ಫೆ.24ಕ್ಕೆ ಆತ್ಮಾವಲೋಕನ ವಿಚಾರ ಸಂಕಿರಣ: ಸ್ಪೀಕರ್ ಕಾಗೇರಿ

Update: 2021-02-17 16:52 GMT

ಬೆಂಗಳೂರು, ಫೆ. 17: ‘ಸಂಸದೀಯ ಮೌಲ್ಯಗಳ ಕುಸಿತ ತಡೆಗಟ್ಟಲು ವಿಧಾನ ಮಂಡಲ ಉಭಯ ಸದನಗಳ ಸದಸ್ಯರಿಗಾಗಿ ಫೆ.24ರ ಬೆಳಗ್ಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಆತ್ಮಾವಲೋಕನ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ' ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ವಿಧಾನ ಮಂಡಲ ಉಭಯ ಸದನಗಳ ಸದಸ್ಯರು, ಹಿಂದಿನ ಸ್ಪೀಕರ್, ಸಭಾಪತಿಗಳು, ಪತ್ರಕರ್ತರು, ಸಾಹಿತಿಗಳು, ರಾಜಕೀಯ ಮುಖಂಡರನ್ನು ಆಹ್ವಾನಿಸಲಾಗಿದೆ' ಎಂದು ತಿಳಿಸಿದರು.

‘ಇತ್ತೀಚಿನ ದಿನಗಳಲ್ಲಿ ಸದನ ಕಲಾಪಗಳಲ್ಲಿ ಸಂಸದೀಯ ಮೌಲ್ಯಗಳು ಕುಸಿಯುತ್ತಿರುವ ಕಾರಣ ಆತ್ಮಾವಲೋಕನ ಸಭೆ ನಡೆಯಲಿದ್ದು, ವಿಚಾರ ಮಂಥನ ಮಾಡಲಾಗುವುದು. ಇದು ನೂತನವಾಗಿ ಆಯ್ಕೆಯಾಗಿರುವ ಸದಸ್ಯರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಸ್ಪೀಕರ್ ತಿಳಿಸಿದರು.

ಸದನ ಕಲಾಪದಲ್ಲಿ ರಾಜ್ಯದ ಜನರ ಸಮಸ್ಯೆಗಳ ಪರಿಹರಿಸುವ ನಿಟ್ಟಿನಲ್ಲಿ ಅರ್ಥಪೂರ್ಣ ಚರ್ಚೆ ನಡೆಸಬೇಕು. ಆದರೆ, ಗದ್ದಲ, ಧರಣಿ ಹಿನ್ನೆಲೆಯಲ್ಲಿ ಕಲಾಪ ಮೊಟಕುಗೊಳ್ಳುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಆತ್ಮಾವಲೋಕನ ಸಭೆ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.

ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಭಾಪತಿಗಳಾದ ಶಂಕರಮೂರ್ತಿ, ಬಿ.ಎಲ್.ಶಂಕರ್, ಮಾಜಿ ಸ್ಪೀಕರ್ ಗಳಾದ ಕಾಗೋಡು ತಿಮ್ಮಪ್ಪ, ಕೆ.ಆರ್.ಪೇಟೆ ಕೃಷ್ಣ, ಸುದರ್ಶನ್, ಎಂ.ಸಿ.ನಾಣಯ್ಯ, ಪಿ.ಜಿ.ಆರ್. ಸಿಂಧ್ಯಾ ಸೇರಿದಂತೆ ಶಾಸಕರು, ಸಂಸದರಿಗೆ ಆಹ್ವಾನ ನೀಡಲಾಗಿದೆ ಎಂದು ಅವರು ತಿಳಿಸಿದರು.

ನ್ಯಾಯಮೂರ್ತಿಗಳಾದ ಫಣೀಂದ್ರ, ನ್ಯಾ.ಸದಾಶಿವ, ನ್ಯಾ.ಎನ್.ಕುಮಾರ್ ಸೇರಿದಂತೆ ಹಲವು ನ್ಯಾಯಾಧೀಶರು ಪಾಲ್ಗೊಳ್ಳುವರು. ಮಾಧ್ಯಮ ಕ್ಷೇತ್ರದ ಮುಖ್ಯಸ್ಥರು, ಸಂಪಾದಕರು, ಸಾಹಿತಿಗಳು, ಸರಕಾರದ ನಿವೃತ್ತ ಕಾರ್ಯದರ್ಶಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News