ದಿಲ್ಲಿ ರೈತ ಹೋರಾಟ ಬೆಂಬಲಿಸಿ ರಾಜ್ಯದಲ್ಲಿ ಗುರುವಾರ ರೈಲು ತಡೆ ಚಳವಳಿ
ಬೆಂಗಳೂರು, ಫೆ.17: ಕೇಂದ್ರ ಸರಕಾರ ಜಾರಿ ಮಾಡಿರುವ ನೂತನ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಹೊಸದಿಲ್ಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ನಾಳೆ(ಫೆ.18) ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ರೈಲು ತಡೆ ಚಳವಳಿ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ರೈತ ಸಂಘಟನೆಗಳ ನಾಯಕರು, ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೊಸದಿಲ್ಲಿ ನಡೆಸುತ್ತಿರುವ ರೈತರ ಚಳವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ. ಹೀಗಾಗಿ ಹೋರಾಟ ನಿರತ ರೈತರಿಗೆ ನೈತಿಕ ಸ್ಥೈರ್ಯ ತುಂಬುವುದಕ್ಕಾಗಿ ಹಾಗೂ ಕೃಷಿ ಕಾಯ್ದೆಗಳ ವಾಪಸ್ ಪಡೆಯಲು ಒತ್ತಾಯಿಸಿ ರೈಲು ತಡೆ ಚಳವಳಿ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ದೇಶಾದ್ಯಂತ ಫೆ.18ರಂದು ಮಧ್ಯಾಹ್ನ 12ರಿಂದ 3ರವರೆಗೆ ರೈಲು ತಡೆ ಚಳವಳಿಗೆ ಕರೆ ನೀಡಲಾಗಿದೆ. ಆ ಪ್ರಕಾರವಾಗಿಯೇ ರಾಜ್ಯದಲ್ಲೂ ರೈಲು ತಡೆದು ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದೆಂದು ರೈತ ಸಂಘಟನೆಗಳ ಸಂಯುಕ್ತ ಹೋರಾಟದ ಸಂಯೋಜಕರಾದ ಬಯ್ಯಾರೆಡ್ಡಿ, ಕೋಡಿಹಳ್ಳಿ ಚಂದ್ರಶೇಖರ್, ಗುರುಪ್ರಸಾದ್ ಕೆರೆಗೋಡು, ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.