ಡಿಕೆಶಿ ಪುತ್ರಿ- ಸಿದ್ಧಾರ್ಥ ಹೆಗ್ದೆ ಪುತ್ರನ ವಿವಾಹ ಆರತಕ್ಷತೆ: ರಾಹುಲ್-ಪ್ರಿಯಾಂಕಾ ಗಾಂಧಿ ಆಗಮನ

Update: 2021-02-17 17:14 GMT

ಬೆಂಗಳೂರು, ಫೆ.17: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಉದ್ಯಮಿ ಸಿದ್ಧಾರ್ಥ ಅವರ ಪುತ್ರ ಅಮರ್ಥ್ಯ ಹೆಗ್ಡೆ ಅವರ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್‍ನಾಥ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಹಲವು ಗಣ್ಯರು ಬುಧವಾರ ಬೆಂಗಳೂರಿಗೆ ಆಗಮಿಸಿದರು.

ದೇವನಹಳ್ಳಿ ಸಮೀಪದ ಖಾಸಗಿ ರೆಸಾರ್ಟ್‍ನಲ್ಲಿ ಇಂದು ಸಂಜೆ ನಡೆದ ಐಶ್ವರ್ಯ-ಅಮರ್ಥ್ಯ ಅದ್ಧೂರಿ ವಿವಾಹ ಆರತಕ್ಷತೆ ಸಮಾರಂಭದಲ್ಲಿ ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯನ್ನು ಸ್ವಾಗತಿಸಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ದಂಡು ವಿಮಾನ ನಿಲ್ದಾಣದ ಬಳಿ ಸೇರಿತ್ತು.

ಹೊಸದಿಲ್ಲಿಯಿಂದ ಆಗಮಿಸಿದ ಪ್ರಿಯಾಂಕಾ ಗಾಂಧಿ ವಿಮಾನ ನಿಲ್ದಾಣದಿಂದ ನೇರವಾಗಿ ಸಮೀಪದ ಖಾಸಗಿ ಹೊಟೇಲ್‍ಗೆ ತೆರಳಿದರು. ಪುದುಚೇರಿಯಿಂದ ಆಗಮಿಸಿದ ರಾಹುಲ್ ಗಾಂಧಿ ಜೊತೆ ಸಿದ್ದರಾಮಯ್ಯ ಹಾಗೂ ಸುರ್ಜೇವಾಲ ಸೇರಿದಂತೆ ಇನ್ನಿತರ ಮುಖಂಡರು ರೆಸಾರ್ಟ್ ನತ್ತ ತೆರಳಿದರು.

ಡಿ.ಕೆ.ಶಿವಕುಮಾರ್ ಪುತ್ರಿಯ ವಿವಾಹದ ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದಷ್ಟೆ ಬೆಂಗಳೂರಿಗೆ ಬಂದಿರುವ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ, ಈ ವೇಳೆ ಯಾವುದೆ ರೀತಿಯ ರಾಜಕೀಯ ಚರ್ಚೆಗಳ ಸಭೆಗಳಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ಇದೊಂದು ಖಾಸಗಿ ಭೇಟಿಯಾಗಿರುವುದರಿಂದ, ಪಕ್ಷದ ಚಟುವಟಿಕೆಗಳ ಬಗ್ಗೆ ಚರ್ಚೆ ಬೇಡ ಎಂದು ಮುಂಚಿತವಾಗಿಯೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಂದೇಶ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News