ಪ್ರಿಯಾಂಕಾ, ರಾಹುಲ್ ಗಾಂಧಿಗೆ ಬೇಳೆ, ಬಟಾಣಿಗೂ ವ್ಯತ್ಯಾಸ ಗೊತ್ತಿಲ್ಲ: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

Update: 2021-02-17 18:12 GMT

ಬೆಂಗಳೂರು, ಫೆ.17: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರವು ರೈತರ ಆದಾಯವನ್ನು ದ್ವಿಗುಣಗೊಳಿಸಲು ಶ್ರಮಿಸುತ್ತಿದೆ. ಆದರೆ, ರೈತರನ್ನು ಹಾದಿ ತಪ್ಪಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.

ಬುಧವಾರ ನಗರದ ಕುಮಾರಕೃಪಾ ಅತಿಥಿ ಗೃಹದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿಗೆ ಬೇಳೆ, ಬಟಾಣಿಗೂ ವ್ಯತ್ಯಾಸ ಗೊತ್ತಿಲ್ಲ. ಅವರು ಎಂದಾದರೂ ಕೃಷಿ ಭೂಮಿಗೆ ಹೋಗಿದ್ದಾರಾ? ಅವರಿಗೆ ರೈತರ ಕಷ್ಟಗಳ ಬಗ್ಗೆ ಏನು ಗೊತ್ತಿಲ್ಲ ಎಂದು ಟೀಕಿಸಿದರು.

ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ವಿಫಲವಾಗಿದೆ. ರಾಜ್ಯ ಕಾಂಗ್ರೆಸ್‍ನಲ್ಲಿಯೂ ಬಣಗಳಿವೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವವೇ ಇಲ್ಲದಂತಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್‍ನಲ್ಲಿ ರಾಹುಲ್ ಗಾಂಧಿ ನಾಯಕತ್ವ ವಿಫಲವಾಗಿದೆ. ಸಂಸತ್ತಿನಲ್ಲಿ ಅವರು ಮಾತನಾಡಿದ್ದನ್ನು ಎಲ್ಲರೂ ನೋಡಿದ್ದಾರೆ. ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕತ್ವವೇ ಬಹಳ ಗೊಂದಲದಲ್ಲಿದೆ. ಕಾಂಗ್ರೆಸ್ ಪಕ್ಷ ಸಂಘಟನೆಗೆ ಶ್ರಮವೂ ಇಲ್ಲ, ದೂರದೃಷ್ಟಿಯೂ ಇಲ್ಲ. ನಮ್ಮ ಬಿಜೆಪಿ ಪಕ್ಷದ ಬಲದ ಮೇಲೆ ನಮಗೆಲ್ಲ ವಿಶ್ವಾಸವಿದೆ ಎಂದು ಅರುಣ್ ಸಿಂಗ್ ಹೇಳಿದರು.

ರಾಮಮಂದಿರ ನಿರ್ಮಾಣಕ್ಕೆ ಸಂಗ್ರಹಿಸಲಾಗುತ್ತಿರುವ ದೇಣಿಗೆ ವಿಚಾರದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ. ಅವರು ಯಾಕೆ ಇಷ್ಟು ಸಣ್ಣ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದ್ದಾರೆ. ಅವರಿಗೆ ಚಂದಾ ಹಣ ಸಿಗುವುದಿಲ್ಲ ಎಂಬ ಯೋಚನೆ ಅಷ್ಟೇ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಕುಟುಂಬ ಸದಸ್ಯರ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡುತ್ತಿರುವ ಹೇಳಿಕೆಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ನೇತೃತ್ವದ ಸರಕಾರವು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಬಿಜೆಪಿಯ ಮೂಲ ವಿಷಯಗಳನ್ನು ಜಾರಿಗೆ ತರುವ ಉದ್ದೇಶದಿಂದ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.

ಬಿಜೆಪಿಯ ನಾಯಕರು ವೈಯಕ್ತಿಕ ಸ್ವಾರ್ಥವನ್ನು ದೂರ ಇಡಬೇಕು. ಪಕ್ಷದ ಎಲ್ಲ ಕಾರ್ಯಕರ್ತರ ಬಗ್ಗೆ ಯೋಚನೆ ಮಾಡಬೇಕು ಎಂದು ಅರುಣ್ ಸಿಂಗ್ ಹೇಳಿದರು. ಬುಧವಾರ ರಾತ್ರಿ ಕುಮಾರಕೃಪಾ ಅತಿಥಿ ಗೃಹದಲ್ಲೆ ವಾಸ್ತವ್ಯ ಹೂಡಲಿರುವ ಅರುಣ್ ಸಿಂಗ್, ನಾಳೆ ಬೆಳಗ್ಗೆ ಹಾಸನದಲ್ಲಿ ನಡೆಯಲಿರುವ ಪ್ರಕೋಷ್ಠಗಳ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News