ಹೆಲಿಪ್ಯಾಡ್ ರಸ್ತೆ ಕಾಮಗಾರಿ ನಡೆಸದೇ ಬಿಲ್ ಪಾವತಿಸಿದ ಪಿಡಬ್ಲೂಡಿ ಅಧಿಕಾರಿಗಳು: ರಸೂಲ್‍ ಖಾನ್ ಆರೋಪ

Update: 2021-02-19 11:39 GMT

ಚಿಕ್ಕಮಗಳೂರು, ಫೆ.19: ನಗರದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ಪೈಕಿ ಕೆಲವು ಕಾಮಗಾರಿಗಳು ನಡೆಯದಿದ್ದರೂ ಅಧಿಕಾರಿಗಳು ಬಿಲ್ ಮಾಡಿಕೊಂಡು ಸರಕಾರದ ಅನುದಾನವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ನಗರದ ಐಡಿಎಸ್‍ಜಿ ಕಾಲೇಜು ಆವರಣದಲ್ಲಿ ಹೆಲಿಪ್ಯಾಡ್ ರಸ್ತೆಗೆಂದು 25 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಟೆಂಡರ್ ಕರೆದು ಕಾಮಗಾರಿ ನಡೆಸದೇ 21 ಲಕ್ಷ ರೂ. ಬಿಲ್ ಮಾಡಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ರಸೂಲ್‍ಖಾನ್ ಆರೋಪಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ, ಒಳಚರಂಡಿ, ಯುಜಿಡಿ, ಸರಕಾರಿ ಕಟ್ಟಡ ದುರಸ್ತಿಯಂತಹ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶಾಮೀಲಾಗಿ ಈ ಕಾಮಗಾರಿಗಳನ್ನು ಕಳಪೆಯಾಗಿ ನಿರ್ವಹಿಸಿ ಸರಕಾರದ ಅನುದಾನವನ್ನು ಕೊಳ್ಳೆ ಹೊಡೆಯುವ ಮೂಲಕ ಭಾರೀ ಭಷ್ಟಾಚಾರ ನಡೆಸಿದ್ದಾರೆ. ಈ ಕಾಮಗಾರಿಗಳ ಪೈಕಿ ಕೆಲ ಕಾಮಗಾರಿಗಳು ನಡೆಯದಿದ್ದರೂ ಬಿಲ್ ಮಾಡಿರುವುದು, ಒಂದೇ ಕಾಮಗಾರಿಗೆ ಎರಡೆರೆಡು ಬಾರಿ ಬಿಲ್ ಮಾಡಿ ಭಾರೀ ಭ್ರಷ್ಟಾಚಾರ ಮಾಡಿರುವುದು ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳಿಂದ ಬಹಿರಂಗವಾಗಿದೆ ಎಂದು ಹೇಳಿದರು.

ನಗರದ ಜ್ಯೋತಿನಗರದಲ್ಲಿರುವ ಐಡಿಎಸ್‍ಜಿ ಸರಕಾರಿ ಕಾಲೇಜು ಮೈದಾನದಲ್ಲಿರುವ ಹೆಲಿಪ್ಯಾಡ್‍ಗೆ ತೆರಳುವ ರಸ್ತೆ ಡಾಂಬರೀಕರಣಕ್ಕೆಂದು ಇಲಾಖೆಯಿಂದ 25 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಈ ಕಾಮಗಾರಿಯನ್ನು ನಡೆಸದೇ ಅಧಿಕಾರಿಗಳು ಬಿಲ್ ಮಾಡಿದ್ದಾರೆ. 25 ಲಕ್ಷ ರೂ. ಕಾಮಗಾರಿ ಪೈಕಿ ಚೆನ್ನಕೇಶವಯ್ಯ ಎಂಬ ಗುತ್ತಿಗೆದಾರನ ಹೆಸರಿಗೆ 21,70,512 ರೂ. ಬಿಲ್ ಮಾಡಲಾಗಿದೆ. ಅಸಲಿಗೆ ಐಡಿಎಸ್‍ಜಿ ಕಾಲೇಜು ಮೈದಾನದಲ್ಲಿರುವ ಹೆಲಿಪ್ಯಾಡ್‍ಗೆ ಹೋಗುವ ರಸ್ತೆ ಇಂದಿಗೂ ಕಚ್ಛಾ ರಸ್ತೆಯೇ ಇದ್ದು, ಕಾಮಗಾರಿಯನ್ನೇ ನಡೆಸದೇ ಬಿಲ್ ಪಾವತಿಸಲಾಗಿದೆ. ಅಲ್ಲದೇ ಕಾಲೇಜು ಪ್ರಾಂಶುಪಾಲರು ಈ ರಸ್ತೆ ಕಾಮಗಾರಿ ನಡೆಸಿರುವ ಬಗ್ಗೆ ತಮಗೆ ಯಾವುದೇ ಮಾಹಿತಿಯೇ ಇಲ್ಲ ಎಂದು ದೃಢೀಕರಣ ಪತ್ರವನ್ನೂ ನೀಡಿದ್ದಾರೆ ಎಂದರು.

