ಸಿದ್ದರಾಮಯ್ಯ, ನಟ ಯಶ್ ನನ್ನ ಅಂತ್ಯಕ್ರಿಯೆಗೆ ಬರಬೇಕೆಂದು ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

Update: 2021-02-18 14:53 GMT

ಮಂಡ್ಯ, ಫೆ.18: ಕೋಡಿದೊಡ್ಡಿ ಗ್ರಾಮದ ಯುವಕನೋರ್ವ “ಮಾಜಿ ಸಿಎಂ ಸಿದ್ದರಾಮಯ್ಯ ಹಾಗು ನಟ ಯಶ್ ನನ್ನ ಅಂತ್ಯಕ್ರಿಯೆಗೆ ಬರಬೇಕು” ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ.

ಆತ್ಮಹತ್ಯೆ ಶರಣಾಗಿದ್ದ ಜಿಲ್ಲೆಯ ಯುವಕನ ಅಂತ್ಯಸಂಸ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಪಾಲ್ಗೊಂಡು ನಮನ ಸಲ್ಲಿಸಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.

ತಾಲೂಕಿನ ಕೆರಗೋಡು ಬಳಿಯ ಕೋಡಿದೊಡ್ಡಿ ಗ್ರಾಮದ ಯುವಕ ಕೃಷ್ಣ, ತನ್ನ ಅಂತ್ಯಕ್ರಿಯೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಚಿತ್ರನಟ ಯಶ್ ಭಾಗವಹಿಸಬೇಕು ಎಂದು ಡೆತ್‍ನೋಟ್ ಬರೆದು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದ. ಯುವಕನ ಅಭಿಲಾಷೆಯಂತೆ ಸಿದ್ದರಾಮಯ್ಯ ಯುವಕನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಯುವಕನ ಕುಟುಂಬದವರಿಗೆ ಸಾಂತ್ವನ ಹೇಳಿದರು. ಆದರೆ, ಗೈರು ಹಾಜರಾದ ನಟ ಯಶ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಸಂತಾಪ ಸೂಚಿಸಿ ಮಾತನಾಡಿದ ಸಿದ್ದರಾಮಯ್ಯ, ಅಭಿಮಾನಿ ಆಗಲೀ, ಆಗದೇ ಇರಲಿ. ಅಂತ್ಯಕ್ರಿಯೆಗೆ ಬರಬೇಕು ಎಂದು ಡೆತ್‍ನೋಟ್‍ನಲ್ಲಿ ಬರೆದಿದ್ದ ಅದಕ್ಕೆ ಬಂದೆ. ಆದರೆ, ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರ ಅಲ್ಲ ಎಂದರು.

ಸಿದ್ದರಾಮಯ್ಯ ಅಭಿಮಾನಿಯಾಗಿದ್ದು, ಅವರು ತನ್ನ ಅಂತ್ಯಕ್ರಿಯೆಗೆ ಬರಬೇಕೆಂದು ಡೆತ್‍ನೋಟ್‍ನಲ್ಲಿ ಬರೆದಿದ್ದನಂತೆ. ಈ ವಿಷಯ ತಿಳಿದು ಅಂತ್ಯಕ್ರಿಯೆಗೆ ಬರಬೇಕೆಂದು ಬಂದೆ. ನನಗೆ ಅಂತಹ ಪರಿಚಯ ಇಲ್ಲ. ಆದರೆ, ಪಾಪ ಆತ ಮನೆಯನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ. ಈತನ ಸಾವಿನಿಂದ ಮನೆಯವರಿಗೆ ನಷ್ಟ ಆಗಿದೆ ಎಂದು ಅವರು ಕಂಬನಿ ಮಿಡಿದರು.

ಆತನ ತಾಯಿ, ಅಣ್ಣನನ್ನು ನಾನು ಮಾತನಾಡಿಸಿದೆ. ಇನ್ನೂ ಚಿಕ್ಕ ವಯಸ್ಸು, ಮದುವೆಯಾಗಿಲ್ಲ. ಚಿಕ್ಕ ವಯಸ್ಸಿಗೇ ಪ್ರಾಣ ಕಳೆದುಕೊಂಡಿರುವುದು ನೋವಿನ ಸಂಗತಿ. ಇದು ಕುಟುಂಬಕ್ಕೆ ಮಾತ್ರವಲ್ಲ, ಸಮಾಜಕ್ಕೂ ನಷ್ಟ. ಆತನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಿದ್ದರಾಮಯ್ಯ ಪ್ರಾರ್ಥಿಸಿದರು.

ಮಾಜಿ ಶಾಸಕ ರಮೇಶ್‍ಬಾಬು ಬಂಡಿಸಿದ್ದೇಗೌಡ, ರವಿಕುಮಾರ್ ಗಣಿಗ, ರುದ್ರಪ್ಪ, ಸೊಸೈಟಿ ಚಂದ್ರು, ಇತರೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಯಶ್ ಟ್ವೀಟ್: “ಅಭಿಮಾನಿಗಳ ಅಭಿಮಾನವೇ ನಮ್ಮ ಬದುಕು, ಜೀವನ, ಹೆಮ್ಮೆ. ಆದರೆ, ಮಂಡ್ಯದ ಕೃಷ್ಣನ ಅಭಿಮಾನಕ್ಕೆ ಹೆಮ್ಮೆ ಪಡಲು ಸಾಧ್ಯವೆ? ಅಭಿಮಾನಿಗಳ ಅಭಿಮಾನಕ್ಕೆ ಇದು ಮಾದರಿಯಾಗದಿರಲಿ” ಎಂದು ಯಶ್ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News