ಬಸ್ ಪ್ರಯಾಣ ದರ ಹೆಚ್ಚಳ ಸದ್ಯಕ್ಕಿಲ್ಲ: ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟನೆ

Update: 2021-02-18 14:48 GMT

ಕಲಬುರಗಿ, ಫೆ.18: ಕೋವಿಡ್‍ನಿಂದಾಗಿ ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ತೈಲ ದರಗಳು ಹೆಚ್ಚಳವಾಗಿದ್ದರೂ ಬಸ್ ಪ್ರಯಾಣ ದರ ಹೆಚ್ಚಿಸುವ ಯಾವುದೇ ಉದ್ದೇಶ ಸದ್ಯಕ್ಕಿಲ್ಲವೆಂದು ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.

ಗುರುವಾರ ನಗರದಲ್ಲಿ ಸಾರಿಗೆ ಇಲಾಖೆಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‍ನಿಂದಾಗಿ ಜನತೆ ಆರ್ಥಿಕವಾಗಿ ಕುಸಿದು ಹೋಗಿದ್ದಾರೆ. ವ್ಯಾಪಾರ, ವಹಿವಾಟಿಗೆ ತೊಂದರೆಯಾಗಿದೆ. ಇಂತಹ ಸಂದರ್ಭದಲ್ಲಿ ಬಸ್‍ ಪ್ರಯಾಣ ದರ ಹೆಚ್ಚಳ ಮಾಡುವುದು ಸರಿಯಾದ ಕ್ರಮವಲ್ಲ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಬಸ್ ಪ್ರಯಾಣ ದರ ಹೆಚ್ಚಿಸುವುದಿಲ್ಲವೆಂದು ತಿಳಿಸಿದ್ದಾರೆ.

2021-22ನೇ ಸಾಲಿನ ಬಜೆಟ್‍ನಲ್ಲಿ 3 ಸಾವಿರ ಬಸ್‍ಗಳಿಗೆ ಬೇಡಿಕೆ ಇಡಲಾಗುವುದು. ಅವುಗಳಲ್ಲಿ 1 ಸಾವಿರ ಬಸ್‍ಗಳನ್ನು ಈಶಾನ್ಯ ಭಾಗಕ್ಕೆ ನೀಡಲಾಗುವುದು. ಕಳೆದ ವರ್ಷವೂ ಬಜೆಟ್‍ನಲ್ಲಿ 4 ಸಾವಿರ ಬಸ್‍ಗಳಿಗೆ ಬೇಡಿಕೆ ಇಡಲಾಗಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿಲ್ಲ. ಈ ವರ್ಷವೂ ಬಜೆಟ್ ಪೂರ್ವಭಾವಿ ಸಭೆಯಲ್ಲಿ 3 ಸಾವಿರ ಬಸ್‍ಗಳ ಬೇಡಿಕೆ ಇಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹಳೆಯ ಬಸ್‍ಗಳನ್ನು ಗುಜರಿಗೆ ಹಾಕುವ ಬದಲು ಸ್ವಲ್ಪ ಸುಧಾರಣೆ ಮಾಡಿ, ಸಾಮಾಜಿಕ ಉದ್ದೇಶಗಳಿಗೆ ಬಳಸಿಕೊಳ್ಳುವ ಉಪಾಯ ಮಾಡಲಾಗಿದೆ. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಈ ಬಸ್‍ಗಳನ್ನೇ ಶೌಚಾಲಯ, ಡೇ ಕೇರ್ ಸೆಂಟರ್, ಹಾಲುಣಿಸುವ ಮಹಿಳೆಯರ ಕೇಂದ್ರಗಳಾಗಿ ಪರಿವರ್ತಿಸಲಾಗುವುದೆಂದು ಅವರು ಮಾಹಿತಿ ನೀಡಿದ್ದಾರೆ.

ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ: ಕಲಬುರಗಿಯಿಂದ ಏಮ್ಸ್, ಜವಳಿಪಾರ್ಕ್ ಸೇರಿದಂತೆ ವಿವಿಧ ಯೋಜನೆಗಳು ಕೈತಪ್ಪಿರುವುದರ ಬಗ್ಗೆ ಬೇಸರ ಪಡುವ ಅಗತ್ಯವಿಲ್ಲ. ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಸಾರಿಗೆ ಇಲಾಖೆಯಲ್ಲಿ ನೇಮಕಾತಿ ಆಗಿಲ್ಲ. ಇಲಾಖೆಯಲ್ಲ 4 ಸಾವಿರ ಸಿಬ್ಬಂದಿ ನೇಮಕ ಆಗಬೇಕು. ಆದರೆ, ಕೋವಿಡ್‍ನಿಂದ ಉಂಟಾದ ಆರ್ಥಿಕ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಶೇ.50ರಷ್ಟು ಅಂದರೆ, 2 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗುವುದು.

-ಲಕ್ಷ್ಮಣ ಸವದಿ, ಸಾರಿಗೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News