''50ಕ್ಕೂ ಅಧಿಕ ವಧುಗಳಿಂದ ತಿರಸ್ಕಾರಗೊಂಡಿದ್ದೇನೆ, ರೈತನಾಗಿದ್ದಕ್ಕೆ ಹುಡುಗಿ ಕೊಡುತ್ತಿಲ್ಲ''

Update: 2021-02-18 16:41 GMT

ಮಳವಳ್ಳಿ, ಫೆ.18: ‘ಕೃಷಿ ಮಾಡುತ್ತಿರುವ ಯುವ ರೈತರನ್ನು ವಿವಾಹವಾಗುವವರಿಗೆ ಸರಕಾರದಿಂದ ಜೀವನ ಭದ್ರತೆಯ ಯೋಜನೆ ಕೊಡಿಸಿ ಸರ್’ ಎಂದು ತಾಲೂಕಿನ ಯುವ ರೈತರೊಬ್ಬರು ಪ್ರವಾಸೋದ್ಯಮ ಸಚಿವ ಯೋಗೇಶ್ವರ್ ಅವರಿಗೆ ದೂರವಾಣಿ ಕರೆಮಾಡಿ ಮನವಿ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಡಿಯೊ ವೈರಲ್ ಆಗಿದೆ.

ತಾಲೂಕಿನ ಪ್ರವೀಣ ಎಂಬ ಯುವಕ ಸಚಿವರಿಗೆ ಕರೆ ಮಾಡಿ ಸರ್ ‘ನಾನೊಬ್ಬ ರೈತ. ರೇಷ್ಮೆ ಹುಳು ಸಾಕಣೆ ಮಾಡಿಕೊಂಡು ಉತ್ತಮವಾದ ಜೀವನ ನಡೆಸುತ್ತಿದ್ದೇನೆ. ನನಗೀಗ 28 ವರ್ಷ ವಯಸ್ಸಾಗಿದೆ. ವಿವಾಹವಾಗಲೆಂದು ಮೂರು ವರ್ಷಗಳಿಂದ ಸಂಪ್ರದಾಯದಂತೆ ಹಿರಿಯರ ಜೊತೆಗೆ ಹೋಗಿ ಹುಡುಗಿ ನೋಡುತ್ತಿದ್ದೇನೆ. ಇದುವರೆಗೆ ಸುಮಾರು 50ಕ್ಕೂ ಅಧಿಕ ವಧು ಅನ್ವೇಷಣೆಯಾಗಿದೆ. ಆದರೆ ಹೋದಲೆಲ್ಲ ಕೃಷಿ ಮಾಡುವವರಿಗೆ ಹುಡುಗಿ ಕೊಡುವುದಿಲ್ಲ ಎಂದು ತಿರಸ್ಕರಿಸಿದ್ದಾರೆ. ಅಲ್ಲದೆ, ಕೆಲವೆಡೆಯಂತೂ ರೈತ ಎಂದರೆ ಮನೆಯೊಳಗೂ ಸಹ ಸೇರಿಸಿಕೊಳ್ಳುವುದಿಲ್ಲ ಎಂದು ತಮ್ಮ ಅನುಭವ, ಆತಂಕವನ್ನು ಹೇಳಿಕೊಂಡಿದ್ದಾರೆ.

ಪ್ರಸ್ತುತ ಹಳ್ಳಿಗಳಲ್ಲಿ ವ್ಯವಸಾಯದಲ್ಲಿ ಉತ್ತಮ ಆದಾಯವಿದೆ. ಆರ್ಥಿಕವಾಗಿ ಸದೃಢವಾಗಿದ್ದರೂ ಕೆಲವು ಕುಟುಂಬದ ಹಿರಿಯರು ತಮ್ಮ ಗಂಡು ಮಕ್ಕಳಿಗೆ ಮಧುವೆ ಮಾಡುವ ಸಲುವಾಗಿ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿಸಿದ್ದಾರೆ. ಹೀಗಾದರೆ ರೈತರ ಮಕ್ಕಳ ಗತಿ ಏನು ಸರ್ ಎಂದು ಸಚಿವರನ್ನು ಪ್ರಶ್ನಿಸಿದ್ದಾನೆ. ಈತನ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡ ಸಚಿವರು ರೈತನಿಗೆ ಹುಡುಗಿ ಕೊಡುವಂತೆ ಹೆಣ್ಣು ಹೆತ್ತವರ ಮನ ಪರಿವರ್ತನೆ ಮಾಡಲು ಸರಕಾರದಿಂದ ಏನು ಮಾಡಬೇಕು ಎಂದು ನೀನೇ ಒಂದು ಸಲಹೆ ನೀಡು ಎಂದು ಯುವಕನಿಗೆ ಮರು ಪಶ್ನೆ ಕೇಳಿದ್ದಾರೆ. ಅಂತರ್ಜಾತಿ ವಿವಾಹವಾದವರಿಗೆ ಸರಕಾರದಿಂದ ಹಣ ನೀಡುತ್ತೀರಿ. ಅದ್ಯಾವುದೋ ಭಾಗ್ಯಗಳನ್ನು ಸಿಎಂ ಯಡಿಯೂರಪ್ಪ ಹೆಣ್ಣು ಮಕ್ಕಳಿಗೆ ಕೊಟ್ಟಿದ್ದಾರಲ್ಲಾ ಸರ್.. ಅದೇ ರೀತಿ ಕೃಷಿ ಮಾಡುವ ಯುವ ರೈತನನ್ನು ವಿವಾಹವಾಗುವವರಿಗೆ ಹಾಗೂ ಹುಟ್ಟುವ ಮಕ್ಕಳಿಗೆ ಜೀವನ ಭದ್ರತೆಯ ಬಾಂಡ್‌ಗಳನ್ನು ಸಿಎಂಗೆ ಹೇಳಿ ಕೊಡಿಸಿ ಎಂದು ಮನವಿ ಮಾಡಿಕೊಂಡನು.

ಇದಕ್ಕೆ ಸಚಿವ ಯೋಗೇಶ್ವರ್ ಉತ್ತರಿಸಿ, ನೀನು ಹೇಳಿರುವುದೆಲ್ಲ ಸತ್ಯವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಸರಕಾರದ ಗಮನಕ್ಕೆ ತರುವುದಾಗಿ ಯುವಕನಿಗೆ ಭರವಸೆ ನೀಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News