ದೇಶ ಸ್ವತಂತ್ರಗೊಂಡ ಬಳಿಕ ಪ್ರಥಮ ಬಾರಿ ಮಹಿಳೆಯೊಬ್ಬಳನ್ನು ಗಲ್ಲಿಗೇರಿಸಲು ಮಥುರಾ ಜೈಲಿನಲ್ಲಿ ಸಿದ್ಧತೆ

Update: 2021-02-18 11:06 GMT

ಮಥುರಾ: ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹಿಳೆಯೊಬ್ಬಳನ್ನು ಗಲ್ಲಿಗೇರಿಸಲು ಮಥುರಾ ಜಿಲ್ಲಾ ಕಾರಾಗೃಹದಲ್ಲಿ ತಯಾರಿ ನಡೆಯುತ್ತಿದೆ. ತನ್ನ ತಂದೆ ತಾಯಿ, ಇಬ್ಬರು ಸೋದರರು, ನಾದಿನಿ, ಸೋದರ ಸಂಬಂಧಿ ಹಾಗೂ 10 ತಿಂಗಳು ಪ್ರಾಯದ ಸೋದರಳಿಯ-ಹೀಗೆ ಏಳು ಮಂದಿ ಕುಟುಂಬ ಸದಸ್ಯರನ್ನು ಹತ್ಯೆಗೈದ ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯದಿಂದ ಘೋಷಿತಳಾಗಿರುವ 38 ವರ್ಷದ ಶಬ್ನಂ ಆಲಿ ಎಂಬಾಕೆಯೇ ಮರಣದಂಡನೆ ಶಿಕ್ಷೆಗೊಳಗಾಗಲಿರುವ  ಮಹಿಳೆ. ಎಲ್ಲಾ ಏಳು ಮಂದಿಗೆ ನೀಡಿದ್ದ ಹಾಲಿನಲ್ಲಿ ಅಮಲು ಪದಾರ್ಥ ಬೆರೆಸಿದ್ದ ಆಕೆ ನಂತರ ಅವರನ್ನು ಕತ್ತು ಹಿಚುಕಿ ಸಾಯಿಸಿದ್ದಳು.

ಈ ಅಪರಾಧ ಕೃತ್ಯ ನಡೆಸಿದ್ದ ಸಂದರ್ಭ ಶಬ್ನಂ ವಯಸ್ಸು ಕೇವಲ 25 ಆಗಿತ್ತು. ಎರಡು ಸ್ನಾತ್ತಕೋತ್ತರ ಪದವಿ ಹೊಂದಿರುವ ಆಕೆ ಆರನೇ ತರಗತಿಯಲ್ಲಿಯೇ ಶಾಲೆ ತ್ಯಜಿಸಿದ್ದ ಸಲೀಂ ಎಂಬಾತನನ್ನು ವಿವಾಹವಾಗಬಯಸಿದ್ದಳು. ಆದರೆ ಆಕೆಯ ಕುಟುಂಬ ಇದಕ್ಕೆ ಒಪ್ಪದೇ ಇದ್ದುದರಿಂದ ಸಿಟ್ಟಿನಿಂದ ಹತ್ಯೆ ನಡೆಸಿದ್ದಳು. ಪ್ರಕರಣ ಸಂಬಂಧ ಇಬ್ಬರಿಗೂ ಅಮ್ರೋಹ ಜಿಲ್ಲಾ ನ್ಯಾಯಾಲಯ 2010ರಲ್ಲಿಯೇ ಮರಣದಂಡನೆ ಶಿಕ್ಷೆ ಪ್ರಕಟಿಸಿತ್ತು.  ಇಬ್ಬರೂ ಅಮ್ರೋಹ ಪಟ್ಟಣದವರೇ ಆಗಿದ್ದಾರೆ.  ತೀರ್ಪಿನ ವಿರುದ್ಧ ಶಬ್ನಂ ಅಲಹಾಬಾದ್ ಹೈಕೋರ್ಟ್, ಸುಪ್ರೀಂ ಕೋರ್ಟ್, ರಾಷ್ಟ್ರಪತಿ ಹಾಗೂ ಮತ್ತೆ ಸುಪ್ರೀಂ ಕೋರ್ಟ್ ಕದ ತಟಗ್ಟಿದ್ದಾಳೆ. ಕಳೆದ ವರ್ಷದ ಜನವರಿಯಲ್ಲಿ  ಅಕೆಯ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.

ಆದರೆ ಆಕೆಗೆ ಇನ್ನೂ ಡೆತ್ ವಾರಂಟ್ ದೊರಕಿಲ್ಲ ಎಂದು ಆಕೆಯ ವಕೀಲರು ಹೇಳುತ್ತಾರೆ. ಆದರೆ ದೇಶದಲ್ಲಿ ಮಹಿಳೆಯರಿಗೆ ಮರಣದಂಡನೆ ವಿಧಿಸಲು ಅನುಮತಿ ಇರುವ ಏಕೈಕ ಜೈಲು ಆಗಿರುವ ಮಥುರಾ ಜೈಲಿನಲ್ಲಿ ಆಕೆಯನ್ನು ಗಲ್ಲಿಗೇರಿಸುವ ನಿಟ್ಟಿನಲ್ಲಿ ತಯಾರಿಗಳು ನಡೆಯುತ್ತಿವೆ.

