×
Ad

ವಿರಾಜಪೇಟೆ: ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ; ಅಣುಕು ಶವಯಾತ್ರೆ

Update: 2021-02-17 23:51 IST

ಮಡಿಕೇರಿ, ಫೆ.17: ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ವಿರಾಜಪೇಟೆ ಮತ್ತು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ವಿರಾಜಪೇಟೆಯಲ್ಲಿ ಪ್ರತಿಭಟನೆ ನಡೆಸಿದರು.

ಗಡಿಯಾರ ಕಂಬದ ಬಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಬೆಲೆ ಏರಿಕೆಯನ್ನು ನಿಯಂತ್ರಿಸಲಾಗದ ಸರ್ಕಾರಗಳನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು. 

ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ ಅವರು ನಿತ್ಯೋಪಯೋಗಿ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಬಡವರು, ಕೂಲಿ ಕಾರ್ಮಿಕರು, ಟ್ಯಾಕ್ಸಿ ಮತ್ತು ಆಟೋ ಚಾಲಕರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆದಾಯ ಕುಂಟಿತವಾಗುತ್ತಿದ್ದು, ಖರ್ಚು ದುಬಾರಿಯಾಗುತ್ತಿದೆ. ಜನಸಾಮಾನ್ಯರ ಸಂಕಷ್ಟಗಳನ್ನು ಅರಿಯದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು. ಪರಿಸ್ಥಿತಿ ಹೀಗೆ ಮುಂದುವರಿದರೆ ದೇಶದ ಆರ್ಥಿಕ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಂಗ್ರೆಸ್ ವಕ್ತಾರ ಹರೀಶ್ ಬೋಪಣ್ಣ ಮಾತನಾಡಿ, ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು. ತಕ್ಷಣ ತೈಲೋತ್ಪನ್ನಗಳು ಹಾಗೂ ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಭಾರತ್ ಬಂದ್ ಗೆ ಕರೆ ನೀಡಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎಂದು ತಿಳಿಸಿದರು.

ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಪೊನ್ನಕ್ಕಿ, ನಗರಾಧ್ಯಕ್ಷ ಜಿ.ಜಿ.ಮೋಹನ್, ನಗರ ಮಹಿಳಾ ಅಧ್ಯಕ್ಷೆ ದಿವ್ಯ, ಪ.ಪಂ ಸದಸ್ಯ ಪೃಥ್ವಿನಾಥ್, ಮಹಮ್ಮದ್ ರಾಫಿ, ಪಕ್ಷದ ಪ್ರಮುಖರಾದ ಟಾಟು ಮೊಣ್ಣಪ್ಪ, ಎಂ.ಎಸ್.ಪೊವಯ್ಯ, ಧ್ರುವಕುಮಾರ್, ಸೈನುದ್ದೀನ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಸ್ಕೂಟರ್ ನ ಅಣುಕು ಶವಯಾತ್ರೆ ಮಾಡಿದ ಪ್ರತಿಭಟನಾಕಾರರು, ತಾಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News