ಮೈಸೂರು: ರೈಲು ತಡೆಗೆ ಆಗಮಿಸಿದ ರೈತರ ಬಂಧನ

Update: 2021-02-18 14:57 GMT

ಮೈಸೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ಕಾನೂನುಗಳನ್ನು ವಿರೋಧಿಸಿ ದೇಶವ್ಯಾಪಿ ಕರೆ ನೀಡಿರುವ ರೈಲು ತಡೆ ಚಳುವಳಿಗೆ ಮೈಸೂರಿನಲ್ಲಿ ಬೆಂಬಲ ವ್ಯಕ್ತಪಡಿಸಿ ರೈತರು ರೈಲು ತಡೆಗೆ ಆಗಮಿಸುತ್ತಿದ್ದಂತೆ ಪೊಲೀಸರು ರೈಲ್ವೆ ನಿಲ್ದಾಣದ ಒಳಗೆ ಪ್ರವೇಶ ನೀಡದೆ ತಡೆದು  ಬಂಧಿಸಿದರು.

ರೈತ ಕಿಸಾನ್ ಮೋರ್ಚ ಕರೆ ನೀಡಿದ್ದರ ರೈಲು ತಡೆ ಚಳುವಳಿ ಬೆಂನಲಿಸಿ ರೈತ-ದಲಿತ-ಕಾರ್ಮಿಕ ಐಕ್ಯ ಹೋರಾಟ ಸಮಿತಿಯವರು ರಾಜ್ಯ ಕಬ್ಬು ಬೆಳೆಗಾರರ ಸಂಘದವರ ನೇತೃತ್ವದಲ್ಲಿ ಗುರುವಾರ ಮೈಸೂರು ರೈಲು ನಿಲ್ದಾಣದ ಬಳಿ ಜಮಾಯಿಸಿದರು.

ರೈತರು ರೈಲು ನಿಲ್ದಾಣ ಒಳ ಪ್ರವೇಶ ಮಾಡದಂತೆ ಪೊಲೀಸರು ಮುಂಜಾಗ್ರತೆ ವಹಿಸಿ ರೈಲು ನಿಲ್ದಾಣದ ಮುಂಭಾಗ ಬ್ಯಾರಿಕೇಡ್ ಗಳನ್ನು ಹಾಕಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ರೈತರು ರೈಲು ನಿಲ್ದಾಣ ಪ್ರವೇಶದ್ವಾರದ ಮುಂಭಾಗವೇ ಧರಣಿ ಕುಳಿತು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಒಳಪ್ರವೇಶಿಸಲು ಯತ್ನಿಸುತ್ತಿದ್ದಂತೆ ಪೊಲೀಸರು ಬಂಧಿಸಿದರು.

ಇದೇ ವೇಳೆ ರೈತನೋರ್ವ ಬಸ್ಸಿಗೆ ತನ್ನ ತಲೆಯನ್ನು ಚಚ್ಚಿಕೊಂಡರೆ, ಮತ್ತೊಬ್ಬ ರೈತ ಬಸ್ ಎದುರು ನಿಂತು ಕೊಂಡು ಅಡ್ಡ ಮಲಗಲು ಯತ್ನಿಸಿದರು. ಕೆಲವು ರೈತರು ಪೊಲೀಸರ ಕಣ್ಣುತಪ್ಪಿಸಿ ಒಳಪ್ರವೇಶ ಮಾಡಲು ಯತ್ನಿಸಿದರೂ ಪೊಲೀಸರು ಅವಕಾಶ ನೀಡದೆ. ಅವರನ್ನು ತಡೆದು ಬಂಧಿಸಿ ಕರೆದೊಯ್ದರು. ರೈಲು ನಿಲ್ದಾಣದ ಒಳ ಪ್ರವೇಶಕ್ಕೆ ಅವಕಾಶ ನೀಡದ ಪೊಲೀಸರ ಕ್ರಮದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ರೈತ ಮುಖಂಡ ಹಳ್ಳಿಕೆರಹುಂಡಿ ಭಾಗ್ಯರಾಜ್, ಕೇಂದ್ರ ಸರ್ಕಾರ ರೈತ ವಿರೋಧಿ ಮಸೂದೆಗಳನ್ನು ಜಾರಿ ಮಾಡುವ ಮೂಲಕ ರೈತರ ಬೆನ್ನಿಗೆ ಒಂದೊಂದೆ ಮೊಳೆಗಳನ್ನು ಹೊಡೆಯತ್ತಿದೆ. ರೈತರ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಮೋದಿ ಇಂದು ಕಾರ್ಪೋರೇಟ್ ಕಂಪನಿಗಳ‌ ಗುಲಾಮರಾಗಿದ್ದಾರೆ ಎಂದು ಕಿಡಿಕಾರಿದರು. ರೈಲು ತಡೆ ಚಳುವಳಿಗೆ ಆಗಮಿಸುತ್ತಿರುವ ರೈತರನ್ನು ಅಲ್ಲಲ್ಲಿ ಪೊಲೀಸರು ತಡೆಯುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದರು.

