ಚಿಕ್ಕಮಗಳೂರು: ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡರು

Update: 2021-02-17 17:56 GMT

ಚಿಕ್ಕಮಗಳೂರು, ಫೆ.17: ಕೇಂದ್ರ ಸರಕಾರ ಜಾರಿ ಮಾಡಲು ಉದ್ದೇಶಿಸಿರುವ ನೂತನ ಕೃಷಿ ಮಸೂದೆಗಳು ರೈತ ವಿರೋಧಿ ಕಾಯ್ದೆಗಳಾಗಿದ್ದು, ಕಳೆದ ಮೂರು ತಿಂಗಳುಗಳಿಂದ ಈ ಕಾಯ್ದೆಗಳನ್ನು ವಿರೋಧಿಸಿ ರೈತರು ದಿಲ್ಲಿಯ ಗಡಿಗಳಲ್ಲಿ ಚಳವಳಿ ನಡೆಸುತ್ತಿದ್ದರೂ ಕೇಂದ್ರ ಸರಕಾರ ರೈತರ ಸಮಸ್ಯೆ ಆಲಿಸಲು ನಿರ್ಲಕ್ಷ್ಯ ವಹಿಸಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ. ಕೂಡಲೇ ರೈತ ವಿರೋಧಿ ಕಾಯ್ದೆಗಳನ್ನು ಕೇಂದ್ರ ಸರಕಾರ ಹಿಂಪಡೆಯಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ರೂಬಿನ್ ಮೋಸೆಸ್ ಹೇಳಿದ್ದಾರೆ.

ಕೇಂದ್ರ, ರಾಜ್ಯ ಸರಕಾರಗಳು ರೈತರು, ಕಾರ್ಮಿಕರು, ಬಡವರ ವಿರೋಧಿ ಆಡಳಿತ ನೀಡುತ್ತಿದೆ ಎಂದು ಆರೋಪಿಸಿ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಬುಧವಾರ ವಿಶಿಷ್ಟವಾಗಿ ಸುದ್ದಿಗೋಷ್ಠಿ ನಡೆಸಿದ ಅವರು, ಕೇಂದ್ರ ಸರಕಾರ ರೈತರಿಗೆ ಬೇಡವಾದ ಕಾಯ್ದೆಗಳನ್ನು ಯಾರ ಹಿತಕ್ಕಾಗಿ ಜಾರಿ ಮಾಡುತ್ತಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ದಿಲ್ಲಿಯ ಗಡಿಗಳಲ್ಲಿ ಸಾವಿರಾರು ರೈತರು ಕಳೆದ ಮೂರು ತಿಂಗಳುಗಳಿಂದ ಚಳವಳಿ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ಸೌಜನ್ಯಕ್ಕಾದರೂ ಹೋರಾಟಗಾರರ ಮನವಿ ಆಲಿಸದೇ ನಿರ್ಲಕ್ಷ್ಯ ವಹಿಸಿರುವುದಲ್ಲದೇ ರೈತರ ಹೋರಾಟ ಹತ್ತಿಕ್ಕಲು ಪೊಲೀಸರ ಮೂಲಕ ಕಿರುಕುಳ ನೀಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅವಮಾನವಾಗಿದೆ ಎಂದು ಅವರು ಟೀಕಿಸಿದರು.

