×
Ad

ಪುಟ್ಟಣ್ಣಯ್ಯ ಲಕ್ಷಾಂತರ ಅಭಿಮಾನಿಗಳನ್ನು ಕೊಟ್ಟು ಹೋಗಿದ್ದಾರೆ: ಭಾವುಕರಾದ ಪತ್ನಿ ಸುನೀತಾ ಪಟ್ಟಣ್ಣಯ್ಯ

Update: 2021-02-18 23:53 IST

ಮೈಸೂರು,ಫೆ.18: ರೈತ ಮುಖಂಡ ದಿ.ಕೆ.ಎಸ್.ಪುಟ್ಟಣ್ಣಯ್ಯ ನಮಗೆ ಕೋಟ್ಯಾಂತರ ರೂಪಾಯಿ ಆಸ್ತಿ ಸಂಪಾದಿಸಿ ಹೋಗಲಿಲ್ಲ, ಆದರೆ ಲಕ್ಷಾಂತರ ಅಭಿಮಾನಿಗಳನ್ನು ಕೊಟ್ಟು ಹೋಗಿದ್ದಾರೆ ಎಂದು ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ ಪತ್ನಿ ಸುನೀತಾ ಪುಟ್ಟಣ್ಣಯ್ಯ ಭಾವುಕರಾದರು.

ನಗರದ ಕಲಾಮಂದಿರದಲ್ಲಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ 'ಹೃದಯವಂತ ವ್ಯಕ್ತಿತ್ವದ ರೈತ ಚೇತನ ಕೆ.ಎಸ್.ಪುಟ್ಟಣ್ಣಯ್ಯನವರ ನೆನಪು ಹಾಗೂ ರಾಜ್ಯ ಮಟ್ಟದ ಸಮಾರಂಭ' ಉದ್ಘಾಟಿಸಿ ನಂತರ ಮಾತನಾಡಿದರು. ಇದೇ ವೇಳೆ ಗಣ್ಯರಿಂದ ಸಂಘದ ನೂತನ ಹೆಸರು, ಲೋಗೋ ಹಾಗೂ ಹಸಿರು ಶಾಲು ಬಿಡುಗಡೆ ಮಾಡಲಾಯಿತು.

ಪುಟ್ಟಣ್ಣಯ್ಯ ಸಾಯುವಾಗ ಏನನ್ನೂ ತೆಗೆದುಕೊಂಡು ಹೋಗಲಿಲ್ಲ, ಆದರೆ ನಮ್ಮ ನಿಮ್ಮನ್ನು ಬಿಟ್ಟು ಹೋಗಿದ್ದಾರೆ. ಅವರ ಹೋರಾಟದ ಬದುಕಿನಲ್ಲಿ ಎಂದೂ ಕುಟುಂಬಕ್ಕೆ ರಾಜಿಯಾದವರಲ್ಲ. ಅವರು ಕುಟುಂಬಕ್ಕೆ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಿ ಹೋಗಲಿಲ್ಲ. ಅದರ ಬದಲಿಗೆ ಲಕ್ಷಾಂತರ ಅಭಿಮಾನಿಗಳು ಕೊಟ್ಟು ಹೋಗಿದ್ದಾರೆ. ಅದಕ್ಕೆ ನಮ್ಮ ಕುಟುಂಬ ಎಂದೆಂದೂ ಚಿರಋಣಿ ಎಂದು ಹೇಳುತ್ತಿದ್ದಂತೆ ವೇದಿಕೆಯಲ್ಲಿದ್ದ ಗಣ್ಯರು ಹಾಗೂ ನೆರೆದಿದ್ದ ರೈತರಲ್ಲಿ ಅನೇಕರು ಕಣ್ಣೀರಿಟ್ಟರು.