ಇದೇ ವೇಳೆ ರೈತ ಮುಖಂಡರುಗಳಾದ ಅತ್ತಹಳ್ಳಿ ದೇವರಾಜ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ದಲಿತ ಮುಖಂಡ ಬನ್ನಹಳ್ಳಿ ಸೋಮಣ್ಣ, ಬರಡನಪುರ ನಾಗರಾಜ್, ಹಾಡ್ಯ ರವಿ, ಮಂಜುಳ, ರೇಖಾ, ಸೋಮಸುಂದರ್, ರಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಮುಖ್ಯಮಂತ್ರಿ ಜಾಹೀರಾತಿಗೆ ಚಪ್ಪಲಿಯಲ್ಲಿ ಹೊಡೆದ ರೈತ
ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ರೈಲು ತಡೆಗೆ ಮುಂದಾದ ರೈತ ಮುಖಂಡನೊಬ್ಬ ಬಂಧನದ ವೇಳೆ ಬಸ್‍ನಲ್ಲಿ ಮುಖ್ಯಮಂತ್ರಿಗಳ ಜಾಹೀರಾತು ಕಂಡು ಕೆರಳಿ ಚಪ್ಪಲಿಯಲ್ಲಿ ಹೊಡೆದ ಘಟನೆ ನಡೆಯಿತು.

ರೈತ ಕಿಸಾನ್ ಮೋರ್ಚಾ ಕರೆ ನೀಡಿದ್ದ ರೈಲು ರೋಕೊ ಚಳುವಳಿ ಬೆಂಬಲಿಸಿ ರೈತ-ದಲಿತ-ಕಾರ್ಮಿಕ ಐಕ್ಯ ಹೋರಾಟ ಸಮಿತಿಯವರು ರೈಲ್ವೆ ನಿಲ್ದಾಣದ ಮುಂಭಾಗ ಜಮಾಯಿಸಿ ರೈಲು ತಡೆಗೆ ಮುಂದಾದರು. ಇದೇ ವೇಳೆ ಪೊಲೀಸರು ರೈತರನ್ನು ಬಂಧಿಸಲು ಮುಂದಾದರು. ಈ ವೇಳೆ ರೈತನೊಬ್ಬ ಬಸ್‍ನಲ್ಲಿ ಹಾಕಲಾಗಿದ್ದ ಮುಖ್ಯಮಂತ್ರಿಗಳ ಜಾಹೀರಾತು ಕಂಡು ತಾನು ಹಾಕಿದ್ದ ಚಪ್ಪಲಿಯಲ್ಲಿ ಹೊಡೆಯಲು ಮುಂದಾದ. ತಕ್ಷಣ ಪೊಲೀಸರು ಆತನನ್ನು ವಶಕ್ಕೆ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News