ರಾಜ್ಯದ ಹಲವು ಪ್ರತಿಷ್ಠಿತ ವೈದ್ಯಕೀಯ ಕಾಲೇಜು, ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ

Update: 2021-02-17 15:07 GMT

ಬೆಂಗಳೂರು, ಫೆ.17: ಕೊರೋನ ಸೋಂಕು ಹೆಚ್ಚಾಗಿದ್ದ ಸಂದರ್ಭದಲ್ಲಿ ಅಕ್ರಮ ಹಾಗೂ ಮೆಡಿಕಲ್ ಸೀಟು ದಂಧೆ ಆರೋಪಗಳ ಬೆನ್ನಲ್ಲೇ ರಾಜ್ಯದ ಏಳಕ್ಕೂ ಅಧಿಕ ಪ್ರತಿಷ್ಠಿತ ವೈದ್ಯಕೀಯ ಕಾಲೇಜು ಹಾಗೂ ಅದರ ಆಡಳಿತ ಮಂಡಳಿಗಳ ಮೇಲೆ ಐಟಿ(ಆದಾಯ ತೆರಿಗೆ ಇಲಾಖೆ) ದಾಳಿ ನಡೆಸಿದೆ.

ಬುಧವಾರ ಕರಾವಳಿ ಭಾಗದ ಮಂಗಳೂರಿನ ದೇರಳಕಟ್ಟೆಯಲ್ಲಿರುವ ಕಣಚೂರು ಶಿಕ್ಷಣ ಸಂಸ್ಥೆ, ಎಜೆ ಮೆಡಿಕಲ್ ಕಾಲೇಜು, ಯೆನಪೋಯ ಮೆಡಿಕಲ್ ಕಾಲೇಜು, ತುಮಕೂರಿನ ಶ್ರೀದೇವಿ ಮೆಡಿಕಲ್ ಕಾಲೇಜು, ಬೆಂಗಳೂರಿನ ಸಪ್ತಗಿರಿ, ಆಕಾಶ್ ವೈದ್ಯಕೀಯ ಕಾಲೇಜುಗಳೂ ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿ, ತನಿಖಾಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡಿದರು.

ಕಣಚೂರು ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮೋನು, ಎಜೆ ಮೆಡಿಕಲ್ ಕಾಲೇಜಿನ ಮುಖ್ಯಸ್ಥ ಎ.ಜೆ.ಶೆಟ್ಟಿ, ಯೆನಪೋಯ ಶಿಕ್ಷಣ ಸಂಸ್ಥೆಯ ಮಾಲಕ ಅಬ್ದುಲ್ಲ ಕುಂಞಿ ಅವರ ಮನೆಗಳು, ಕಚೇರಿಗಳು ಹಾಗೂ ಮೆಡಿಕಲ್ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.

ಅದೇ ರೀತಿ, ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆ, ತುಮಕೂರಿನ ಶ್ರೀದೇವಿ ಮೆಡಿಕಲ್ ಕಾಲೇಜಿನ ಮುಖ್ಯಸ್ಥ ಎಂ.ಆರ್.ಹುಲಿನಾಯ್ಕರ್ ಅವರ ಮನೆ ಹಾಗೂ ಕಾಲೇಜಿನ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಗರದ ಹೆಸರುಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ಮೆಡಿಕಲ್ ಕಾಲೇಜು ಮತ್ತು ಅದರ ಮುಖ್ಯಸ್ಥ ದಯಾನಂದ ಅವರ ಮನೆ ಮೇಲೆ ದಾಳಿ ನಡೆದಿದೆ. ದೇವನಹಳ್ಳಿಯ ಆಕಾಶ್ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನ ಆಡಳಿತ ಮಂಡಳಿ ಹಾಗೂ ಮಾಲಕ ಮುನಿಯಪ್ಪ ಅವರ ಬೆಂಗಳೂರಿನ ಸಹಕಾರ ನಗರದಲ್ಲಿರುವ ನಿವಾಸದ ಮೇಲೂ ದಾಳಿ ನಡೆದಿದೆ.

ಜಪ್ತಿ?: ತುಮಕೂರು ವ್ಯಾಪ್ತಿಯ ಆಸ್ಪತ್ರೆಯ ಮೇಲೆ ದಾಳಿ ನಡೆಸಿದಾಗ ದೈನಂದಿನ ವ್ಯವಹಾರಕ್ಕಾಗಿ ಇಟ್ಟುಕೊಂಡಿದ್ದ ಹತ್ತು ಲಕ್ಷಕ್ಕೂ ಅಧಿಕ ನಗದನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಸತತ 10 ಗಂಟೆಗಳಿಂದ ಅಧಿಕಾರಿಗಳು ಶೋಧ ನಡೆಸಿ, ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದು, ಗುರುವಾರವೂ ಈ ಪರಿಶೀಲನೆ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ. ದಾಳಿ ಸಂದರ್ಭದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News