎಂದ ಅವರು, ದೇಶದಲ್ಲಿ ಗಲಭೆ ಸೃಷ್ಟಿಸಲು ಹಾಗೂ ಪ್ರಧಾನಿ ಮೋದಿ ಹೆಸರಿಗೆ ಕಳಂಕ ತರಲು ಪಿತೂರಿ ನಡೆದಿದೆ. ಆದರೆ, ಇಂತಹ ಷಡ್ಯಂತ್ರಗಳಿಗೆ, ಹೋರಾಟಗಳಿಗೆ ಜಗ್ಗುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News