ಡಾ.ರಾಜ್‍ಕುಮಾರ್ ಪ್ರತಿಮೆ ಕುರಿತು ಹೇಳಿಕೆ: ಕ್ಷಮೆಯಾಚಿಸಿದ ಶಾಸಕ ಎನ್.ಎ.ಹಾರೀಸ್
ಬೆಂಗಳೂರು, ಫೆ.17: ವರನಟ ಡಾ.ರಾಜ್‍ಕುಮಾರ್ ಪ್ರತಿಮೆ ಕುರಿತು ಶಾಸಕ ಎನ್.ಎ.ಹಾರೀಸ್ ಅವರು ನೀಡಿದ್ದ ಹೇಳಿಕೆಯ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೇಳಿಕೆಗೆ ಆಕ್ರೋಶ ವ್ಯಕ್ತವಾದ ಬಳಿಕ ಹಾರೀಸ್ ಅವರು ಕ್ಷಮೆಯಾಚನೆ ಮಾಡಿದ್ದಾರೆ.
ಇಲ್ಲಿನ ಶಾಂತಿನಗರದಲ್ಲಿ ಸ್ಥಾಪಿಸಿರುವ ಡಾ.ರಾಜ್‍ಕುಮಾರ್ ಅವರ ಪ್ರತಿಮೆ ವಿಚಾರಕ್ಕೆ ಹಾರೀಸ್ ಅವರು, ಪ್ರತಿಮೆಗಳನ್ನು ಇಡುವುದೇ ದೊಡ್ಡ ಕತೆ. ಅದರಲ್ಲಿ ಆಫೀಸ್ ಬೇರೆ ಮಾಡಿಕೊಡುವುದಕ್ಕೆ ಆಗುತ್ತಾ, ಮೇಲೆ ರಕ್ಷಣೆ ಬೇಕಾಗಿಲ್ಲ. ಹಾಗೇ ತೆರೆದಿಡಿ. ಅವರು ಯಾರೋ ರಾಜ್‍ಕುಮಾರ್ ಗೆಂದು ಮಾಡಿದ್ದಾರೆ, ಅದನ್ನು ತೆಗಿಸಬೇಕು ಎಂದು ಹೇಳಿದ್ದು, ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇನ್ನು, ಶಾಸಕರ ಹೇಳಿಕೆ ಖಂಡಿಸಿರುವ ರಾಜಕುಮಾರ್ ಅಭಿಮಾನಿಗಳು ಸೇರಿದಂತೆ ಇನ್ನಿತರೆ ಸಂಘಟನೆಗಳ ಮುಖಂಡರು, ಶಾಸಕರು ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದರು.
ಕ್ಷಮೆಯಾಚನೆ
ನಾನು ಹಾಗೆ ಮಾತನಾಡೇ ಇಲ್ಲ. ಯಾರೋ ವಿಡಿಯೊವನ್ನು ಎಡಿಟ್ ಮಾಡಿದ್ದಾರೆ. ಅಲ್ಲದೆ, ಇದರಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಕೂಡ ಕೇಳುತ್ತೇನೆ.
-ಎನ್.ಎ.ಹಾರೀಸ್, ಶಾಸಕ