ಶಿವಮೊಗ್ಗದಲ್ಲಿ ರೈಲ್ ರೋಕೋ ಚಳವಳಿ: ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದ ಅನ್ನದಾತರು

Update: 2021-02-18 15:04 GMT

ಶಿವಮೊಗ್ಗ, ಫೆ.18: ಕೇಂದ್ರದ ವಿವಾದಿತ ಮೂರು ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಟ್ರ್ಯಾಕ್ಟರ್ ಪರೇಡ್, ಚಕ್ಕಾ ಜಾಮ್(ರಸ್ತೆ ತಡೆ) ನಡೆಸಿದ್ದ ರೈತ ಸಂಘಟನೆಗಳು ಸಂಯುಕ್ತ ಕಿಸಾನ್ ಮೋರ್ಚಾ ಇಂದು ಕರೆ ನೀಡಿದ್ದ ರೈಲು ತಡೆ ಚಳವಳಿಗೆ ಶಿವಮೊಗ್ಗ ಜಿಲ್ಲಾ ರೈತ ಸಂಘಟನೆಗಳು ಹಾಗೂ ಇತರೆ ಸಂಘ ಸಂಸ್ಥೆಗಳು ಬೆಂಬಲ ನೀಡಿ ರೈಲು ತಡೆ ಚಳವಳಿ ನಡೆಸಿದರು. ಆದರೆ ಪ್ರತಿಭಟನಾ ನಿರತ ರೈತರನ್ನು ರೈಲು ನಿಲ್ದಾಣದ ಒಳಗೆ ಬಿಡದೆ ತಡೆಹಿಡಿಯಲಾಯಿತು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ರೈತರು ರೈಲ್ವೆ ನಿಲ್ದಾಣದೊಳಗೆ ಪ್ರವೇಶಿಸಿ ರೈಲ್ ರೋಕೋ ಚಳವಳಿಗೆ ಮುಂದಾದರು. 'ಕೃಷಿ ಭೂಮಿ ಮಾರಾಟದ ಸರಕಲ್ಲ. ಬಂಡವಾಳ ಶಾಹಿಗಳಿಗೆ, ಭೂಗಳ್ಳರಿಗೆ ನಮ್ಮ ಭೂಮಿಯೊಳಗೆ ಪ್ರವೇಶವಿಲ್ಲ. ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಸುಗ್ರಿವಾಜ್ಞೆಗೆ ದಿಕ್ಕಾರ' ಎಂದು ಕೂಗಿದರು.

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಬಂಡವಾಳ ಶಾಹಿಗಳಿಗೆ ಮಣೆ ಹಾಕುತ್ತಿದೆ. ಬಂಡವಾಳದಾರರಿಗೆ ಮತ್ತು ಭೂಗಳ್ಳರಿಗೆ ನಮ್ಮ ಹಳ್ಳಿಗಳಲ್ಲಿ ಪ್ರವೇಶವೇ ಇಲ್ಲ. ನಮ್ಮ ಭೂಮಿ, ನಮ್ಮ ಅನ್ನ, ನಮ್ಮ ಹಕ್ಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಮಾತಿನ ಚಕಮಕಿ: ರೈಲ್ವೆ ನಿಲ್ದಾಣದ ಮುಖ್ಯದ್ವಾರದಲ್ಲಿ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ರೈಲ್ ರೋಕೋ ಚಳವಳಿಗೆ ಅವಕಾಶ ನೀಡಬೇಕು. ನೀವು ರೈತರ ಮಕ್ಕಳಲ್ಲವೇ, ರೈತರ ಕಷ್ಟ ನಿಮಗೆ ಅರ್ಥವಾಗಲ್ಲವೇ, ನಾವು ರೈಲ್ ರೋಕೋ ಚಳವಳಿ ಮಾಡೇ ಮಾಡುತ್ತೇವೆ ಎಂದು ರೈತರು ಪಟ್ಟು ಹಿಡಿದರು. ಆದರೆ ಪೊಲೀಸರು ರೈಲ್ವೆ ನಿಲ್ದಾಣದ ಒಳಗೆ ರೈತರನ್ನು ಬಿಡಲು ಒಪ್ಪಲಿಲ್ಲ. ಪೊಲೀಸರ ಈ ನಿರ್ಧಾರದಿಂದ ಕುಪಿತರಾದ ರೈತರು ನಮ್ಮನ್ನು ಬಂಧಿಸಿ, ಕೇಸ್ ಹಾಕಿ. ನಾವು ಒಳಗೆ ಹೋಗಿಯೇ ಸಿದ್ಧ ಎಂದು ಘೋಷಣೆ ಕೂಗಿದರು.