ಈ ಕಾಮಗಾರಿ ನಡೆದಿರುವ ಬಗ್ಗೆ ಇಲಾಖೆ ಅಧಿಕಾರಿಗಳು ಮಾಹಿತಿ ಹಕ್ಕಿನಡಿ ದಾಖಲೆಗಳನ್ನು ನೀಡಿದ್ದು, ಅಧಿಕಾರಿಗಳನ್ನು ಕೇಳಿದರೆ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದು ಉತ್ತರ ನೀಡುತ್ತಿದ್ದಾರೆ. ಆದರೆ ರಸ್ತೆ ಕಾಮಗಾರಿ ಮಾಡದೇ ಬಿಲ್ ಮಾಡಿರುವ ಅಧಿಕಾರಿಗಳು 21 ಲಕ್ಷಕ್ಕೂ ಹೆಚ್ಚು ಹಣವನ್ನು ಲೂಟಿ ಮಾಡಿದ್ದಾರೆಂದು ರಸೂಲ್ ಖಾನ್ ದಾಖಲೆಗಳು ಹಾಗೂ ರಸ್ತೆ ಕಾಮಗಾರಿ ಮಾಡದಿರುವ ಸ್ಥಳದ ಭಾವಚಿತ್ರಗಳನ್ನು ಪ್ರದರ್ಶಿಸಿ ಆರೋಪಿಸಿದರು. 25 ಲಕ್ಷ ರೂ. ವೆಚ್ಚದ ಕಾಮಗಾರಿ ಪೈಕಿ 21 ಲಕ್ಷ ರೂ. ಅನ್ನು ಚೆನ್ನಕೇಶವಯ್ಯ ಎಂಬ ಗುತ್ತಿಗೆದಾರರ ಹೆಸರಿಗೆ ಬಿಲ್ ಮಾಡಲಾಗಿದ್ದು, ಕಾಮಗಾರಿ ನಡೆಯದಿರುವ ಬಗ್ಗೆ ಈ ಗುತ್ತಿಗೆದಾರರನ್ನು ವಿಚಾರಿಸಿದರೆ ಅವರು, ನನಗೆ ಈ ಕಾಮಗಾರಿ ಬಗ್ಗೆ ಮಾಹಿತಿಯೇ ಇಲ್ಲ. ನನ್ನ ಹೆಸರಿಗೆ ಬಿಲ್ ಆಗಿರುವುದೂ ಗೊತ್ತಿಲ್ಲ ಎಂದು ಹೇಳುತ್ತಿದ್ದು, ಇಲಾಖಾಧಿಕಾರಿಗಳು ಸರಕಾರದ ಅನುದಾನವನ್ನು ಸಂಪೂರ್ಣವಾಗಿ ಲೂಟಿ ಮಾಡಿದ್ದಾರೆ ಎಂದರು.

ಐಡಿಎಸ್‍ಜಿ ಕಾಲೇಜು ಹಿಂಭಾಗದ ಆಟದ ಮೈದಾನದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಾಣಕ್ಕೆಂದು 3 ಲಕ್ಷ ರೂ. ಖರ್ಚು ಮಾಡಲಾಗಿದ್ದು, ತಾತ್ಕಾಲಿಕ ಹೆಲಿಪ್ಯಾಡ್‍ಗೆ 3 ಲಕ್ಷ ರೂ. ಬಿಲ್ ಮಾಡುವ ಮೂಲಕ ಅನುದಾನವನ್ನು ದುರ್ಬಳಕೆ ಮಾಡಲಾಗಿದೆ. ಅಲ್ಲದೇ ಹೆಲಿಪ್ಯಾಡ್ ಸಮೀಪ ಬ್ಯಾರಿಕೇಡ್ ನಿರ್ಮಾಣಕ್ಕೆ 2 ಲಕ್ಷ ರೂ. ಬಿಲ್ ಮಾಡಿ ಅದರಲ್ಲೂ ಹಣವನ್ನು ಲೂಟಿ ಮಾಡಲಾಗಿದೆ ಎಂದು ಆರೋಪಿಸಿದ ರಸೂಲ್‍ಖಾನ್, ಐಡಿಎಸ್‍ಜಿ ಕಾಲೇಜಿನಲ್ಲಿರುವ ಶೌಚಾಲಯ ದುರಸ್ತಿಗೆಂದು 1.5 ಲಕ್ಷ ರೂ. ಬಿಲ್ ಮಾಡಲಾಗಿದೆ. ಆದರೆ ಕಾಲೇಜು ಶೌಚಾಲಯದಲ್ಲಿ ಯಾವುದೇ ದುರಸ್ತಿ ಕೆಲಸ ಮಾಡಿಲ್ಲ ಎಂದು ಅವರು ದೂರಿದರು.

ಸರಕಾರಿ ಅನುದಾನಗಳಲ್ಲಿ ಭ್ರಷ್ಟಾಚಾರ ಮಾಡಿರುವ ಬಗ್ಗೆ ಲೋಕಾಯುಕ್ತ, ಎಸಿಬಿ ಸೇರಿದಂತೆ ಸರಕಾರದ ಕಾರ್ಯದರ್ಶಿ ಮತ್ತು ಲೋಕೋಪಯೋಗಿ ಇಲಾಖೆಯ ಪ್ರಾದೇಶಿಕ ಕಚೇರಿ ಕಾರ್ಯದರ್ಶಿಗಳಿಗೂ ದೂರು ನೀಡಲಾಗಿದೆ. ಈ ಅವ್ಯವಹಾರ ಸಂಬಂಧ ಸರಕಾರ ತನಿಖೆ ನಡೆಸಿ ತಪ್ಪಿತಸ್ಥರ ಅಧಿಕಾರಿಗಳು, ಇಂಜಿನಿಯರ್ ಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ರಸೂಲ್ ಖಾನ್ ಇದೇ ವೇಳೆ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News