ಬಿಹಾರದಲ್ಲಿ ಬಿಜೆಪಿ ಸೋಲಿಸಲು ವಿಜಯೇಂದ್ರ ಹಣಕಾಸಿನ ನೆರವು: ಶಾಸಕ ಯತ್ನಾಳ್ ಹೊಸ ಬಾಂಬ್

Update: 2021-02-18 17:08 GMT

‘ಬಿಜೆಪಿಯ ನೋಟಿಸ್‍ಗೆ 11 ಪುಟಗಳ ಉತ್ತರ ನೀಡಿದ್ದೇನೆ'

ಬೆಂಗಳೂರು, ಫೆ. 18: ‘ಪ್ರಧಾನಿ ಮೋದಿಯವರ ಶಕ್ತಿಯನ್ನು ಕುಗ್ಗಿಸಲು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ತಮ್ಮ ಆಪ್ತರ ಮೂಲಕ ಹಣಕಾಸಿನ ನೆರವು ನೀಡುತ್ತಿದ್ದಾರೆ' ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಹೊಸಬಾಂಬ್ ಸಿಡಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಹಾರ ವಿಪಕ್ಷ ಸ್ಥಾನದಲ್ಲಿರುವ ರಾಷ್ಟ್ರೀಯ ಜನತಾ ದಳ(ಆರ್ ಜೆಡಿ) ಮತ್ತು ಕಾಂಗ್ರೆಸ್ ಪಕ್ಷಕ್ಕೆ ವಿಜಯೇಂದ್ರ ಹಣ ನೀಡುತ್ತಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕಾದ ಅಗತ್ಯವಿದೆ' ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.

ನೋಟಿಸ್‍ಗೆ ಉತ್ತರ ನೀಡಿದ್ದೇನೆ: ಬಿಜೆಪಿ ಹೈಕಮಾಂಡ್‍ನಿಂದ ನನಗೆ ನೀಡಿದ್ದ ನೋಟಿಸ್‍ಗೆ 11 ಪುಟಗಳ ಉತ್ತರ ನೀಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದ ಭ್ರಷ್ಟಾಚಾರ, ಆಡಳಿತದಲ್ಲಿ ಅವರು ಕುಟುಂಬದ ಸದಸ್ಯರು ಹಸ್ತಕ್ಷೇಪ, ಹಣಕಾಸಿನ ವರ್ಗಾವಣೆ ಸೇರಿ ಇನ್ನಿತರ ವಿಚಾರಗಳನ್ನು ಪ್ರಸ್ತಾಪಿಸಿದ್ದೇನೆ ಎಂದು ಯತ್ನಾಳ್, ಮಾಧ್ಯಮಗಳಿಗೆ ಪತ್ರದ ವಿವರಗಳನ್ನು ಉಲ್ಲೇಖಿಸಿದರು.

ನಾನು ನೀಡಿರುವ ಹೇಳಿಕೆಗಳಿಗೆ ಸಂಬಂಧಿಸಿದಂತೆ ನಾನು ಪತ್ರದಲ್ಲಿ ಎಲ್ಲಿಯೂ ವಿಷಾದ ವ್ಯಕ್ತಪಡಿಸಿಲ್ಲ ಮತ್ತು ಕ್ಷಮೆಯನ್ನು ಕೋರಿಲ್ಲ ಎಂದು ಸ್ಪಷ್ಟನೆ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದ ಸದಸ್ಯರು ಪಕ್ಷದ ಶಾಸಕರನ್ನು ಗೌರವಿಸುತ್ತಿಲ್ಲ. ಬಿಜೆಪಿ ಆಶಯಕ್ಕೆ ತಕ್ಕಂತೆ ಅಧಿಕಾರ ನಡೆಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ಕುಟುಂಬ ಮಾರಿಷಸ್‍ಗೆ ಹೋಗಿದ್ದು ಏಕೆ, ಎಷ್ಟು ಮಂದಿ ಹೋಗಿದ್ದರು, ಯಾವ ವಿಮಾನದಲ್ಲಿ ತೆರಳಿದ್ದರು, ಆ ವಿಮಾನದ ಸಂಖ್ಯೆ ಏನು, ಮಾಜಿ ಗೃಹ ಸಚಿವರೊಬ್ಬರ ಆಪ್ತ ಸಹಾಯಕರ ಮೂಲಕ ಮಾರಿಷಸ್‍ಗೆ ಹೋಗಿ ಏನೇನು ಚಟುವಟಿಕೆ ನಡೆಸಿದ್ದಾರೆಂಬುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದೇನೆ. ಜೊತೆಗೆ ತನಿಖೆ ನಡೆಸಬೇಕು ಎಂದು ಕೋರಿದ್ದೇನೆಂದು ಯತ್ನಾಳ್ ವಿವರಿಸಿದರು.