ಪುಟ್ಟಣ್ಣಯ್ಯ ತಮ್ಮ ಕುಟುಂಬಕ್ಕಿಂತ ದಲಿತರು, ರೈತರು, ನೊಂದವರ ಪರ ಮಿಡಿಯುತ್ತಿದ್ದರು. ಸದಾ ಅವರ ಪರ ಹೋರಾಟ ಮಾಡುತ್ತಿದ್ದರು. ನಾವು ಒಮ್ಮೆ ಅವರನ್ನು ಕುಟುಂಬಕ್ಕಾಗಿ ಏನು ಮಾಡಿದಿರಿ ಎಂದರೆ ಅವರು ಉತ್ತರಿಸಲಿಲ್ಲ, ಚಿತ್ರದುರ್ಗಕ್ಕೆ ಇಡೀ ಕುಟುಂಬವನ್ನು ಕರೆದುಕೊಂಡು ಹೋದರು. ಅಲ್ಲಿನ ಜನರ ಪರಿಸ್ಥಿತಿ ನೋಡಿ ನಮಗೆ ನೋವಾಯಿತು. ಅಲ್ಲಿನ ಜನರಿಗೆ ಕುಡಿಯಲು ನೀರಿಲ್ಲ. ಒಂದು ಹೊತ್ತಿನ ಊಟವೂ ಇರಲಿಲ್ಲ. ಅಲ್ಲಿಂದ ಬಂದ ಮೇಲೆ ನಿನಗೆ ಏನು ಅನುಭವ ಆಯಿತು ಎಂದರು. ನಿನಗೆ ಊಟ ಇದೆ. ಬಟ್ಟೆ ಇದೆ. ಆದರೆ ಅಲ್ಲಿನ ಜನರಿಗೆ ಏನೇನು ಇಲ್ಲ. ಹಾಗಿದ್ದ ಮೇಲೆ ನಾನು ನಿನ್ನನ್ನು ಏಕೆ ನೋಡಿಕೊಳ್ಳಬೇಕು ಎಂದು ಪ್ರಶ್ನಿಸಿದರು ಎಂದು ಅವರ ಜೊತೆಗಿನ ಜೀವನವನ್ನು ಮೆಲುಕು ಹಾಕಿದರು.

ಪುಟ್ಟಣ್ಣಯ್ಯ ಇಲ್ಲ ಎಂಬ ನೋವನ್ನು ನೀವು ಮರೆಸಿದ್ದೀರಿ. ಅವರು ಇನ್ನೂ ನಮ್ಮ ಮತ್ತು ನಿಮ್ಮ ನಡುವೆ ಜೀವಂತವಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಬೇಕು ಎಂದರೆ ಅವರು ಹಾಕಿದ ಹೋರಾಟದ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕಿದೆ. ರೈತ ಮುಖಂಡರುಗಳಾದ ಪ್ರೊ.ನಂಜುಂಡಸ್ವಾಮಿ, ರುದ್ರೇಶ್ ಮತ್ತು ಸುಂದರೇಶನ್ ಅವರ ಹಾದಿಯಲ್ಲಿ ಪುಟ್ಟಣ್ಣಯ್ಯ ಕೂಡ ನಡೆದುಕೊಂಡು ಬಂದಿದ್ದಾರೆ. ಇಂದಿನ ಹೋರಾಟಗಾರರು ಏಕಾಂಗಿಯಾಗಿ ಹೋರಾಟ ಮಾಡದೆ ಎಲ್ಲರೂ ಒಟ್ಟಿಗೆ ಸೇರಿ ಹೋರಾಟ ಮಾಡಬೇಕಿದೆ. ನಾವೆಲ್ಲರೂ ವಿಷ ಮಾನವರಾಗದೆ ವಿಶ್ವಮಾನವರಾಗೋಣ ಎಂದು ರೈತರಿಗೆ ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ರೈತಗೀತೆ ಹಾಡುವ ವೇಳೆಯಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಅವರನ್ನ ನೆನೆದು ಪತ್ನಿ ಸುನಿತಾ ಪುಟ್ಟಣ್ಣಯ್ಯ ಕಣ್ಣೀರಿಟ್ಟ ಘಟನೆ ನಡೆಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್, ರೈತ ಮುಖಂಡರುಗಳಾದ ನಂದಿನಿ ಜಯರಾಮ್, ಸ್ಮಿತಾ ಪುಟ್ಟಣ್ಣಯ್ಯ, ಜೆ.ಎಂ.ವೀರಸಂಗಯ್ಯ, ಟಿ.ಸುಲೇನೂರು, ಎಂ. ಶಂಕರಪ್ಪ,  ಹೊಸಕೋಟೆ ಬಸವರಾಜು, ರವಿಕಿರಣ, ಪ್ರಸನ್ನ ಎನ್.ಗೌಡ, ಎಸ್.ಸಿ.ಮಧುಚಂದನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News