ಸಂಪತ್‍ರಾಜ್ ವಿರುದ್ಧ ಅಖಂಡ ಶ್ರೀನಿವಾಸಮೂರ್ತಿ ದೂರು: ಪಕ್ಷದಿಂದ ಉಚ್ಛಾಟಿಸುವಂತೆ ಮನವಿ

Update: 2021-02-17 16:48 GMT

ಬೆಂಗಳೂರು, ಫೆ.17: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಸಾಲಿನ ಆಗಸ್ಟ್ ನಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮೇಯರ್ ಸಂಪತ್‍ರಾಜ್‍ಗೆ ಯಾವುದೆ ಕಾರಣಕ್ಕೂ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬಾರದು. ಅಲ್ಲದೆ, ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನವಿ ಮಾಡಿದ್ದಾರೆ.

ಬುಧವಾರ ನಗರದ ಕುಮಾರಕೃಪಾ ಅತಿಥಿಗೃಹದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಿದ ಅಖಂಡ ಶ್ರೀನಿವಾಸಮೂರ್ತಿ, ಸಂಪತ್‍ರಾಜ್‍ರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಬೇಕು. ಅಲ್ಲದೆ, ಬಿಬಿಎಂಪಿ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು ಎಂದರು.

ಗಲಭೆ ಸಂದರ್ಭದಲ್ಲಿ ದುಷ್ಕರ್ಮಿಗಳು ನನ್ನ ಮನೆಯನ್ನು ಸುಟ್ಟು ಹಾಕಿದರು. ಸರಕಾರಿ ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿಗಳಿಗೂ ನಷ್ಟ ಉಂಟು ಮಾಡಿದರು. ಈ ಘಟನೆಯಲ್ಲಿ ಪೊಲೀಸ್ ಗೋಲಿಬಾರ್ ನಿಂದ ಮೂರ್ನಾಲ್ಕು ಮಂದಿ ಯುವಕರು ಮೃತಪಟ್ಟರು. ಈ ಗಲಭೆಯ ಹಿಂದೆ ಸಂಪತ್‍ರಾಜ್ ಕೈವಾಡವಿದೆ ಎಂದು ಸಿಸಿಬಿ ತನಿಖೆಯಿಂದ ಗೊತ್ತಾಗಿದೆ. ಆದುದರಿಂದ, ಸಂಪತ್‍ರಾಜ್ ವಿರುದ್ಧ ಪಕ್ಷ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶ್ರೀನಿವಾಸಮೂರ್ತಿ ಮನವಿ ಮಾಡಿದ್ದಾರೆ.

ಶ್ರೀನಿವಾಸಮೂರ್ತಿ ಮಾಡಿದ ಮನವಿಗೆ ಸ್ಪಂದಿಸಿದ ರಣದೀಪ್ ಸಿಂಗ್ ಸುರ್ಜೇವಾಲ, ಈ ವಿಚಾರದ ಬಗ್ಗೆ ಪಕ್ಷದ ವರಿಷ್ಠರು ಹಾಗೂ ರಾಜ್ಯ ನಾಯಕರ ಜೊತೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಸುರ್ಜೇವಾಲ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಶ್ರೀನಿವಾಸಮೂರ್ತಿ, ಸಂಪತ್‍ರಾಜ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಿಬಿಎಂಪಿ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡಬಾರದು ಎಂದು ಮನವಿ ಮಾಡಿದ್ದೇನೆ. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸುರ್ಜೇವಾಲ, ಈ ಬಗ್ಗೆ ವರಿಷ್ಠರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News