ಸಿಎಂ ಉತ್ತರಿಸಬೇಕು: ಮಾರಿಷಸ್ ಪ್ರವಾಸದ ಬಗ್ಗೆ ಉತ್ತರ ನೀಡದೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬಿಜೆಪಿ ಕಾರ್ಯಕರ್ತರ ಮೂಲಕ ಪಕ್ಷ ಅಧಿಕಾರಕ್ಕೆ ಬಂದಿದೆ. ಬಿಹಾರ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಎಷ್ಟು ಹಣ ಕಳುಹಿಸಿದ್ದಾರೆಂಬ ಬಗ್ಗೆ ರಾಜ್ಯದಲ್ಲಿ ಚರ್ಚೆ ಆಗಬೇಕು ಎಂದು ಅವರು ಆಗ್ರಹಿಸಿದರು.

ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಪುತ್ರ ವಿಜಯೇಂದ್ರ ಉತ್ತರ ನೀಡಬೇಕು. ನನ್ನ ಆರೋಪ ಮಾಡಿರುವ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ನಾನು ಯಡಿಯೂರಪ್ಪನವರ ಭ್ರಷ್ಟಾಚಾರ, ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ಪತ್ರದಲ್ಲಿ ಬರೆದಿದ್ದೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.

ಕೇಂದ್ರಕ್ಕೂ ಗೊತ್ತಿದೆ: ‘ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಬಿಹಾರ ವಿಧಾನಸಭಾ ಚುನಾವಣೆಗೆ ಹಣ ನೀಡಿರುವ ಬಗ್ಗೆ ಕೇಂದ್ರ ಸರಕಾರಕ್ಕೂ ಮಾಹಿತಿ ಇದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್, ‘ನನಗೆ ಪಕ್ಷ ದ್ರೋಹಿ' ಎಂದು ಹಣೆಪಟ್ಟಿ ಹಚ್ಚಲು ಹೊರಟಿದ್ದಾರೆ. ನಾನು ಪಕ್ಷದ ವಿರುದ್ಧ ಎಂದೂ ಮಾತನಾಡಿಲ್ಲ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಕುಟುಂಬ ರಾಜಕಾರಣದ ವಿರುದ್ಧ ನನ್ನ ಹೋರಾಟ' ಎಂದು ಯತ್ನಾಳ್ ಸ್ಪಷ್ಟನೆ ನೀಡಿದರು.

‘ಪಕ್ಷ ನೀಡಿರುವ ನೋಟಿಸ್‍ಗೆ ಯತ್ನಾಳ್ ಸಮರ್ಪಕ ಉತ್ತರ ನೀಡುವ ಬದಲು ಸಿಎಂ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಬಿಹಾರ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ವಿಜಯೇಂದ್ರ ಫಂಡಿಂಗ್ ನೀಡುತ್ತಿದ್ದಾರೆಂಬುದು ಹಾಸ್ಯಾಸ್ಪದ. ಬಿಎಸ್‍ವೈ ಟೀಕಿಸದಿದ್ದರೆ ಯತ್ನಾಳ್‍ಗೆ ತಿಂದ ಅನ್ನ ಜೀರ್ಣ ಆಗುವುದಿಲ್ಲ. ವಿನಾಕಾರಣ ಹೇಳಿಕೆ ನೀಡುತ್ತಿರುವುದು ಯತ್ನಾಳ್ ವ್ಯಕ್ತಿತ್ವಕ್ಕೆ ಒಳ್ಳೆಯದಲ್ಲ'

-ಎಂ.ಪಿ.ರೇಣುಕಾಚಾರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News