ಕಳೆದ ವರ್ಷದ ಫೆಬ್ರವರಿಯಲ್ಲಿ ಗಲ್ಲು ಶಿಕ್ಷೆ ನೆರವೇರುವ ಸ್ಥಳವನ್ನು ಗಲ್ಲು ಶಿಕ್ಷೆ ಕಾರ್ಯಗತಗೊಳಿಸುವ ವ್ಯಕ್ತಿ ಪವನ್ ಜಲ್ಲಾದ್ ಪರಿಶೀಲಿಸಿದ್ದರು. ನೇಣುಗಂಬದ ಸ್ವರೂಪದಲ್ಲಿ ಸ್ವಲ್ಪ ದೋಷವಿದೆ ಎಂದು ಆತ ತಿಳಿಸಿದ್ದರಿಂದ ಅದನ್ನು ಸರಿ ಪಡಿಸಲಾಗುತ್ತಿದೆ. ಬಿಹಾರದ ಬುಕ್ಸಾರ್ ಕೇಂದ್ರ ಕಾರಾಗೃಹದಿಂದ ಎರಡು ನೇಣು ಹಗ್ಗಗಳನ್ನೂ ತರಿಸಲಾಗುವುದು ಎಂದು ಮಥುರಾ ಜೈಲಿನ ಹಿರಿಯ ಅಧೀಕ್ಷಕ ಶೈಲೇಂದ್ರ ಮೈತ್ರೆ ಹೇಳಿದ್ದಾರೆ.

ಆದರೆ 150 ವರ್ಷಗಳ ಹಿಂದೆ ನಿರ್ಮಿಸಲಾದ  ಜೈಲಿನ ನೇಣುಗಂಬವನ್ನು ಸ್ವತಂತ್ರ ಭಾರತದಲ್ಲಿ ಇಲ್ಲಿಯ ತನಕ ಬಳಸಲಾಗಿಲ್ಲ. ಎರಡು ಪ್ರಕರಣಗಳಲ್ಲಿ ಈ ಹಿಂದೆ ಮೂವರು ಮಹಿಳೆಯರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತಾದರೂ ನಂತರ ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿತ್ತು. ಶಬ್ನಂಗೆ ಈಗಲೂ ಮತ್ತೊಮ್ಮೆ ಪರಿಶೀಲನಾ ಅರ್ಜಿ ಸಲ್ಲಿಸುವ ಅವಕಾಶವಿದೆ ಎಂದು ಕಾನೂನು ತಜ್ಞರು ಹೇಳುತ್ತಾರೆ. ಆದರೆ ಮರಣದಂಡನೆಗೆ ಸಿದ್ಧತೆಗಳು ನಡೆಯುತ್ತಿವೆ.

ಅಪರಾಧಿಗಳನ್ನು ನೇಣುಗಂಬಕ್ಕೇರಿಸುವ ವೃತ್ತಿ ನಡೆಸುತ್ತಿರುವ ತಮ್ಮ ಕುಟುಂಬದ ನಾಲ್ಕನೇ ತಲೆಮಾರಿನ ವ್ಯಕ್ತಿಯಾಗಿದ್ದಾರೆ ಪವನ್ ಜಲ್ಲಾದ್. ಅವರ ಮುತ್ತಾತ ಲಕ್ಷ್ಮಣ್ ರಾಮ್ ಎಂಬವರು ಭಗತ್ ಸಿಂಗ್‍ನನ್ನು ಗಲ್ಲಿಗೇರಿಸಿದ್ದರೆ, ಅವರ ತಂದೆ ಕಲ್ಲು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಂತಕರನ್ನು  ಹಾಗೂ ಮಕ್ಕಳ ಅಪಹರಣ, ಕೊಲೆ ಪ್ರಕರಣದ ಬಿಲ್ಲಾ ಮತ್ತು ರಂಗಾರನ್ನು ಗಲ್ಲಿಗೇರಿಸಿದ್ದರು.  ಅವರ ತಂದೆ ಕೂಡ 47 ವರ್ಷಗಳ ತನಕ ಮರಣದಂಡನೆ ಶಿಕ್ಷೆ ಪಡೆದ ಅಪರಾಧಿಗಳನ್ನು ನೇಣು ಕುಣಿಕೆಗೆ ಹಾಕುವ ವ್ಯಕ್ತಿಯಾಗಿದ್ದರು. ಆದರೆ ತಮಗೆ ತಿಂಗಳಿಗೆ ಕೇವಲ ರೂ. 7,500 ಗೌರವಧನ ದೊರಕುತ್ತಿದೆ ಇದು  ಸಾಲದು, ನನಗೆ ಏಳು ಮಕ್ಕಳಿದ್ದಾರೆ, ಎಂದು 58 ವರ್ಷದ ಜಲ್ಲಾದ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News