ಆವರಣದಲ್ಲಿ ಪ್ರತಿಭಟನೆಗೆ ಅವಕಾಶ: ರೈಲ್ ರೋಕೋ ಚಳವಳಿಗೆ ಅವಕಾಶ ನೀಡುವುದಿಲ್ಲ. ಆದರೆ ರೈಲ್ವೆ ನಿಲ್ದಾಣದ ಆವರಣದೊಳಗೆ ಪ್ರತಿಭಟನೆ ನೀಡುವುದಾಗಿ ಪೊಲೀಸರು ತಿಳಿಸಿದರು. ನಂತರ ರೈತರು ಒಪ್ಪಿಕೊಂಡು ಆವರಣದೊಳಗೆ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ರೈತ ಮುಖಂಡ ಕೆ.ಟಿ ಗಂಗಾಧರ್, ಇದು ಭಂಡ ಸರ್ಕಾರ. ಯಾವುದೇ ಚರ್ಚೆ ಇಲ್ಲದೇ ಕೃಷಿ ಕಾಯ್ದೆಗಳನ್ನು ಒತ್ತಾಯ ಪೂರ್ವಕವಾಗಿ ಜಾರಿಗೆ ತರುತ್ತಿದೆ. ಸರ್ಕಾರಗಳ ಚಳವಳಿಯನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಪ್ರತಿ ಹಳ್ಳಿ ಹಳ್ಳಿಯಿಂದಲೂ ಪ್ರತಿಭಟನೆ ರೂಪಿಸೋಣ. ರೈತರಲ್ಲಿ ನೂತನ ಕೃಷಿ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡೋಣ ಎಂದ ಅವರು, ನೂತನ ಕೃಷಿ ಕಾಯ್ದೆಯಿಂದ ಗುತ್ತಿಗೆ ವ್ಯವಸಾಯ ಪದ್ದತಿ ಜಾರಿಗೆ ಬರಲಿದೆ.ಇದನ್ನು ರೈತರು ಅರ್ಥ ಮಾಡಿಕೊಳ್ಳಬೇಕು. ನಮ್ಮ ಭೂಮಿ ಮೇಲೆ ಬಂಡವಾಳಶಾಹಿಗಳು ಯಾಕೆ ಹಿಡಿತ ಸಾಧಿಸಬೇಕು ಎಂದು ಪ್ರಶ್ನಿಸಿದರು.

ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕಳೆದ ಕೆಲವು ತಿಂಗಳಿನಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿಯವರು ಕೃಷಿ ಕಾಯ್ದೆಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ವಿರೋಧ ಪಕ್ಷಗಳು ರೈತರ ಪ್ರತಿಭಟನೆಗೆ ಬೆಂಬಲ ನೀಡುತ್ತಿವೆ. ಆದರೆ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ತಮ್ಮ ನಿಲುವನ್ನು ಪ್ರಕಟಗೊಳಿಸಬೇಕು ಎಂದು ಆಗ್ರಹಿಸಿದರು.

