ರಾಜ್ಯದಲ್ಲಿ ಯಾರಾದರೂ ಕುಮಾರಸ್ವಾಮಿಗೆ ಬೆದರಿಕೆ ಹಾಕಲು ಸಾಧ್ಯವೇ?: ಸಚಿವ ಆರ್.ಅಶೋಕ್ ಪ್ರಶ್ನೆ

Update: 2021-02-18 14:46 GMT

ಬೆಂಗಳೂರು, ಫೆ. 18: ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ನಂಬಿಕೆ ಇದ್ದರೆ ಶ್ರೀರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲಿ, ಇಲ್ಲವಾದರೆ ಅವರು ಸುಮ್ಮನೆ ಇರಲಿ. ಅದು ಬಿಟ್ಟು ದೇಣಿಗೆ ನೀಡಬಾರದು ಎಂದು ಅವರು ಏಕೆ ಹೇಳಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಪ್ರಶ್ನಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಮಸೀದಿ, ಚರ್ಚ್ ನಿರ್ಮಿಸುವ ವೇಳೆ ಏನಾದರೂ ಮಾತನ್ನಾಡಿದ್ದಿರಾ? ಹೀಯಾಳಿಸುವುದೇ ಇವರ ಚಾಳಿಯಾಗಿದೆ. ಮಂದಿರದ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ, ವಕೀಲರೂ ಆಗಿರುವ ಸಿದ್ದರಾಮಯ್ಯ ಈ ಕುರಿತು ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಎಚ್‍ಡಿಕೆ ನಯಾಪೈಸೆ ನೀಡಿಲ್ಲ: ‘ರಾಮಮಂದಿರ ನಿರ್ಮಾಣಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಒಂದು ಪೈಸೆಯನ್ನೂ ನೀಡಿಲ್ಲ. ದೇಣಿಗೆ ಲೆಕ್ಕದಲ್ಲಿ ಅವ್ಯವಹಾರ ಆಗಿದ್ದರೆ ತೋರಿಸಲಿ. ರಾಜ್ಯದಲ್ಲಿ ಯಾರಾದರೂ ಕುಮಾರಸ್ವಾಮಿಗೆ ಬೆದರಿಕೆ ಹಾಕಲು ಸಾಧ್ಯವೇ? ಇವರೇ ಇನ್ನೊಬ್ಬರಿಗೆ ಬೆದರಿಕೆ ಹಾಕುತ್ತಾರೆ ಎಂದು ಅಶೋಕ್ ಆರೋಪಿಸಿದರು.

‘ಮನೆ ಲೆಕ್ಕ ಕೇಳಲು ಇವರು ಯಾರು? ಇವರಂತೂ ನಯಾ ಪೈಸೆ ಹಣವನ್ನು ಕೊಟ್ಟಿಲ್ಲ. ಕೊಡುವವರನ್ನು ಬೇಡ ಅನ್ನೋಕೆ ಇವರು ಯಾರು. ಇವರದೇ ಪಕ್ಷದ ಶಾಸಕರು ದೇಣಿಗೆ ಕೊಟ್ಟಿದ್ದಾರೆ. ಇವರ ಮಾತನ್ನು ಅವರದೇ ಪಕ್ಷದ ಶಾಸಕರು ಕೇಳುವುದಿಲ್ಲ. ಈಗಾಗಲೇ ಆರ್‍ಟಿಜಿಎಸ್, ಚೆಕ್, ಆನ್‍ಲೈನ್ ಮೂಲಕ ದೇಣಿಗೆ ನೀಡುವ ವ್ಯವಸ್ಥೆ ಇದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ' ಎಂದು ಅಶೋಕ್ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News