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೇಂದ್ರ ಸರಕಾರ ಕೃಷಿ ಮಾರುಕಟ್ಟೆಯನ್ನು ಕಾರ್ಪೊರೆಟ್ ಕಂಪೆನಿಗಳಿಗೆ ನೀಡಲು ಮುಂದಾಗಿದೆ. ರೈತರು ಹಿಂದೆ ಎಪಿಎಂಸಿ ಬಿಟ್ಟು ಬೇರೆ ಕಡೆ ತಮ್ಮ ಉತ್ಪನ್ನಗಳನ್ನು ಮಾರುವಂತಿರಲಿಲ್ಲ. ಆದರೆ ಹೊಸ ಕಾಯ್ದೆ ಮೂಲಕ ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಯಾರಿಗೆ ಬೇಕಾದರೂ ಮಾರಬಹುದು ಎಂಬ ಮಸೂದೆಯನ್ನು ತಂದಿದೆ. ಹಿಂದೆ ಎಪಿಎಂಸಿಯಲ್ಲಿ ದಲ್ಲಾಳಿಗಳಿಂದ ರೈತರಿಗೆ ಆಗುತ್ತಿರುವ ಸಮಸ್ಯೆಗಳನ್ನು ಅರಿತ ಸರಕಾರ ಬೆಲೆ ಕುಸಿತ ಸಂಭವಿಸಿದ ಸಂದರ್ಭದಲ್ಲಿ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸುತ್ತಿತ್ತು. ಈ ವ್ಯವಸ್ಥೆಯಿಂದ ಸರಕಾರಕ್ಕೆ ನಷ್ಟ ಉಂಟಾಗುತ್ತಿದೆ ಎಂಬ ಕಾರಣಕ್ಕೆ ಮೋದಿ ಸರಕಾರ ಎಪಿಎಂಸಿ ವ್ಯವಸ್ಥೆಯನ್ನು ಖಾಸಗೀಕರಣ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಸರಕಾರ ಕಂಟ್ರಾಕ್ಟ್ ಫಾರ್ಮಿಂಗ್ ವ್ಯವಸ್ಥೆಯನ್ನು ಜಾರಿ ಮಾಡಲು ಮುಂದಾಗಿದ್ದು, ಈ ವ್ಯವಸ್ಥೆಯಲ್ಲೂ ರೈತರ ಶೋಷಣೆ ನಡೆಯುತ್ತದೆ. ರೈತರು ಖಾಸಗಿಯವರೊಂದಿಗೆ ಒಪ್ಪಂದ ಮಾಡಿಕೊಂಡು ಬೆಳೆದ ಉತ್ಪನ್ನಕ್ಕೆ ಬೆಲೆ ಇಳಿಕೆಯಾದಾಗ ರೈತರಿಗೆ ವಂಚನೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ರೈತರು ನ್ಯಾಯಲಯದ ಮೊರೆ ಹೋಗುವಂತಿಲ್ಲ. ಆದರೆ ಅಧಿಕಾರಿಗಳ ಮೊರೆ ಹೋಗಬಹುದು. ಆದರೆ ಖಾಸಗಿಯವರ ಪ್ರಭಾವದಿಂದ ಅಧಿಕಾರಿಗಳು ನ್ಯಾಯ ಕೊಡಿಸುತ್ತಾರೆಂಬುದು ಕನಸಿನ ಮಾತಾಗಿದೆ ಎಂದ ಅವರು, ಅಗತ್ಯ ವಸ್ತುಗಳ ತಿದ್ದುಪಡಿ ಮಸೂದೆ ಮೂಲಕ ಅಗತ್ಯ ವಸ್ತುಗಳೆಂದು ಹಿಂದೆ ಪಟ್ಟಿ ಮಾಡಿದ್ದ ಉತ್ಪನ್ನಗಳನ್ನು ಈ ಮಸೂದೆಯಿಂದ ಹೊರಗಿಟ್ಟು ಅದರ ಬೆಲೆ ಹೆಚ್ಚಾದಾಗ ಮಾತ್ರ ಸರಕಾರ ಹಸ್ತಕ್ಷೇಪ ಮಾಡುವುದಾಗಿ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.

ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಹೆಚ್ಚಳ ದಿನದಿಂದ ಜನಸಾಮಾನ್ಯರ ಬದುಕು ಕಷ್ಟವಾಗುತ್ತಿದ್ದು, ಬೆಲೆ ಏರಿಕೆ ನಿಯಂತ್ರಣಕ್ಕೆ ಕೇಂದ್ರ ಸರಕಾರ ಯಾವುದೇ ಕ್ರಮವಹಿಸುತ್ತಿಲ್ಲ. ರಾಜ್ಯದ ಬಿಜೆಪಿ ಸರಕಾರ ಬಿಪಿಎಲ್ ಕಾರ್ಡುದಾರರ ಮಾನದಂಡಗಳನ್ನು ಬದಲಾಯಿಸಲು ಹೊರಟಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನವಿರೋಧಿ ಆಡಳಿತ ನಡೆಸುತ್ತಿವೆ. ಮುಂದಿನ ದಿನಗಳಲ್ಲಿ ಬಿಜೆಪಿ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಇದೇ ವೇಳೆ ರೂಬಿನ್ ಮೋಸೆಸ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸಿಲ್ವಸ್ಟರ್, ಐ.ಎಂ.ಶರೀಫ್, ಕಾರ್ತಿಕ್ ಚೆಟ್ಟಿಯಾರ್, ನಯಾಝ್, ಜುಬೇರ್, ಗಂಗಾಧರ್, ರಾಯಲ್ ಶರೀಫ್, ಸುದೀಪ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News