ಸಿ.ಎಂ.ಇಬ್ರಾಹಿಮ್ ನಿವಾಸಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಭೇಟಿ
ಬೆಂಗಳೂರು, ಫೆ.18: ರಾಜ್ಯ ಕಾಂಗ್ರೆಸ್ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿರುವ ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಮ್ ಮನವೊಲಿಸಲು ಮುಂದಾಗಿರುವ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‍ಸಿಂಗ್ ಸುರ್ಜೇವಾಲ ಗುರುವಾರ ನಗರದ ಬೆನ್ಸನ್ ಟೌನ್‍ನಲ್ಲಿರುವ ಸಿ.ಎಂ.ಇಬ್ರಾಹಿಮ್ ನಿವಾಸಕ್ಕೆ ಭೇಟಿ ನೀಡಿದರು.
ಈ ಚರ್ಚೆ ವೇಳೆ ರಾಜ್ಯ ಕಾಂಗ್ರೆಸ್‍ನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಇಬ್ರಾಹಿಮ್, ಸುರ್ಜೇವಾಲ ಗಮನಕ್ಕೆ ತಂದಿದ್ದಾರೆ. ಇಬ್ರಾಹಿಮ್ ಅವರ ಮಾತುಗಳನ್ನು ಶಾಂತ ರೀತಿಯಲ್ಲಿ ಆಲಿಸಿದ ಸುರ್ಜೇವಾಲ ಈ ಎಲ್ಲ ಸಂಗತಿಗಳನ್ನು ಹೈಕಮಾಂಡ್ ಗಮನಕ್ಕೆ ತಂದು ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಸುರ್ಜೇವಾಲ ಜೊತೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಮ್, ನನ್ನ ಮನಸ್ಸಿನಲ್ಲಿದ್ದ ಎಲ್ಲ ವಿಚಾರಗಳನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿಯ ಗಮನಕ್ಕೆ ತಂದಿದ್ದೇನೆ. ನನ್ನ ಮಾತುಗಳನ್ನು ಅವರು ಒಪ್ಪಿದ್ದು, ಹೈಕಮಾಂಡ್ ಜೊತೆ ಚರ್ಚಿಸುವುದಾಗಿ ಹೇಳಿದ್ದಾರೆ ಎಂದರು.
ಪಕ್ಷ ಒಂದು ಕುಟುಂಬ ಇದ್ದ ಹಾಗೆ. ಬಹುತೇಕ ಎಲ್ಲ ಪ್ರಧಾನ ಕಾರ್ಯದರ್ಶಿಗಳಂತೆ ಸುರ್ಜೇವಾಲ ಇಲ್ಲ. ಇವರು ವಾಸ್ತವಿಕವಾಗಿ ಆಲೋಚನೆ ಮಾಡುತ್ತಾರೆ. ರೈತ ಪರಂಪರೆಯಿಂದ ಬಂದಿರುವ ಸುರ್ಜೇವಾಲ ಅವರಿಗೆ ಒಳ್ಳೆಯ ಅನುಭವ ಇದೆ. ಈ ಹಿಂದೆ ರಾಜ್ಯದಲ್ಲಿ ನಡೆದಿರುವ ಉಪ ಚುನಾವಣೆಗಳ ಬಗ್ಗೆ ನನ್ನ ಹಾಗೂ ಅವರ ಅಭಿಪ್ರಾಯ ಒಂದೇ ಆಗಿದೆ. ಮುಂಬರುವ ಉಪ ಚುನಾವಣೆಗೆ ಸಂಬಂಧಿಸಿದಂತೆಯೂ ಅವರಿಗೆ ಮಾಹಿತಿ ನೀಡಿದ್ದೇನೆ. ಪಕ್ಷದ ಉಸ್ತುವಾರಿಯಾದ ನಾಲ್ಕು ತಿಂಗಳ ಅವಧಿಯಲ್ಲೆ ರಾಜ್ಯ ರಾಜಕಾರಣದ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಇಬ್ರಾಹಿಮ್ ಹೇಳಿದರು.