ಶೋಷಣೆಯ ವಿರುದ್ಧ ಸ್ತ್ರೀ ಧ್ವನಿ ಎತ್ತಬಾರದೆನ್ನುವ ಮನುವಾದಿ ಬಿಜೆಪಿ ಅಜೆಂಡಾ ನಡೆಯದು: ಕಾಂಗ್ರೆಸ್

Update: 2021-02-18 17:32 GMT

ಬೆಂಗಳೂರು, ಫೆ.18: ಬಿಜೆಪಿಯ ರಾಜ್ಯಸಭಾ ಸದಸ್ಯ ಎಂ.ಜೆ.ಅಕ್ಬರ್ ಲೈಂಗಿಕ ಕಿರುಕುಳದ ವಿರುದ್ಧ ಧ್ವನಿ ಎತ್ತಿದ್ದ ಪತ್ರಕರ್ತೆ ಪ್ರಿಯರಮಣಿ ವಿರುದ್ಧದ ಮಾನಹಾನಿ ಪ್ರಕರಣವನ್ನು ಕೋರ್ಟ್ ತಳ್ಳಿಹಾಕಿ ಮಹಿಳೆಯರ ಘನತೆ ಮತ್ತು ಮೀಟೂ ಧ್ವನಿಯನ್ನು ಗಟ್ಟಿಗೊಳಿಸಿದೆ. ಶೋಷಣೆಯ ವಿರುದ್ಧ ಸ್ತ್ರೀ ಧ್ವನಿ ಎತ್ತಬಾರದೆನ್ನುವ ಮನುವಾದಿ ಬಿಜೆಪಿ ಅಜೆಂಡಾ ನಡೆಯದು. ಈ ಭಾರತ ಮನುಶಾಸ್ತ್ರದ್ದಲ್ಲ, ಸಂವಿಧಾನದ್ದು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಯುಪಿಯ ಉನ್ನಾವೋದಲ್ಲಿ ಮತ್ತೆ ದಲಿತ ಬಾಲಕಿಯರ ಕೊಲೆ. ಯೋಗಿ ಆದಿತ್ಯನಾಥ್ ಸರಕಾರದ ರಕ್ಷಣೆ ಕ್ರಿಮಿನಲ್‍ಗಳಿಗೆ ಹೊರತು ಮಹಿಳೆಯರಿಗಲ್ಲ. ನೀವು ಜಪಿಸುವ ‘ಯುಪಿ ಮಾಡೆಲ್' ಅಂದರೆ ಇದೇ ಅಲ್ಲವೇ? ಸಿದ್ದು ಸವದಿ ಹಲ್ಲೆ, ಶೃಂಗೇರಿ ಅತ್ಯಾಚಾರ ಪ್ರಕರಣ ಅದಕ್ಕೆ ಸಾಕ್ಷಿ. ಬಿಜೆಪಿಯ ‘ಬೇಟಿ ಬಚಾವೊ’ ಘೋಷಣೆ ಸಂದೇಶವಲ್ಲ ಎಚ್ಚರಿಕೆ ಎಂದು ಕಾಂಗ್ರೆಸ್ ಟೀಕಿಸಿದೆ.

ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿವೆ, ಉತ್ತರ ಪ್ರದೇಶ ಮುಂಚೂಣಿಯಲ್ಲಿ. ಉನ್ನಾವೊದಲ್ಲಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಅತ್ಯಾಚಾರವೆಸಗಿದಾಗ ಇಡೀ ಬಿಜೆಪಿ ಮಹಿಳಾ ರಕ್ಷಣೆಯ ಬದಲು ಆರೋಪಿಯ ಪರ ನಿಂತಿತ್ತು. ಈಗ ಅದೇ ಉನ್ನಾವೋದಲ್ಲಿ ದಲಿತ ಬಾಲಕಿಯರ ಹತ್ಯೆ ನಡೆದಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ರೇಪ್ ಆರೋಪಿ ಎಂಪಿ ಸ್ವಾಮಿ ಚಿನ್ಮಯಾನಂದನ ಪರ ನಿಂತಿತ್ತು ಬಿಜೆಪಿ. ರೇಪಿಸ್ಟ್ ಎಂಎಲ್‍ಎ ಕುಲದೀಪ್ ಸಿಂಗ್ ಪರ ನಿಂತಿತ್ತು ಬಿಜೆಪಿ. ಹತ್ರಾಸ್ ರೇಪಿಸ್ಟ್ ಗಳ ಪರ ನಿಂತಿತ್ತು ಬಿಜೆಪಿ. ಕೀಚಕನೊಬ್ಬನ ಆಡಳಿತದಲ್ಲಿ ಉತ್ತರಪ್ರದೇಶ ರಾಮನ ರಾಜ್ಯವಾಗುವುದಾದರೂ ಹೇಗೆ? ಮಹಿಳೆಯರಿಗೆ ರಕ್ಷಣೆ ಸಿಗುವುದಾದರೂ ಹೇಗೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News