ಇನ್ನೋರ್ವ ರೈತ ಮುಖಂಡ ಹೆಚ್.ಆರ್ ಬಸವರಾಜಪ್ಪ ಮಾತನಾಡಿ, ಕೃಷಿ ಕಾಯ್ದೆಗಳನ್ನು ವಿರೋಧಿಸಿ  ಪ್ರತಿಭಟನೆ ನಡೆಸುತ್ತಿರುವ ಅನ್ನದಾತರನ್ನು ಭಯೋತ್ಪಾದಕರು ಎಂದು ಬಿಜೆಪಿಯವರು ಬಿಂಬಿಸುತ್ತಿದ್ದಾರೆ. ಇದು ಶೋಭೆ ತರುವಂತದಲ್ಲ ಎಂದು ಹೇಳಿದರು.

ಎರಡು ಮೂರು ರಾಜ್ಯಗಳಲ್ಲಿ ಮಾತ್ರ ಕೃಷಿ ಕಾಯ್ದೆಗಳನ್ನು ಖಂಡಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ. ಉತ್ತರ ಭಾರತದಲ್ಲಿ ಮಾಡಿರುವಂತೆ ಶಿವಮೊಗ್ಗದಲ್ಲೂ ಕಿಸಾನ್ ಪಂಚಾಯತ್ ಪ್ರಾರಂಭವಾಗಲಿದೆ. ಕೇಂದ್ರದ ರೈತ ನಾಯಕರಾದ ಬಲವೀರ್ ಸಿಂಗ್ ರಾಜೇವಾಡ್, ಟಿಕಾಯತ್ ಇವರನ್ನೆಲ್ಲಾ ಮಾರ್ಚ್ ತಿಂಗಳಲ್ಲಿ ಕರೆಸಲಾಗುವುದು. ಅವರಿಂದಲೇ ಕಾರ್ಯಕ್ರಮ ಉದ್ಘಾಟನೆ ಮಾಡಲಾಗುವುದು ಎಂದ ಅವರು, ಇದು ರೈತ ಚಳವಳಿಯಲ್ಲ, ಊಟ ಮಾಡುವವರ ಚಳವಳಿ, ಅನ್ನ ತಿನ್ನುವವರೆಲ್ಲಾ ಈ ಚಳವಳಿಯಲ್ಲಿ ಭಾಗವಹಿಸುತ್ತಾರೆ ಎಂದರು.

ಒಂದಾದ ನಾಯಕರು
ರೈತ ಮುಖಂಡರಾದ ಕೆ.ಟಿ ಗಂಗಾಧರ್ ಮತ್ತು ಹೆಚ್.ಬಸವರಾಜಪ್ಪ ಇಷ್ಟು ದಿನ ರೈತ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಅವರಿಬ್ಬರದು  ಪ್ರತ್ಯೇಕ ಬಣವಾಗಿದ್ದು, ರೈತರ ವಿಚಾರದಲ್ಲಿ ನಿಲುವು ಒಂದೇ ಆಗಿದೆ ಎಂದು ಸಾಬೀತುಪಡಿಸಿದ್ದಾರೆ. ರೈತರ ವಿಚಾರವಾಗಿ ಪ್ರತ್ಯೇಕ ಹೋರಾಟ ಮಾಡಿಕೊಂಡು ಬಂದ ಇವರು, ಕೃಷಿ ಕಾಯ್ದೆಗಳ ವಿಚಾರವಾಗಿ ದೇಶಾದ್ಯಂತ ಚಳವಳಿ ಕಾವು ಪಡೆಯುತ್ತಿರುವ ಈ ಹೊತ್ತಿನಲ್ಲಿ ಸ್ಥಳೀಯ ಮಟ್ಟದಲ್ಲಿ ಈ  ಇಬ್ಬರು ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ರೈತರ ಅಚ್ಚರಿಗೆ ಕಾರಣವಾಯಿತು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಪ್ರಮುಖರಾದ ಕೆ.ಟಿ.ಗಂಗಾಧರ್, ಶಿವಮೂರ್ತಿ, ಹಿಟ್ಟೂರು ರಾಜು, ಜಗದೀಶ್, ಹಾಲೇಶಪ್ಪ, ಕೆ.ಎಲ್.ಅಶೋಕ್ ಸೇರಿದಂತೆ ಹಲವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News